ಬೆಳ್ತಂಗಡಿ: ತುಳುನಾಡನ್ನಾಳಿದ ವಿವಿಧ ಅರಸುಮನೆತನಗಳ ಪೈಕಿ ಅಜಿಲ ವಂಶದ ಅರಸರು ಈ ಪ್ರದೇಶದ ಇತಿಹಾಸ ಮತ್ತು ಸಂಸ್ಕøತಿಗೆ ಹಲವಾರು ಮಹತ್ವದ ಕೊಡುಗೆಗಳನ್ನಿತ್ತಿದ್ದಾರೆ. ವೇಣೂರು ಈ ಅರಸು ಮನೆತನದ ರಾಜಧಾನಿಯಾಗಿದ್ದರೂ ಅಜಿಲವಂಶದ ಅರಸು ಮನೆತನದವರು ಇಂದಿಗೂ ಅಳದಂಗಡಿಯ ಅರಮನೆಯಲ್ಲಿ ವಾಸವಾಗಿದ್ದಾರೆ. ಪ್ರಸ್ತುತ 24 ನೆಯ ಅರಸರಾಗಿ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು ಪಟ್ಟಾಭಿಷಿಕ್ತರಾಗಿದ್ದಾರೆ. ಇವರು ಪಟ್ಟಾಭಿಷಿಕ್ತರಾಗಿ ಡಿ. 1ಕ್ಕೆ 25 ವರ್ಷಗಳಾಗಿವೆ. ಇದರ ನೆನಪಿಗಾಗಿ ಅಳದಂಗಡಿ ಅರಮನೆಯಲ್ಲಿ ಮಂಗಳವಾರ ಸಂಭ್ರಮದ ರಜತ ಮಹೋತ್ಸವವನ್ನು ಆಚರಿಸಲಾಯಿತು. ಬೆಳ್ತಂಗಡಿ ತಾಲೂಕಿನ ಅಳದಂಗಡಿಯು ಧಾರ್ಮಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು ಎಂಬುದನ್ನು ಇತಿಹಾಸ ಹೇಳುತ್ತದೆ. ಅದು ಡಾ. ಪದ್ಮಪ್ರಸಾದರ ಅಜಿಲ ಹಾಗು ಅವರ ಸಹೋದರ ಶಿವಪ್ರಸಾದ ಅಜಿಲರ ನೇತೃತ್ವದಲ್ಲಿ ಈಗಲೂ ಮುಂದುವರಿಯುತ್ತಿದೆ.
ಪಾಂಡ್ಯಪ್ಪರಸರಾದ ಕೃಷ್ಣರಾಜ ಅಜಿಲರ ನಿಧನಾನಂತರ ಅಂದರೆ 1995ರ ಡಿ. 1 ರಂದು ಅವರ ಹಿರಿಯ ಪುತ್ರ ಡಾ. ಪದ್ಮಪ್ರಸಾದ್ಅಜಿಲರಿಗೆ ಅಳದಂಗಡಿಯಲ್ಲಿ ಪಟ್ಟಾಭಿಷೇಕ ನಡೆಸಲಾಯಿತು. ಅಳದಂಗಡಿ ಅಜಿಲ ವಂಶದ ಈಗಿನ ಪಟ್ಟದ ದೊರೆ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ಅಜಿಲರು ವೃತ್ತಿಯಲ್ಲಿ ವೈದ್ಯರು. ಬಿಎಎಮ್ಎಸ್ ಪದವೀಧರರಾದ ಇವರು ಅಜಿಲ ಅರಸ ಪರಂಪರೆಯಲ್ಲಿ 24ನೇಯವರು. ಇಂದಿಗೂ ವೈದ್ಯ ಸೇವೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಕೇಳ ಹಾಗೂ ವೇಣೂರು ಅರಮನೆ ನಾಶವಾಗಿದ್ದು, ಬರಾಯ ಅರಮನೆಯ ಜೀರ್ಣೋದ್ಧಾರಗೊಳಿಸಿ ಇಂದಿಗೂ ಪರಂಪರೆಯನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ತನ್ನ ಸೀಮೆಯ ದೇವಾಲಯಗಳು, ಬಸದಿಗಳು, ದೈವಸ್ಥಾನಗಳ ಪ್ರತಿಯೊಂದು ಕಾರ್ಯಕ್ರಮದಲ್ಲಿ ಅತೀ ಉತ್ಸಾಹದಲ್ಲಿ ಪಾಲ್ಗೊಂಡು ಸಂಸ್ಕೃತಿ, ಆಚಾರ ವಿಚಾರಗಳನ್ನು ಉಳಿಸಿಕೊಂಡು ಮಾದರಿ ಎನಿಸಿಕೊಂಡಿದ್ದಾರೆ. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಹಿರಿಯ ಪುತ್ರ ಪ್ರತೀಕ್ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದರೆ, ಮತ್ತೋರ್ವ ಪುತ್ರ ಪ್ರೌಷ್ಠಿಲ್ ಅಧ್ಯಯನ ನಡೆಸುತ್ತಿದ್ದಾರೆ.
ಪಟ್ಟಾಭಿಷೇಕ ರಜತ ಮಹೋತ್ಸವದ ಸಂಭ್ರಮದಲ್ಲಿರುವ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲರಿಗೆ ನೂರಾರು ಗಣ್ಯರು ಗೌರವಾರ್ಪಣೆ ಸಲ್ಲಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಶುಭ ಸಂದೇಶದೊಂದಿಗೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಅವರು ಡಾ.ಪದ್ಮಪ್ರಸಾದ ಅಜಿಲರಿಗೆ ಗೌರವಾರ್ಪಣೆ ಸಲ್ಲಿಸಿದರು.
ಶಾಸಕ ಹರೀಶ್ ಪೂಂಜ, ಮಾಜಿ ಎಂಎಲ್ಸಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕ ಕೆ.ಪ್ರಭಾಕರ ಬಂಗೇರ, ಮೂಡುಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಮೋಹನ್ ಆಳ್ವ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ, ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಜಿಪಂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಮಮತಾ ಎಂ.ಶೆಟ್ಟಿ, ತಾಪಂ ಸದಸ್ಯ ಸುಧೀರ್ ಸುವರ್ಣ, ಉದ್ಯಮಿಗಳಾದ ಶಶಿಧರ ಶೆಟ್ಟಿ ನವಶಕ್ತಿ, ಪದ್ಮಶೇಖರ್ ಜೈನ್, ಪಡ್ಯಾರಬೆಟ್ಟು ಕೊಡಮಣಿತ್ತಾಯ ದೈವಸ್ಥಾನದ ಆಡಳ್ತೆ ಮೊಕ್ತೇಸರ ಜೀವಂಧರ್ ಜೈನ್, ಅಳದಂಗಡಿ ಚರ್ಚ್ ಧರ್ಮಗುರು ಅನಿಲ್ ಲೋಬೋ, ಧರ್ಮಾಧಿಕಾರಿ ಡಾ. ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ ಮೊದಲಾದ ಗಣ್ಯರುಗಳು,
ಪಟ್ಟಾಭಿಷೇಕ ರಜತ ಸಂಭ್ರಮಾಚರಣೆ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಸಾರ್ವಜನಿಕರು ಗೌರವ ಸಲ್ಲಿಸಿದರು.