ಮಂಗಳೂರು: ಇಂದು ಮುಂಜಾನೆ ವಿಟ್ಲದ ಕಬಕ ಸಮೀಪದ ಪೋಳ್ಯದಲ್ಲಿ ನಡೆದ ಬೈಕ್ ಅಪಘಾತದಲ್ಲಿ ಆರ್ ಎಸ್ಎಸ್ ನ ಹಿರಿಯ ಮುಖಂಡರೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಬಿ.ಸಿ.ರೋಡಿನ ಅಗ್ರಬೈಲ್ ನಿವಾಸಿ, ಆರ್ ಎಸ್ಎಸ್ ಮಂಗಳೂರು ವಿಭಾಗ ಗ್ರಾಮವಿಕಾಸ ಪ್ರಮುಖರೂ ಆಗಿದ್ದ ವೆಂಕಟರಮಣ ಹೊಳ್ಳ (60) ಮೃತಪಟ್ಟವರು.
ನಿನ್ನೆ ಆರ್ ಎಸ್ಎಸ್ ಬೈಠಕ್ ಮುಗಿಸಿ, ಪುತ್ತೂರಿನಲ್ಲೇ ತಂಗಿದ್ದ ವೆಂಕಟರಮಣ ಇಂದು ಬೆಳಿಗ್ಗೆ ಬೈಕ್ ನಲ್ಲಿ ಬಿ.ಸಿ.ರೋಡಿನ ಅಗ್ರಬೈಲ್ ನಲ್ಲಿರುವ ತನ್ನ ಮನೆಗೆ ತೆರಳುತ್ತಿದ್ದ ಸಂದರ್ಭ ಪೋಳ್ಯದಲ್ಲಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಆರ್ ಎಸ್ಎಸ್ ಕಾರ್ಯಕರ್ತರಾಗಿ ಬಾಲ್ಯದಿಂದಲೇ ಗುರುತಿಸಿಕೊಂಡಿದ್ದ ಅವರು ಸಂಘಟನೆಯ ರಾಷ್ಟ್ರೀಯ ನಾಯಕರ ಗಮನವನ್ನೂ ಸೆಳೆದವರು. ಈಗಿನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರಿಗೂ ವೆಂಕಟರಮಣ ಹೊಳ್ಳರು ಗುರು, ಮಾರ್ಗದರ್ಶಕರಾಗಿದ್ದರು. ಅವರ ಮನೆಯಲ್ಲಿಯೇ ಸಂಘದ ಶಿಕ್ಷಣವನ್ನು ನಳಿನ್ ಪಡೆದಿದ್ದರು.
ಇತ್ತೀಚೆಗೆ ಗ್ರಾಮ ವಿಕಾಸ ಸಮಿತಿಯ ಮಂಗಳೂರು ವಿಭಾಗ ಸಂಚಾಲಕರಾಗಿ ಬಿ.ಸಿ.ರೋಡ್, ಸುಳ್ಯ, ಪುತ್ತೂರು ಸಹಿತ ಹಲವೆಡೆ ಯುವಕರಿಗೆ ಆತ್ಮನಿರ್ಭರರಾಗುವ ಉದ್ಯೋಗ ತರಬೇತಿ ಆಯೋಜಿಸುವ ಮೂಲಕ ವೆಂಕಟರಮಣ ಹೊಳ್ಳ ಗಮನ ಸೆಳೆದಿದ್ದರು. ಪುತ್ತೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.