ಬೆಳ್ತಂಗಡಿ: ಕೊಕ್ಕಡ ಗ್ರಾಮದ ನೂಜೆ ತುಕ್ರಪ್ಪ ಶೆಟ್ಟಿ ಅವರ ಮನೆಗೆ ಒಂಭತ್ತು ಮಂದಿ ದರೋಡೆಕೋರರು ಸೋಮವಾರ ಬೆಳಗ್ಗೆ ನುಗ್ಗಿ ಮನೆಯ ಸದಸ್ಯರ ಮೇಲೆ ಹಲ್ಲೆ ಮಾಡಿ ಅವರನ್ನ ಕಟ್ಟಿ ಹಾಕಿ ಲಕ್ಷಾಂತರ ಮೌಲ್ಯದ ನಗದು ದೋಚಿದ ಘಟನೆ ಬೆಳಕಿಗೆ ಬಂದಿದೆ.
ದರೋಡೆಕೋರರು ಹಲ್ಲೆ ನಡೆಸಿದ್ದು, ತುಕ್ರಪ್ಪ ಶೆಟ್ಟಿ ಅವರ ಪತ್ನಿಗೆ ಕತ್ತಿಯಿಂದ ಇರಿಯಲಾಗಿದೆ. ಪರಿಣಾಮ ತೀವ್ರ ಗಾಯಗಳಾಗಿ ಅವರನ್ನ ಚಿಕಿತ್ಸೆಗಾಗಿ ಮಂಗಳೂರಿನ ಅಸ್ಪತ್ರೆಗೆ ದಾಖಲಿಸಲಾಗಿದೆ.
ಮನೆಯಲ್ಲಿ ಪತಿ, ಪತ್ನಿ ಮತ್ತು ಇಬ್ಬರು ಸಣ್ಣ ಮಕ್ಕಳು ಮಾತ್ರ ಇದ್ದು, ಸಮಯ ಬಳಸಿಕೊಂಡ ದುಷ್ಕರ್ಮಿಗಳು ಮಾರಕಾಸ್ತ್ರ ತೋರಿಸಿ ಬೆದರಿಸಿ ಕೂಡಿ ಹಾಕಿ ಈ ದರೋಡೆ ನಡೆಸಲಾಗಿದೆ. ದರೋಡೆಕೋರರು ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯವರು ಧರ್ಮಸ್ಥಳ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಕೂಡಲೇ ಪೊಲೀಸ್ ಅಧಿಕಾರಿಗಳು ಘಟನೆ ನಡೆದ ಮನೆಗೆ ಬಂದು ಪರಿಶೀಲಿಸಿದ್ದಾರೆ. ದ.ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಭೇಟಿ ನೀಡಿ ಪ್ರಕರಣದ ಮಾಹಿತಿ ಪಡೆದರು.
ವಿಶ್ವಹಿಂದೂ ಪರಿಷತ್ ನ ಕೊಕ್ಕಡ ವಲಯ ಅಧ್ಯಕ್ಷರಾಗಿದ್ದ ನೂಜೆ ತುಕ್ರಪ್ಪ ಶೆಟ್ಟಿಯವರ ಮನೆಗೆ ಈ ದರೋಡೆಕೋರರು ನುಗ್ಗಿದ ವಿಷಯ ತಿಳಿಯುತ್ತಲೆ ನೂರಾರು ಮಂದಿ ಆಗಮಿಸಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಉಜಿರೆಯಲ್ಲಿ ಬಾಲಕನನ್ನು ಅಪಹರಿಸಿದ್ದು, ಈಗ ದರೋಡೆ ಪ್ರಕರಣವು ತಾಲೂಕಿನ ಜನರಲ್ಲಿ ಭೀತಿಯನ್ನು ಉಂಟು ಮಾಡಿದ್ದು, ಪೊಲೀಸರು ಸೂಕ್ತ ರೀತಿ ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ.