ಬೆಳ್ತಂಗಡಿ: ಚತುರ್ದಾನ ಶ್ರೇಷ್ಠ ನಾಡಿನ ಪವಿತ್ರ ಕ್ಷೇತ್ರವೆಂದೇ ಜನಮಾನಸವಾಗಿರುವ ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಕಾರ್ತಿಕ ಮಾಸದ ಮಂಗಳಪರ್ವದಲ್ಲಿ, ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಲಕ್ಷದೀಪೋತ್ಸವವು ಡಿ.10ರಿಂದ ಆರಂಭಗೊಂಡಿದ್ದು, ಇಂದು(ಡಿ.14) ಸಾಹಿತ್ಯ ಸಮ್ಮೇಳನದ 88ನೇ ಅಧಿವೇಶನ ಹಾಗೂ ಶ್ರೀ ಮಂಜುನಾಥಸ್ವಾಮಿಯ ಗೌರಿಮಾರು ಕಟ್ಟೆ ಉತ್ಸವ ನೆರವೇರಲಿದೆ.
ಲಕ್ಷ ದೀಪೋತ್ಸವದ ಐದನೇ ದಿನ ಸೋಮವಾರ ಸಂಜೆ 5.30ರಿಂದ ಅಮೃತವರ್ಷಿಣಿ ಸಭಾಭವನದಲ್ಲಿ ಸಾಹಿತ್ಯ ಸಮ್ಮೇಳನವನ್ನು ಬೆಂಗಳೂರಿನ ವಿಶ್ರಾಂತ ಪ್ರಾಧ್ಯಾಪಕ, ಹಿರಿಯ ವಿಧ್ವಾಂಸಕ ವೇದಭೂಷಣ ಡಾ. ಎಸ್. ರಂಗನಾಥ್ ಉದ್ಘಾಟಿಸಲಿದ್ದು, ಬೆಂಗಳೂರು ಹಿರಿಯ ಸಾಹಿತಿ ಹಾಗೂ ಖ್ಯಾತ ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸ್ವಾಗತ ಭಾಷಣ ಮಾಡಲಿದ್ದಾರೆ. ಮೈಸೂರು ಪ್ರಾಧ್ಯಾಪಕ, ಸಂಸ್ಕೃತ ಚಿಂತಕ ಡಾ. ಜ್ಯೋತಿ ಶಂಕರ್, ಮೂಡುಬಿದಿರೆ ವಿಶ್ರಾಂತ ಉಪನ್ಯಾಸಕ, ಇತಿಹಾಸ ಸಂಶೋಧಕ ಡಾ. ಪುಂಡಿಕಾಯಿ ಗಣಪಯ್ಯ ಭಟ್ ಉಪನ್ಯಾಸ ನೀಡಲಿದ್ದಾರೆ.
ರಾತ್ರಿ 8ರಿಂದ 9.30ರವರೆಗೆ ನೃತ್ಯ ನಿಕೇತನ ಕೊಡವೂರು ಕಲಾವಿದರ ಪ್ರಸ್ತುತಿಯಲ್ಲಿ ಡಾ. ಶ್ರೀಪಾದ್ ಭಟ್ ನಿದೇರ್ಶನದಲ್ಲಿ ವಿದ್ವಾನ್ ಸುಧೀರ್ ಕೊಡವೂರು, ವಿದುಷಿ ಮಾನಸಿ ಸುಧೀರ್, ವಿದುಷಿ ಅನಘಶ್ರೀ ನೃತ್ಯ ನಿರ್ದೇಶನದಲ್ಲಿ ನಾರಸಿಂಹ ನೃತ್ಯರೂಪಕ (ಒಳಿತಿನ ವಿಜಯದ ಕಥನ) ನಡೆಯಲಿದೆ.