ಬೆಳ್ತಂಗಡಿ: ಕೊರೋನಾ ಕಾರಣದಿಂದ ಕ್ಷೇತ್ರದಲ್ಲಿ ನಡೆಯುವ ಲಕ್ಷದೀಪೋತ್ಸವದ ಸಂದರ್ಭ ಸರಕಾರದ ಎಲ್ಲಾ ನಿಯಮಾವಳಿಗಳನ್ನು ಪಾಲಿಸಲಾಗುವುದು. ರಾಜ್ಯ ಮಟ್ಟದ ವಸ್ತು ಪ್ರದರ್ಶನ ಈ ಬಾರಿ ಇರುವುದಿಲ್ಲಾ. ಸರ್ವ ಧರ್ಮ ಮತ್ತು ಸಾಹಿತ್ಯ ಸಮ್ಮೇಳನಗಳನ್ನು ಅಂತರ್ಜಾಲದ ಮೂಲಕ ವೀಕ್ಷಿಸಲು ಏರ್ಪಾಡು ಮಾಡಿಕೊಂಡಿದ್ದೇವೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.
ನಮ್ಮ ಧರ್ಮಸ್ಥಳ ಕ್ಷೇತ್ರದಲ್ಲಿ ವಾರ್ಷಿಕವಾಗಿ ನಡೆಯುವ ಲಕ್ಷದೀಪೋತ್ಸವ ಸೇವೆಯೆಂದರೆ ಬಹು ನಿರೀಕ್ಷಿತವಾಗಿರುವ ಉತ್ಸವ. ನಮ್ಮ ಕ್ಷೇತ್ರದ ಭಕ್ತರು ಬಹಳ ನಿರೀಕ್ಷೆ ಮಾಡುವ ಎರಡು ಕಾರ್ಯಕ್ರಮ ಒಂದು ಲಕ್ಷದೀಪೋತ್ಸ, ಇನ್ನೊಂದು ಶಿವರಾತ್ರಿ. ಹಾಗಾಗಿ ಡಿ.10ರಿಂದ ಕಾರ್ತಿಕ ಮಾಸದ ಕೊನೆಯ ಐದು ದಿನಗಳಲ್ಲಿ ಈ ಕಾರ್ಯಕ್ರಮ ನಡೆಯುತ್ತದೆ. ಅದರಲ್ಲಿ ವಿಶೇಷವಾಗಿ ಶ್ರೀ ಮಂಜುನಾಥ ಸ್ವಾಮಿಯ ವಿಹಾರ ಎಂದು ನಾವು ಹೇಳುತ್ತೇವೆ. ದೇವರು ದೇವಸ್ಥಾನದ ಹೊರಗೆ ಬಂದು ರಾಜಬೀದಿಯಲ್ಲಿ ಭಕ್ತರಿಗೆ ದರ್ಶನ ಕೊಡುತ್ತಾ, ಹೊಸಕಟ್ಟೆ, ಲಲಿತ್ಯೋದ್ಯಾನ, ಕೆರೆಕಟ್ಟೆ, ಕಂಚಿಮಾರುಕಟ್ಟೆ, ಗೌರಿಮಾರುಕಟ್ಟೆ ವಿಹಾರ ನಡೆಯಲಿದೆ. ಜನರು ಸ್ವಾಮಿಯ ದರ್ಶನಕ್ಕಾಗಿ ಇಲ್ಲಿಗೆ ಆಗಮಿಸುತ್ತಾರೆ. ರಾಜಬೀದಿಯಲ್ಲಿ ದೇವರ ಉತ್ಸವಗಳ ಮೆರವಣಿಗೆ ನಡೆಯುತ್ತದೆ ಮತ್ತು ರಥೋತ್ಸವ ನಡೆಯುತ್ತದೆ. ಹಾಗಾಗಿ ಬಹಳ ವಿಶೇಷವಾಗಿ ಜನ ಲಕ್ಷದೀಪೋತ್ಸವವನ್ನು ನಿರೀಕ್ಷೆ ಮಾಡುತ್ತಾರೆ.
ಪ್ರಸ್ತುತ ಇಲ್ಲಿ ಈ ವರ್ಷವಂತೂ ಕೊರೋನಾ ಕಾರಣದಿಂದ ಸರಕಾರದ ಎಲ್ಲಾ ಆದೇಶಗಳನ್ನು ನಾವು ಪಾಲಿಸುತ್ತಿದ್ದೇವೆ. ಮುಖ್ಯವಾಗಿ ಜನ ಸೇರಿಸಬಾರದು ನಿಯಮವಿದೆ. ಆದ್ದರಿಂದ ರಾಜ್ಯಮಟ್ಟದ ವಸ್ತಪ್ರದರ್ಶನ ಈ ಬಾರಿ ಇರುವುದಿಲ್ಲ. ಆದರೆ ಸಾಹಿತ್ಯ ಸಮ್ಮೇಳನ ಮತ್ತು ಸರ್ವಧರ್ಮ ಸಮ್ಮೇಳನ ಸರಳವಾಗಿ ನಡೆಯುತ್ತದಾದರೂ, ಅದನ್ನೂ ಆನ್ಲೈನ್ ಮೂಲಕ ಹಾಗೂ ವಾಹಿನಿಗಳ ಮೂಲಕ ನೇರ ಪ್ರಸಾರ ಮಾಡುವುದರಿಂದ, ಆದಷ್ಟು ಭಕ್ತರು ಲಕ್ಷದೀಪೋತ್ಸವಕ್ಕೆ ಆಗಮಿಸುವ ಬದಲು ಆನ್ಲೈನ್ ಮೂಲಕವೇ ನೋಡಿ. ಸ್ಥಳೀಯರಿಗೆ ಉತ್ಸವ ನೋಡಲು ಆಸಕ್ತಿ ಇರುವವರು, ಆಗಮಿಸಿ ದರ್ಶನ ಮಾಡಿ ಪ್ರಸಾದ ಸ್ವೀಕರಿಸಬಹುದು. ನಾವು ಲಕ್ಷ ದೀಪೋತ್ಸವಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇವೆ. ಕೊರೋನಾದ ಎಲ್ಲಾ ಮುಂಜಾಗರೂಕತೆ ಮಾಡಿಕೊಂಡಿದ್ದೇವೆ. ಹಾಗಾಗಿ ಎಲ್ಲರಿಗೂ ಶ್ರೀ ಮಂಜುನಾಥ ಸ್ವಾಮಿಯ ಕಾರ್ತಿಕ ದೀಪೋತ್ಸವದ ಆಶೀರ್ವಾದಗಳನ್ನು ಕೋರುತ್ತೇನೆ. ಎಲ್ಲರೂ ಮನೆಯಲ್ಲಿ ಕುಳಿತು ಸ್ವಾಮಿ ಉತ್ಸವವನ್ನು ನೋಡಿ ಎಂದು ಈ ಮೂಲಕ ಕೇಳಿಕೊಳ್ಳುತ್ತಾ ಶ್ರೀ ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸುತ್ತೇನೆ ಎಂದು ಅವರು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.