ಮಂಗಳೂರು: ಸೇಂಟ್ ಕ್ರಿಸ್ಟೋಫರ್ ಅಸೋಸಿಯೇಷನ್ (ರಿ), ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ಸದಸ್ಯರು ಮತ್ತು ಅವರ ಮಕ್ಕಳನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಮಂಗಳೂರಿನ ರೊಸಾರಿಯೋ ಕಲ್ಚರಲ್ ಹಾಲ್ನಲ್ಲಿ 2020 ರ ಡಿಸೆಂಬರ್ 13 ರ ಭಾನುವಾರ ಆಯೋಜಿಸಿತ್ತು.
ಸಂಘದ ಅಧ್ಯಕ್ಷ ಪ್ರೊ. ಡಾ. ಜಾನ್ ಎಡ್ವರ್ಡ್ ಡಿ ಸಿಲ್ವಾ ಅವರ ಪ್ರಾರ್ಥನೆ ಮತ್ತು ಸ್ವಾಗತದೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು.
ಗೌರವ ಅತಿಥಿಗಳಾದ, ಕರ್ನಾಟಕ ರಾಜ್ಯದ ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಜಾಯ್ಲಸ್ ಡಿಸೋಜಾ ಅವರನ್ನು ಕಾರ್ಯಕ್ರಮದ ಮುಖ್ಯ ಅತಿಥಿ ಮತ್ತು ಸಂಘದ ಆಧ್ಯಾತ್ಮಿಕ ನಿರ್ದೇಶಕ ಫಾ. ಆಲ್ಫ್ರೆಡ್ ಪಿಂಟೊ ಸನ್ಮಾನಿಸಿದರು.
ಇತ್ತೀಚೆಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ನೇಮಕಗೊಂಡ, ಸಂಘದ ಸದಸ್ಯರಾದ ಹಾಗೂ ಸ್ಪಿಯರ್ ಹೆಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾದ ಕೆನ್ಯೂಟ್ ಜೀವನ್ ಪಿಂಟೊ ಅವರನ್ನು ಸನ್ಮಾನಿಸಲಾಯಿತು. ಗೆರಾರ್ಡ್ ಟವರ್ಸ್ ಅವರಿಗೆ ‘ಬೆಸ್ಟ್ ಪರ್ಸನ್ ವಿತ್ ಪ್ರೊ-ಪೀಪಲ್ ಕನ್ಸರ್ನ್’ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಸಂಘದ ಸದಸ್ಯರ ಮಕ್ಕಳಾದ, ಈಜು ಸ್ಪರ್ಧೆಯಲ್ಲಿ ಸಾಧನೆಗೈದ ಸ್ಟೀವ್ ಜೆಫ್ ಲೋಬೊ ಮತ್ತು ಎಸ್ ಕೆ ಎ ಲಂಡನ್ ಕೊಂಕಣಿ ಹಾಡುವ ಸ್ಪರ್ಧೆಯಲ್ಲಿ ದ್ವಿತಿಯ ಸ್ಥಾನ ಗಳಿಸಿದ ರುತ್ ಅಲಿಷಾ ಪಿಂಟೊ ಅವರನ್ನು ಗೌರವಿಸಲಾಯಿತು. ಗೌರವಾಧ್ಯಕ್ಷ ಸುಶೀಲ್ ನೊರೊನ್ಹಾ ಸಾಧಕರನ್ನು ಪರಿಚಯಿಸಿದರು.
ಕಳೆದ ಶೈಕ್ಷಣಿಕ ವರ್ಷದಲ್ಲಿ ಸಾಧನೆ ಮಾಡಿರುವ ಸದಸ್ಯರ ಮಕ್ಕಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅವಶ್ಯ ವಿದ್ಯಾರ್ಥಿಗಳಿಗೆ ಅಗತ್ಯ ವಿದ್ಯಾರ್ಥಿವೇತನವನ್ನು ಸಹ ಕಾರ್ಯಕ್ರಮದ ಸಮಯದಲ್ಲಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಜಾಯ್ಲಸ್ ಡಿಸೋಜಾ, ಉನ್ನತ ಶಿಕ್ಷಣ ಪಡೆಯುತ್ತಿರುವ ಯುವಕರಿಗೆ ಅತ್ಯಲ್ಪ ಖರ್ಚಿನಲ್ಲಿ ಸುಸಜ್ಜಿತ ವಿದ್ಯಾರ್ಥಿನಿಲಯ ಒದಗಿಸಿರುವ ಸಂಘದ ಕೆಲಸವನ್ನು ಶ್ಲಾಘಿಸಿದರು. ಸಮುದಾಯದ ವಿದ್ಯಾರ್ಥಿಗಳಿಗೆ ಕಳಪೆ ಮಟ್ಟದ ಸೌಲಭ್ಯ ಸಿಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದ ಜಾಯ್ಲಸ್, ಮುಂದಿನ ದಿನಗಳಲ್ಲಿ ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ಒದಗಿಸುವ ಭರವಸೆ ನೀಡಿದರು. ಯುವಕರು ಕಡಿಮೆ ಸಂಬಳದ ಉದ್ಯೋಗಕ್ಕೆ ಸೀಮಿತವಾಗದೆ, ಬದುಕಿನಲ್ಲಿ ಉತ್ತಮ ಗುರಿಯನ್ನು ಅಳವಡಿಸಿಕೊಮಡು ಆ ನಿಟ್ಟಿನಲ್ಲಿ ಪ್ರಯತ್ನಶೀಲರಾಗಬೇಕೆಂದು ಹೇಳಿದರು. ಉತ್ಕೃಷ್ಟ ಗುರಿ, ಉತ್ತಮ ಶಿಕ್ಷಣ ಇದ್ದಲ್ಲಿ ಎಲ್ಲೆಡೆಯಿಂದಲೂ ಸಹಕಾರ ಸಿಗುತ್ತದೆ ಎಂದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಫ್ರಾನ್ ಆಲ್ಫ್ರೆಡ್ ಪಿಂಟೊ ಅವರು ಸಂಘದ ಸದಸ್ಯರ ಮಕ್ಕಳು ಮತ್ತು ಮೊಮ್ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು, ಸಮಾಜದಲ್ಲಿ ಒಂದು ಉತ್ತಮ ಬದಲಾವಣೆಯನ್ನು ತರಲು ಪ್ರಯತ್ನಶೀಲರಾಗಬೇಕೆಂದು ಕರೆ ನೀಡಿದರು. ರುತ್ ಅಲಿಶಾ ಪಿಂಟೊ ಹಾಗೂ ಇತರ ಮಕ್ಕಳ ಸಾಧನೆಯನ್ನು ಶ್ಲಾಘಿಸಿದ ಅವರು, ಪ್ರತಿಭೆಗಳನ್ನು ಗುರುತಿಸುವಂತಹ ಉತ್ತಮ ಕಾರ್ಯ ಮಾಡುತ್ತಿರುವ ಸೆಂಟ್. ಕ್ರಿಸ್ಟೋಫರ್ ಅಸೋಸಿಯೇಷನ್ ಗೆ ಅಭಿನಂದಿಸಿದರು.
ಕಾರ್ಯದರ್ಶಿ ಸುನಿಲ್ ಲೋಬೊ ಮತ್ತು ಇತರರು ಉಪಸ್ಥಿತರಿದ್ದರು. ಜಂಟಿ ಕಾರ್ಯದರ್ಶಿ ಜೆರಾಲ್ಡ್ ಡಿಸೋಜಾ ಧನ್ಯವಾದ ಅರ್ಪಿಸಿದರು. ಅಲ್ವಿನ್ ಡಿಸೋಜ ಕಾರ್ಯಕ್ರಮವನ್ನು ನಿರೂಪಿಸಿದರು..