ಬೆಳ್ತಂಗಡಿ: ಕಸ್ತೂರಿ ರಂಗನ್ ವರದಿ ಪರಿಸರ ಸೂಕ್ಷ್ಮ ವಲಯ ಎಂಬ ಯೋಜನೆಯಿಂದ ಬೆಳ್ತಂಗಡಿ ತಾಲೂಕಿನ 16 ಗ್ರಾಮಗಳನ್ನು ಕೈಬಿಡುವಂತೆ ಒತ್ತಾಯಿಸಿ ಮಲೆನಾಡು ಜನ ಹಿತರಕ್ಷಣಾ ವೇದಿಕೆ ವತಿಯಿಂದ ಕಳೆಂಜ ಗ್ರಾಮಸ್ಥರು ಶುಕ್ರವಾರ ಕಳೆಂಜ ಗ್ರಾ.ಪಂ. ಎದುರು ಧರಣಿ ನಡೆಸಿದರು.
ಮಲೆನಾಡು ಜನ ಹಿತರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಮಾತನಾಡಿ, ಯೋಜನೆಯಡಿ ಮೂಲಸೌಕರ್ಯಕ್ಕೆ ಧಕ್ಕೆ ಉಂಟುಮಾಡುವ ಜತೆಗೆ ಕೃಷಿಕರು ತಾವಾಗಿಯೇ ಒಕ್ಕಲೆಬ್ಬಿಸುವ ಹುನ್ನಾರ ವರದಿಯಲ್ಲಿ ಅಡಗಿದೆ. ಪಟ್ಟಣದಿಂದ ಉದ್ಯೋಗ ಕಳೆದುಕೊಂಡು ಇಂದು ಹಳ್ಳಿಗೆ ಮರಳುತ್ತಿದ್ದಾರೆ. ಆದರೆ ಇರುವ ಕೃಷಿ ಭೂಮಿಯನ್ನು ಕಳೆದುಕೊಳ್ಳುವ ಆತಂಕದಿಂದ ಇಂದು ಕೃಷಿಕರ ಜೀವನವನ್ನೇ ಸರಕಾರ ಮರಣಕ್ಕೆ ದೂಡುತ್ತಿದೆ ಕಸ್ತೂರಿ ರಂಗನ್ ವರದಿ ರದ್ದಾಗುವವರೆಗೆ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಸರಕಾರಕ್ಕೆ ಎಚ್ಚರಿಸಿದರು.
ಮಲೆನಾಡು ಜನಹಿತ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಸಂತೋಷ್ ಕುಮಾರ್ ಮಾತನಾಡಿ, 2015ರಲ್ಲಿ ನಡೆಸಿದ ವಿಶೇಷ ಗ್ರಾಮ ಸಭೆಯ ನಿರ್ಣಯವನ್ನು ಸರಕಾರ ಪರಿಗಣಿಸಿ ಹಾಗೂ ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮವನ್ನು ಈ ಯೋಜನೆಯಿಂದ ಕೈ ಬಿಡಬೇಕೆಂದು ಗ್ರಾಮಸ್ಥರ ಪರವಾಗಿ ಒತ್ತಾಯಿಸಿದರು.
ಇದಕ್ಕೂ ಮುನ್ನ ಶಿಬಾಜೆ, ಪಾದೆ, ಕೊಕ್ಕಡ ಹೋಬಳಿ ಮಟ್ಟದಲ್ಲಿ 6 ಗ್ರಾ.ಪಂ. ವ್ಯಾಪ್ತಿಗೊಳಪಟ್ಟಂತೆ ಸಭೆ ನಡೆಸಲಾಯಿತು. ಬಳಿಕ ಕಳೆಂಜ ಗ್ರಾ.ಪಂ. ಮುಂದೆ ಧರಣಿ ನಡೆಸಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಅಭಿನಯ ಆರ್. ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಈವೇಳೆ ಕಾರ್ಯದರ್ಶಿ ಹೊನ್ನಪ್ಪಗೌಡ ಇದ್ದರು.
ಧರಣಿಯಲ್ಲಿ ಗ್ರಾಮಸ್ಥರಾದ ಸೂರ್ಯನಾರಾಯಣ ರಾವ್, ಪಿ.ಟಿ.ಸೆಬಾಸ್ಟಿಯನ್ ಅಮ್ಮಿನಡ್ಕ, ಶೀನಪ್ಪ ಶಿಶಿಲ, ನಿಜು ಕೆ.ಜೆ., ನಿತ್ಯಾನಂದ ರೈ, ಧನಂಜಯ ಗೌಡ, ಅಬ್ದುಲ್ ನೆಕ್ಕರೆ, ಜಯವರ್ಮ ಜೈನ್ ಸೇರಿದಂತೆ ನೂರಾರು ಗ್ರಾಮಸ್ಥರು ಭಾಗಿಯಾಗಿದ್ದರು.