ಮಂಗಳೂರು: ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಹಿಂದೂ ಸಮಾಜದ ದಾರ್ಶನಿಕರಾಗಿದ್ದರೇ ಹೊರತು ವಿರೋಧಿಯಾಗಿರಲಿಲ್ಲ. ಅವರನ್ನು ಕೇವಲ ದಲಿತ ನಾಯಕ ಎಂದುಕೊಂಡಿರುವುದು ನಾವು ನಮಗೆ ಮಾಡಿಕೊಳ್ಳುತ್ತಿರುವ ಅನ್ಯಾಯ ಎಂದು ಕನ್ನಡ ಸಾಹಿತ್ವ ಅಕಾಡೆಮಿಯ ಅಧ್ಯಕ್ಷ ಡಾ. ಬಿ ವಿ ವಸಂತ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಅವರು ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು, ಇವುಗಳ ಸಂಯುಕ್ತಾಶ್ರಯದಲ್ಲಿ ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಸೋಮವಾರ ಆಯೋಜಿಸಲಾಗಿದ್ದ ʼಸ್ವಾವಲಂಭಿ ಭಾರತ- ಅಂಬೇಡ್ಕರ್ ಚಿಂತನೆʼ ಎಂಬ ಕಾರ್ಯಕ್ರಮದಲ್ಲಿ ವಿಶೇಷೋಪನ್ಯಾಸ ನೀಡುತ್ತಿದ್ದರು.
“ಅಂಬೇಡ್ಕರ್ ಮನುಷ್ಯೋದ್ಧಾರಕನಾಗಿದ್ದರು. ಆದರೆ ತುಳಿತಕ್ಕೆ ಒಳಗಾದ ದಲಿತರ ಏಳಿಗೆಯಿಂದ ಇದು ಸಾಧ್ಯ ಎಂದು ನಂಬಿದ್ದರು. ಅವರು ಬ್ರಾಹ್ಮಣ ವಿರೋಧಿಯೂ ಆಗಿರಲಿಲ್ಲ. ಜಾತೀಯತೆಯ ವಿರುದ್ಧವಿದ್ದ ಬ್ರಾಹ್ಮಣರನ್ನು ಪ್ರೀತಿಸಿದರು,” ಎಂದರು.
“ನಾವು ಅಂಬೇಡ್ಕರ್ ಅವರನ್ನು ಪೂಜಿಸುತ್ತೇವೆ, ಆದರೆ ಅವರ ಚಿಂತನೆಗಳನ್ನು ಪಾಲಿಸುವುದಿಲ್ಲ. ನಮ್ಮೊಳಗಿನ ನವಚೈತನ್ಯದಿಂದ, ಶಿಕ್ಷಣದಿಂದ ನವಭಾರತ ನಿರ್ಮಿಸುವುದು ಅವರ ಕನಸಾಗಿತ್ತು. ಎಲ್ಲರೂ ನಮ್ಮ ಸಂಸ್ಕೃತಿಯನ್ನು ಪ್ರೀತಿಸಿದಾಗ, ನಮ್ಮ ದೇಶಕ್ಕಾಗಿ ಬದುಕಿದಾಗ ಮಾತ್ರ ಭಾರತ ʼಆತ್ಮನಿರ್ಭರʼವಾಗುತ್ತದೆ. ಅದು ಒಂದು ಪಕ್ಷದ, ಪ್ರಧಾನಿಯ ನೀತಿಯಲ್ಲ, ಬದಲಾಗಿ ದೇಶದ ನೀತಿ,” ಎಂದು ಅಭಿಪ್ರಾಯಪಟ್ಟರು.
ಈ ಮೊದಲು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ಅಂಬೇಡ್ಕರ್ ಇಡೀ ಸಮಾಜದ ಸಮಸ್ಯೆಗಳ ಬಗ್ಗೆ ಚಿಂತಿಸಿದರು. ಚಹಾ ಮಾರುವವನೊಬ್ಬ ದೇಶದ ಪ್ರಧಾನಿಯಾಗಲು ಅವರ ಸಂವಿಧಾನ ಕಾರಣ. ಅಂಬೇಡ್ಕರ್ ಚಿಂತನೆ ವೇಳೆ, ರಾಷ್ಟ್ರೀಯ ಚಿಂತನೆಯೂ ಇರಲಿ ಎಂದು ತಿಳಿಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ, ಅಂಬೇಡ್ಕರ್ ಚಿಂತನೆಗಳ ನೆನಪಿಸಿಕೊಳ್ಳುವುದು ಮಾತ್ರವಲ್ಲ, ಅದು ನಡವಳಿಕೆಯಲ್ಲೂ ಇರಬೇಕು. ಜ್ಞಾನ ಮಾನವೀಯತೆಗೆ ಹಾದಿಯಾಗಬೇಕು ಎಂದು ಅವರು ಬಯಸಿದ್ದರು. ನೂತನ ಶಿಕ್ಷಣ ಪದ್ಧತಿ, ʼಶಿಕ್ಷಕನೇ ದೇಶದ ಭವಿಷ್ಯʼ ಎಂಬ ಅವರ ಚಿಂತನೆಗೆ ಪೂರಕವಾಗಿದೆ, ಎಂದರು.
ಮಂಗಳೂರು ಮಹಾನಗರಪಾಲಿಕೆಯ ಕಾರ್ಪೊರೇಟರ್ ಎ ಸಿ ವಿನಯರಾಜ್, ಇತಿಹಾಸ ಓದದವನಿಂದ ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ, ಎಂದು ವಿದ್ಯಾರ್ಥಿಗಳು ಅಂಬೇಡ್ಕರ್ ನ್ನು ಓದುವ ಅಗತ್ಯತೆಯನ್ನು ಒತ್ತಿಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಮಂಗಳೂರು ವಿವಿ ಕುಲಸಚಿವ ಕೆ ರಾಜು ಮೊಗವೀರ, ರಾಜ್ಯದಲ್ಲಿ ಸುಮಾರು 2- 2.5% ದಷ್ಟು ಮಕ್ಕಳು ಶಾಲೆಯಿಂದ ಹೊರಗಿದ್ದಾರೆ. ಇದಕ್ಕೆ ಹಲವು ಸಾಮಾಜಿಕ ಸಮಸ್ಯೆಗಳು ಕಾರಣವಾಗಿವೆ. ನೂತನ ಶಿಕ್ಷಣ ಪದ್ಧತಿಯ ಜಾರಿ ಈ ಸಮಸ್ಯೆಗೆ ಪರಿಹಾರವಾಗಬಹುದು ಎಂಬ ಆಶಾವಾದ ವ್ಯಕ್ತಪಡಿಸಿದರು.
ಪ್ರಾಂಶುಪಾಲ ಡಾ. ಎ ಹರೀಶ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮ ಸಂಯೋಜಕ ಡಾ. ಮಾಧವ ಎಂ.ಕೆ, ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.