ಬೆಳ್ತಂಗಡಿ: ನಾಡಿನ ಪುಣ್ಯ ಕ್ಷೇತ್ರವಾಗಿರುವ ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಕಾರ್ತಿಕ ಮಾಸದ ಲಕ್ಷದೀಪೋತ್ಸವ, ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಡಿ.10ರಿಂದ ಡಿ.14ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗು ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನಗಳ 88ನೇ ಅಧಿವೇಶನ ನೆರವೇರಲಿದೆ.
* ಉತ್ಸವ- ಸಾಂಸ್ಕೃತಿಕ ವೈಭವ: ದೀಪೋತ್ಸವವು ಸರಳವಾಗಿ ನಡೆಯಲಿದ್ದು ಡಿ.10ರಂದು ರಾತ್ರಿ 9ಗಂಟೆಗೆ ಹೊಸಕಟ್ಟೆ ಉತ್ಸವ, ಡಿ.11ರಂದು ಕೆರೆಕಟ್ಟೆ ಉತ್ಸವ, ಡಿ.12ರಂದು ಅಮೃತವರ್ಷಿಣಿ ಸಭಾಭವನದಲ್ಲಿ ಸಂಜೆ 7ರಿಂದ 8.30ರವರೆಗೆ ಜೀ ಕನ್ನಡ ಸರಿಗಮಪ ಖ್ಯಾತಿಯ ಸಾದ್ವಿನಿ ಕೊಪ್ಪ ಮತ್ತು ತಂಡದವರಿಂದ ಸುಗಮ ಸಂಗೀತ, 8.30ರಿಂದ 10ಗಂಟೆಯವರೆಗೆ ಬೆಂಗಳೂರು ಶ್ರೀ ಸತ್ಯನಾರಾಯಣ ರಾಜು ಅವರಿಂದ ರಾಮಕಥಾ ನೃತ್ಯರೂಪಕ ಭಿತ್ತಾರಗೊಳ್ಳಲಿದೆ. ರಾತ್ರಿ 9ಗಂಟೆಗೆ ಲಲಿತೋದ್ಯಾನ ಉತ್ಸವ ನಡೆಯಲಿದೆ. ಡಿ.13 ರಂದು ರಾತ್ರಿ 9ರಿಂದ ಕಂಚಿಮಾರುಕಟ್ಟೆ ಉತ್ಸವ, ಡಿ.14 ರಂದು ಗೌರಿಮಾರುಕಟ್ಟೆ ಉತ್ಸವ ನೆರವೇರಲಿದೆ.
* ಸರ್ವಧರ್ಮ ಸಮ್ಮೇಳನ: ಡಿ.13ರಂದು ಸಂಜೆ 5.30ರಿಂದ ಅಮೃತವರ್ಷಿಣಿ ಸಭಾಭವನದಲ್ಲಿ ಸರ್ವಧರ್ಮ 88 ನೇ ಅಧಿವೇಶನವನ್ನು ರಾಜ್ಯ ವಸತಿ ಸಚಿವ ವಿ. ಸೋಮಣ್ಣ ಉದ್ಘಾಟಿಸಲಿದ್ದಾರೆ. ಶ್ರೀಕ್ಷೇತ್ರ ಕನಕಗಿರಿ ಜೈನಮಠದ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಅಧ್ಯಕ್ಷತೆ ವಹಿಸಲಿದ್ದಾರೆ. ಸೃಷ್ಟಿ ಮಣಿಪಾಲ್ ಇನ್ಸಿಟ್ಯೂಟ್ (ಎಸ್.ಎಂ.ಐ) ಬೆಂಗಳೂರು ಇದರ ಭೋದಕ ಮತ್ತು ಖ್ಯಾತ ಕಥೆಗಾರ ಕೇಶವ ಮಳಗಿ, ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಹೌಸ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಫಾ| ಚೇತನ್ ಲೊಬೋ ಉಪನ್ಯಾಸ ನೀಡಲಿದ್ದಾರೆ. ರಾತ್ರಿ 8ರಿಂದ 10ಗಂಟೆಯವರೆಗೆ ಸಂಗೀತ ಕಲಾರತ್ನ ಡಾ| ಆರ್. ಮಂಜುನಾಥ ಮತ್ತು ತಂಡದವರಿಂದ ಸ್ಯಾಕ್ಸೋಫೋನ್ ವಾದನ ನಡೆಯಲಿದೆ.
* ಸಾಹಿತ್ಯ ಸಮ್ಮೇಳನ
ಡಿ.14ರಂದು ಸಂಜೆ 5.30ರಿಂದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನವನ್ನು ಬೆಂಗಳೂರಿನ ವಿಶ್ರಾಂತ ಪ್ರಾಧ್ಯಾಪಕ, ಹಿರಿಯ ವಿದ್ವಾಂಸ ವೇದಭೂಷಣ ಡಾ| ಎಸ್. ರಂಗನಾಥ್ ಉದ್ಘಾಟಿಸಲಿದ್ದು, ಬೆಂಗಳೂರು ಹಿರಿಯ ಸಾಹಿತಿ ಹಾಗೂ ಖ್ಯಾತ ವಿಮರ್ಶಕ ಡಾ| ನರಹಳ್ಳಿ ಬಾಲಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಮೈಸೂರು ಪ್ರಾಧ್ಯಾಪಕ, ಸಂಸ್ಕೃತ ಚಿಂತಕ ಡಾ| ಜ್ಯೋತಿ ಶಂಕರ್, ಮೂಡುಬಿದಿರೆ ವಿಶ್ರಾಂತ ಉಪನ್ಯಾಸಕ, ಇತಿಹಾಸ ಸಂಶೋಧಕ ಡಾ| ಪುಂಡಿಕಾಯಿ ಗಣಪಯ್ಯ ಭಟ್ ಉಪನ್ಯಾಸ ನೀಡಲಿದ್ದಾರೆ.
ರಾತ್ರಿ 8ರಿಂದ 9.30ರವರೆಗೆ ನೃತ್ಯ ನಿಕೇತನ ಕೊಡವೂರು ಕಲಾವಿದರ ಪ್ರಸ್ತುತಿಯಲ್ಲಿ ಡಾ| ಶ್ರೀಪಾದ್ ಭಟ್ ನಿರ್ದೇಶನದಲ್ಲಿ ವಿದ್ವಾನ್ ಸುಧೀರ್ ಕೊಡವೂರು, ವಿದುಷಿ ಮಾನಸಿ ಸುಧೀರ್, ವಿದುಷಿ ಅನಘಶ್ರೀ ನೃತ್ಯ ನಿರ್ದೇಶನದಲ್ಲಿ ನಾರಸಿಂಹ ನೃತ್ಯರೂಪಕ (ಒಳಿತಿನ ವಿಜಯದ ಕಥನ) ನಡೆಯಲಿದೆ.
ಡಿ.15ರಂದು ಸಂಜೆ 6.30ರಿಂದ ಮಹೋತ್ಸವ ಸಭಾಭವನದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜಾ ಕಾರ್ಯಕ್ರಮ ನಡೆಯಲಿದೆ.
ಅಗತ್ಯ ಕ್ರಮಗಳೊಂದಿಗೆ ಸರಕಾರದ ನಿಯಮಗಳಂತೆ ದೀಪೋತ್ಸವ ಸರಳವಾಗಿ ಆಚರಣೆಗೊಳ್ಳಲಿದೆ. ಈ ಪ್ರಯುಕ್ತ ಶ್ರೀಕ್ಷೇತ್ರದಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು *ಶ್ರೀ ಕ್ಷೇತ್ರ ಧರ್ಮಸ್ಥಳ* ಎಂಬ ಯೂಟ್ಯೂಬ್ ಮತ್ತು ಫೇಸ್ಬುಕ್ಗಳಲ್ಲಿ ನೇರ ವೀಕ್ಷಣೆಗೆ ಕ್ಷೇತ್ರದಿಂದ ಅವಕಾಶ ಮಾಡಲಾಗಿದೆ.
♦