ಮಂಗಳೂರು: ಕೊಂಕಣಿ ಭಾಷೆಯು ಭಾರತದ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸ್ಥಾನ ಪಡೆದಿದ್ದು, ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿ, ಜಾನಪದಗಳ ಬೆಳವಣಿಗೆಗಾಗಿ ಕರ್ನಾಟಕ ಸರ್ಕಾರವು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯನ್ನು 1994ರಲ್ಲಿ ಸ್ಥಾಪನೆ ಮಾಡಿದೆ. ಕರ್ನಾಟಕದಲ್ಲಿ ಸುಮಾರು 25 ಲಕ್ಷಕ್ಕಿಂತಲೂ ಜನರು ಕೊಂಕಣಿ ಭಾಷಿಕರಿದ್ದು, ಇಂದಿನ ದಿನಗಳಲ್ಲಿ ಆಂಗ್ಲ ವ್ಯಾಮೋಹದಿಂದ ಕೊಂಕಣಿ ಭಾಷೆ ಬಳಸುವವರ ಸಂಖ್ಯೆಯು ಕಡಿಮೆಯಾಗುತ್ತಿದ್ದು, ಇದಕ್ಕಾಗಿ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಬೇಕು ಎಂದು ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಜಗದೀಶ್ ಪೈ ಅವರು ಆಗ್ರಹಿಸಿರುವರು.
ಮಾತೃ ಭಾಷೆಯ ಶಿಕ್ಷಣವನ್ನು ಜಾರಿಗೆ ತರಲು ಸರ್ಕಾರವು ನಿರ್ಧರಿಸಿದೆ. ಇದಕ್ಕೆ ಈಗ ಕೊಂಕಣಿಯನ್ನು ಕೂಡ ಸೇರ್ಪಡೆ ಮಾಡಬೇಕು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿರುವರು.
ಮುಂದಿನ ಶೈಕ್ಷಣಿಕ ವರ್ಷದಿಂದ ಕೊಂಕಣಿ ಭಾಷೆಯಲ್ಲಿ ಶಿಕ್ಷಣವನ್ನು ಆರಂಭಿಸಬೇಕು. ಪ್ರಾಥಮಿಕ ಐದನೇ ತರಗತಿ ತನಕ ಕೊಂಕಣಿ ಮಾಧ್ಯಮದಲ್ಲಿ ಶಿಕ್ಷಣ, ಆರನೇ ತರಗತಿಯಿಂದ ಸ್ನಾತಕೋತ್ತರ ಪದವಿ ತನಕ ಕೊಂಕಣಿ ಭಾಷಾ ಕಲಿಕೆಗೆ ಅವಕಾಶ, ಡಿ.ಎಡ್-ಬಿ.ಎಡ್ ತರಗತಿಗಳಲ್ಲಿ ಕೊಂಕಣಿ ಭಾಷೆ ಅಳವಡಿಕೆ, ಕೊಂಕಣಿ ಭಾಷೆ ಶಿಕ್ಷಕರ ನೇಮಕ ಮಾಡಬೇಕು ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿರುವರು.