ಬಂಟ್ವಾಳ : ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರಿಗೆ ಕೊರೋನಾ ಫಾಸಿಟಿವ್ ಧೃಡಪಟ್ಟಿರುವುದು, ಪೊಲೀಸ್ ಇಲಾಖೆ ಸೇರಿದಂತೆ ತಾಲೂಕಿನ ಜನತೆಯನ್ನು ಆತಂಕಕ್ಕೀಡುಮಾಡಿದೆ.
ಪೊಲೀಸ್ ಸಿಬ್ಬಂದಿಗೆ ಹೇಗೆ ಬಂತು..?
ಮೇ.೧೫ರಂದು ಬೆಳಗ್ಗಿನ ಜಾವ ವಿಟ್ಲಕ್ಕೆ ಮಹಾರಾಷ್ಟ್ರದ ರಾಯಗಡದಿಂದ ಕರೋಪಾಡಿ ಗ್ರಾಮದ ವ್ಯಕ್ತಿ ಆಗಮಿಸಿದ್ದಾರೆ. ವಿಟ್ಲದಲ್ಲಿ ತನಗೆ ಕ್ವಾರಂಟೈನ್ ಎಲ್ಲಿ ಎಂಬುದರ ಅರಿವಿಲ್ಲದ ಕಾರಣ ನೇರವಾಗಿ ವಿಟ್ಲ ಪೊಲೀಸ್ ಠಾಣೆಗೆ ಬಂದಿದ್ದಾನೆ. ಅಲ್ಲಿದ್ದ ಕಾನ್ಸ್ಟೇಬಲ್ ಬಳಿಯಲ್ಲಿ ತನ್ನನ್ನ ಕ್ವಾರಂಟೈನ್ ಗೆ ಒಳಪಡಿಸುವಂತೆ ಕೇಳಿಕೊಂಡಿದ್ದಾನೆ. ವ್ಯಕ್ತಿಯ ಕೈಯಲ್ಲಿದ್ದ ಆಧಾರ್ ಕಾರ್ಡ್ ಹಾಗೂ ಮೊಬೈಲ್ ನ್ನು ಠಾಣೆಯಲ್ಲಿದ್ದ ಕಾನ್ ಸ್ಟೇಬಲ್ ವೊಬ್ಬರು ಪಡೆದುಕೊಂಡು, ಹೆಡ್ ಕಾನ್ ಸ್ಟೇಬಲ್ ಗೆ ನೀಡಿದ್ದಾರೆ.
ಮೂರುದಿನಗಳ ಬಳಿಕ ಮೇ.೧೮ರಂದು ಮುಂಬೈಯಿಂದ ಬಂದ ವ್ಯಕ್ತಿಗೆ ಕೊರೊನಾ ಇದೆ ಎಂಬುದು ದೃಢ ಪಟ್ಟಿತ್ತು. ಇದಾದ ಬೆನ್ನಲ್ಲೇ ಜಾಗೃತ ಗೊಂಡ ಇಲಾಖೆ ವಿಟ್ಲ ಠಾಣೆಯ ಇಬ್ಬರು ಸಿಬ್ಬಂದಿಗಳನ್ನು ಗೃಹ ದಿಗ್ಬಂದನಕ್ಕೆ ಒಳಪಡಿಸಲಾಗಿತ್ತು ಮತ್ತು ಓರ್ವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಅವರಿಗೆ ಕೊರೋನಾ ಪಾಸಿಟಿವ್ ಎಂದು ವರದಿ ಬಂದಿದೆ. ಇದರಿಂದ ವಿಟ್ಲದ ಜನತೆ ಆತಂಕದಲ್ಲಿ ದಿನದೂಡುತ್ತಿದ್ದಾರೆ.
ವಿಟ್ಲ ಠಾಣೆ 48 ಗಂಟೆ ಬಂದ್..!
ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ಸೈನಿಟೈಸರ್ ಮಾಡಲಾಗಿದ್ದು, ಎರಡು ದಿನಗಳ ಕಾಲ ಬಂದ್ ಆಗಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಠಾಣೆಯ ಸುಮಾರು ೧೩ ಸಿಬ್ಬಂದಿಗಳು ಸೇರಿ ೨೦ ಜನರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಾಲಿನಿ ನೇತೃತ್ವದಲ್ಲಿ ಸಿಬ್ಬಂದಿಗಳು ವಿಟ್ಲ ಠಾಣೆಯನ್ನು ಸ್ಯಾನಿಟೈರಸರ್ ನಡೆಸಿ ಸ್ವಚ್ಚ ಮಾಡುವ ಕಾರ್ಯ ಮಾಡಿದರು. ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವೇದಾವತಿ ಅವರ ತಂಡ ಪ್ರಾಥಮಿಕ ಸಂಪರ್ಕಕ್ಕೆ ಬಂದ ವಿಟ್ಲ ಎಸೈ ಸಹಿತ ಸೇರಿ ೧೩ ಸಿಬ್ಬಂದಿಗಳನ್ನು ಹಾಗೂ ನೇರ ಸಂಪರ್ಕ್ಕಕ್ಕೆ ಬಂದ ೭ ಮಂದಿ ಹೊರಗಿನವರನ್ನು ಕ್ವಾರಂಟೈನ್ ಮಾಡುವ ಕಾರ್ಯ ಮಾಡಿದರು.
ವಿಟ್ಲ ಸಿಪಿಸಿಆರ್‌ಐ ನಲ್ಲಿರುವ ಅತಿಥಿ ಗೃಹ, ಪೊಲೀಸ್ ವಸತಿ ಸಮುಚ್ಚಯ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪೊಲೀಸರನ್ನು ಹಾಗೂ ನೇರ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ನಲ್ಲಿ ಇಡಲಾಗುತ್ತಿದೆ.