ಬೆಳ್ತಂಗಡಿ: ದೇಶದಲ್ಲಿದ್ದುಕೊಂಡು ದೇಶದ ವಿರುದ್ಧ ಮಾತನಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ದೇಶದಲ್ಲಿ ಹಿಂದು ಧರ್ಮ ಕೆಟ್ಟದ್ದು, ಹಿಂದು ಧರ್ಮದವರು ಕೆಟ್ಟವರು ಎಂದು ಜಾಹೀರಾತುಗಳನ್ನು ಬಳಸಿಕೊಂಡು ಬಿಂಬಿಸುವ ಯತ್ನ ಮಾಡಲಾಗುತ್ತಿದೆ. ಗೋಹತ್ಯೆ, ಮತಾಂತರ, ಲವ್ ಜೆಹಾದ್ ಮೊದಲಾದ ಷಡ್ಯಂತ್ರದಿಂದ ನಮ್ಮ ಶ್ರದ್ದೆಯನ್ನು ವಿಚಲಿತಗೊಳಿಸುವ ಹುನ್ನಾರ ನಡೆಯುತ್ತಿದೆ ಎಂದು ಧರ್ಮಜಾಗರಣ ಪ್ರಾಂತ ಸಹ ಸಂಯೋಜಕ ಪ್ರಕಾಶ್ ಮಲ್ಪೆ ತಿಳಿಸಿದರು.
ಅವರು ವಿಶ್ವ ಹಿಂದೂ ಪರಿಷತ್, ಭಜರಂಗದಳ ಬೆಳ್ತಂಗಡಿ ಮತ್ತು ವೇಣೂರು ಪ್ರಖಂಡ ಇದರ ವತಿಯಿಂದ ಅಕ್ರಮ ಗೋಸಾಗಾಟ, ಗೋ ಕಳ್ಳತನ, ಲವ್ ಜೆಹಾದ್, ಮತಾಂತರ ಇವುಗಳ ವಿರುದ್ದ ಸೂಕ್ತ ಕಾನೂನು ರಚಿಸುವಂತೆ ಒತ್ತಾಯಿಸಿ ನ.30 ರಂದು ಬೆಳ್ತಂಗಡಿ ಮಿನಿ ವಿಧಾನಸೌಧ ಆವರಣದಲ್ಲಿ ಬೃಹತ್ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಇತರ ದೇಶಗಳಲ್ಲಿ ಮತಾಂತರ ಎಂದರೆ ಕೇವಲ ಧರ್ಮವನ್ನಷ್ಟೇ ಬದಲಾವಣೆ ಮಾಡುವುದು. ಆದರೆ ಭಾರತದಲ್ಲಿ ಹಿಂದು ಎಂದರೆ ಅದು ಜೀವನ ಕ್ರಮ. ಆದ್ದರಿಂದ ಇಲ್ಲಿ ಧರ್ಮ ಬದಲಾವಣೆ ಎಂದರೆ ಜೀವನ ಪದ್ದತಿಯೇ ಬದಲಾದಂತೆ. ಸಂಸ್ಕೃತಿ ಹಾಗೂ ದೈನಂದಿನ ಜೀವನದಲ್ಲಿ ಮಾತೃ ಭಾವದಿಂದ ಕಾಣುವುದು ಹಿಂದೂ ಸಂಸ್ಕೃತಿ. ಇದನ್ನು ಮುರಿಯುವ ಷಡ್ಯಂತ್ರ ಎಲ್ಲೆಡೆ ಗೋಚರಿಸುತ್ತಿದೆ. ಭೂಮಿ, ಗೋವು ಮೊದಲಾದವುಗಳನ್ನು ಮಾತೃವೆಂದು ಭಾವಿಸಿ ಪೂಜಿಸುತ್ತೇವೆ. ಆದರೆ ಈ ಉತ್ತಮ ಸಂಸ್ಕ್ರತಿಗೆ ಹಾನಿ ಮಾಡುವ ಶಕ್ತಿಗಳ ಬಗ್ಗೆ ಎಚ್ಚರ ವಹಿಸಬೇಕಾದ ಅಗತ್ಯವಿದೆ. ಹಿಂದೂ ಧರ್ಮದವರು ಇತರರಿಗೆ ಸಮಸ್ಯೆ ಉಂಟು ಮಾಡುತ್ತಿದ್ದಾರೆ ಎಂಬ ರೀತಿಯಲ್ಲಿ ಬಿಂಬಿಸುವ ಮೂಲಕ ಮನೆ ಮನೆಗಳಿಗೆ ಹಿಂದು ಧರ್ಮ ಕೆಟ್ಟದ್ದು ಎಂಬಂತೆ ಚಿತ್ರಿಸಲಾಗುತ್ತಿದೆ. ಆಂಧ್ರ, ತೆಲಂಗಾಣ, ತಮಿಳುನಾಡು ಸೇರಿ ಸುಮಾರು 19 ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಮಾಡಲಾಗಿದೆ. ರಾಜ್ಯದಲ್ಲೂ ನಿಷೇಧವಾಗಬೇಕಿದೆ ಎಂದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯಾಧ್ಯಕ್ಷ ಭಾಸ್ಕರ ಧರ್ಮಸ್ಥಳ ಮಾತನಾಡಿದರು. ಅಧ್ಯಕ್ಷತೆಯನ್ನು ಹಿಂದೂ ಜಾಗರಣ ವೇದಿಕೆ ತಾಲೂಕು ಅಧ್ಯಕ್ಷ ಪದ್ಮನಾಭ ಶೆಟ್ಟಿಗಾರ್ ವಹಿಸಿದ್ದರು.
ಜಿಲ್ಲಾ ಗೋರಕ್ಷಾ ಪ್ರಮುಖ್ ಮಹೇಶ್ ಬಜತ್ತೂರು, ವಿ.ಎಚ್.ಪಿ. ಜಿಲ್ಲಾ ಸಹ ಕಾರ್ಯದರ್ಶಿ ನವೀನ್ ನೆರಿಯ, ತಾಲೂಕು ಕಾರ್ಯದರ್ಶಿ ಮೋಹನ್ ಬೆಳ್ತಂಗಡಿ, ಉಪಾಧ್ಯಕ್ಷರಾದ ಶ್ರೀನಿವಾಸ್ ಗುಡಿಗಾರ್, ಗಣೇಶ್ ಕಳೆಂಜ, ಧರ್ಮ ಜಾಗರಣ ಪ್ರಾಂತ ಪರಿಯೋಜನಾ ಪ್ರಮುಖ್ ದಿನಕರ ಅದೇಲು, ಬಜರಂಗದಳ ತಾಲೂಕು ಸಂಯೋಜಕ ಸಂತೋಷ್ ಅತ್ತಾಜೆ, ಸಹ ಸಂಯೋಜಕ ರಮೇಶ್ ಧರ್ಮಸ್ಥಳ, ಜಿಲ್ಲಾ ಸಹ ಗೋರಕ್ಷಾ ಪ್ರಮುಖ್ ರಾಮ್ ಪ್ರಸಾದ್, ತಾಲೂಕು ಗೋರಕ್ಷಾ ಪ್ರಮುಖ್ ದಿನೇಶ್ ಚಾರ್ಮಾಡಿ, ವಿಶ್ವ ಹಿಂದೂ ಪರಿಷತ್, ಜಗರಂಗದಳ ಮತ್ತು ಸಹ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.
ಬೆಳ್ತಂಗಡಿ ಪ್ರಖಂಡ ಅಧ್ಯಕ್ಷ ಸುಬ್ರಹ್ಮಣ್ಯ ಕುಮಾರ್ ಅಗರ್ತ ಸ್ವಾಗತಿಸಿ, ವೇಣೂರು ಪ್ರಖಂಡ ಅಧ್ಯಕ್ಷ ಶಶಾಂಕ ಭಟ್ ವಂದಿಸಿದರು.
ಪ್ರತಿಭಟನಾ ಸಭೆಯ ಬಳಿಕ ಬೆಳ್ತಂಗಡಿ ತಹಸೀಲ್ದಾರರ ಮೂಲಕ ಕರ್ನಾಟಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು.