ಮಂಗಳೂರು : ಖ್ಯಾತ ಕಾದಂಬರಿ ಲೇಖಕ , ಮಂಗಳೂರಿನ ಮ್ಯಾಪ್ಸ್ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಭಾಕರ ನೀರ್ ಮಾರ್ಗ ಅವರ 26 ನೇ ಕಾದಂಬರಿ ‘ ಧರ್ಮ ಚಾವಡಿ ‘ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ‘ ವೀ ಫೋರ್ ‘ ಸ್ಟುಡಿಯೋ ದಲ್ಲಿ ನಡೆಯಿತು.
ತುಳು ಪರಿಷತ್ ಹಾಗೂ ವೀ ಫೋರ್ ಸ್ಟುಡಿಯೋ ಜಂಟಿಯಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಉದ್ಯಮಿ ಹಾಗೂ ತುಳು ಪರಿಷತ್ ಗೌರವಾಧ್ಯಕ್ಷ ಸ್ವರ್ಣ ಸುಂದರ್ ಅವರು ‘ ಧರ್ಮ ಚಾವಡಿ ‘ ಕೃತಿಯನ್ನು ಬಿಡುಗಡೆ ಮಾಡಿದರು.
ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಸ್ವರ್ಣ ಸುಂದರ್ ಅವರು, ಧರ್ಮ ಚಾವಡಿ ಕಾದಂಬರಿ ಕೃತಿಗೆ ಓದುಗ ವಲಯದಿಂದ ಉತ್ತಮ ಪ್ರತಿಕ್ರಿಯೆ ಲಭಿಸಲಿ, ಕನ್ನಡ ನಾಡು ನುಡಿಗೆ ಪ್ರಭಾಕರ್ ಅವರ ಸೇವೆ ಅನನ್ಯವಾದುದು ಎಂದು ಅಭಿಪ್ರಾಯಪಟ್ಟರು.
ಧರ್ಮ ಚಾವಡಿ ಕಾದಂಬರಿ ಬಗ್ಗೆ ಮಾತನಾಡಿದ ಮೂಲ್ಕಿ ಸರಕಾರಿ ಪಿ.ಯು.ಕಾಲೇಜಿನ ಪ್ರಾಂಶುಪಾಲ ಡಾ.ವಾಸುದೇವ ಬೆಳ್ಳೆ ಅವರು, ಈ ಕಾದಂಬರಿಯು ತುಳುನಾಡಿನ ಬದುಕು , ಭೂತಾರಧನೆಯ ನಂಬಿಕೆ, ತುಳು ಸಂಸ್ಕೃತಿಯನ್ನು ಅನಾವರಣ ಮಾಡುತ್ತದೆ, ತುಳುನಾಡು ಆಧುನಿಕತೆಗೆ ಪರಿವರ್ತನೆಯಾಗುವ ಕಥನವನ್ನು ಬಣ್ಣಿಸುತ್ತದೆ ಎಂದು ಹೇಳಿದರು. ತುಳುವರ ಬದುಕಿನಲ್ಲಿರುವ ನ್ಯಾಯ ಧರ್ಮವನ್ನು ಕಾದಂಬರಿ ಪರಿಣಾಮಕಾರಿಯಾಗಿ ಧ್ವನಿಸಿದೆ ಎಂದು ವಾಸುದೇವ ಬೆಳ್ಳೆ ಅವರು ಹೇಳಿದರು.
ಧರ್ಮ ಚಾವಡಿ ಕಾದಂಬರಿ ಲೇಖಕ ಡಾ.ಪ್ರಭಾಕರ ನೀರ್ ಮಾರ್ಗ ಅವರು ಮಾತನಾಡಿ , ನಾನೋರ್ವ ತುಳುವ , ನನ್ನ ತುಳು ನಾಡಿನ ನಂಬಿಕೆ , ಆಚಾರ ವಿಚಾರ , ಸಂಸ್ಕೃತಿ ಬಗ್ಗೆ ತುಳುನಾಡಿನ ಹೊರಭಾಗದ ಕನ್ನಡಿಗರಿಗೂ ತಲುಪಬೇಕು ಎಂಬ ಉದ್ದೇಶದಿಂದ ತಾನು ಕನ್ನಡದಲ್ಲಿ ಬರೆಯಲು ನಿರ್ಧರಿಸಿದೆ , ಕಾದಂಬರಿಗಳು ಜನ ಸಾಮಾನ್ಯರಿಂದ ಎಲ್ಲಾ ವರ್ಗದ ಸಾಹಿತ್ಯ ಪ್ರೇಮಿಗಳನ್ನು ತಲಪುವ ಮಾಧ್ಯಮವಾಗಿರುವುದರಿಂದ ತಾನು ಕಾದಂಬರಿ ಬರೆಯಲು ಹೆಚ್ಚಿನ ಒಲವು ಹಾಗೂ ಆದ್ಯತೆ ನೀಡಿದೆ ಎಂದು ಹೇಳಿದರು .
ಕಾರ್ಯಕ್ರಮದಲ್ಲಿ ಸಾಹಿತ್ಯ ವಿಮರ್ಶಕ ಪ್ರತಾಪ ಚಂದ್ರ ಶೆಟ್ಟಿ , ಆಳ್ವಾಸ್ ಕಾಲೇಜಿನ ಉಪನ್ಯಾಸಕ ಡಾ.ಯೋಗೀಶ್ ಕೈರೋಡಿ , ಮಂಗಳೂರು ವಿ.ವಿ.ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ಸಹಾಯಕ ಸಂಶೋಧಕ ಯತೀಶ್ ಕುಡುಪು ಅವರು ಪ್ರಭಾಕರ ನೀರ್ ಮಾರ್ಗ ಅವರ ಸಾಹಿತ್ಯ ಕೃತಿಗಳ ಬಗ್ಗೆ ಹಾಗೂ ಜೀವನ ಸಾಧನೆ ಬಗ್ಗೆ ಮಾತನಾಡಿದರು.
ತುಳು ಪರಿಷತ್ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ತುಳು ಪರಿಷತ್ ಕೋಶಾಧಿಕಾರಿ ಶುಭೋದಯ ಆಳ್ವಾ ಅವರು ವಂದಿಸಿದರು.