ಬೆಳ್ತಂಗಡಿ: ಇಂದಿನ ಡಿಜಿಟಲ್ ಯುಗದಲ್ಲಿ ಸಮಸ್ಯೆಗಳು ಅತಿ ಕ್ಷಿಪ್ರವಾಗಿ ಬಗೆಹರಿಯಬೇಕು. ಆದರೆ ಆ ರೀತಿ ಆಗದೆ ಜನರಿಗೆ ತೊಂದರೆಯೇ ಮುಂದುವರಿಯುತ್ತಿದೆ. ಇಂತಹ ತೊಂದರೆಯನ್ನು ತಾಲೂಕಿನ ಪ್ರವಾಹ ಸಂತ್ರಸ್ತರು ಎದುರಿಸುತ್ತಿದ್ದಾರೆ.
ತಾಲೂಕಿನಲ್ಲಿ ಪ್ರವಾಹ ಸಂಭವಿಸಿ ಒಂದೂವರೆ ವರ್ಷ ಕಳೆದರೂ ಸಂತ್ರಸ್ತರಿಗೆ ಪರಿಹಾರ ಸಿಗುವಲ್ಲಿ ಸಮಸ್ಯೆಗಳು ಆಗಾಗ ಅಡ್ಡಿಪಡಿಸುತ್ತಲೇ ಇವೆ. ತೊಂದರೆಗಳಿಗೆ ಕೆಲ ತಾಂತ್ರಿಕ ತೊಂದರೆಗಳೇ ಕಾರಣವಾಗಿದೆ. ತಾಲೂಕಿನಲ್ಲಿ ಪ್ರವಾಹಕ್ಕೆ ತುತ್ತಾದ 289 ಮನೆಗಳ ಪೈಕಿ ಮಿತ್ತಬಾಗಿಲು ಗ್ರಾಮದಲ್ಲಿನ ಸಂತ್ರಸ್ತರೊಬ್ಬರು ಮೃತಪಟ್ಟಿದ್ದರಿಂದ ವಾರಸುದಾರರ ಹೆಸರು ಮತ್ತು ಖಾತೆ ಬದಲಾವಣೆಗೆ ತಾಂತ್ರಿಕ ತೊಡಕು ಎದುರಾಗಿ 1 ವರ್ಷದಿಂದ ಬಾಕಿ ಕಂತು ಬಾರದೇ ಮನೆಗಳು ನಿರ್ಮಾಣ ಹಂತದಲ್ಲೇ ಉಳಿದಿವೆ.
ತಾಲೂಕಿನ ಮಿತ್ತಬಾಗಿಲು ಗ್ರಾಮವೊಂದರಲ್ಲೆ ಸರಿಸುಮಾರು 130ಕ್ಕೂ ಅಧಿಕ ಮನೆಗಳು ಹಾನಿಗೀಡಾಗಿದ್ದವು. ಈ ಪೈಕಿ ಸರಕಾರದಿಂದ 121 ಮನೆಗಳು ಮಂಜೂರುಗೊಂಡಿದ್ದವು. ಆರಂಭದಲ್ಲಿ ಜಿಪಿಎಸ್ ಸಮಸ್ಯೆ ತೀವ್ರ ತಲೆದೋರಿದ ಕಾರಣ ಕಂತು ಹಣ ಬಾರದೆ ಮನೆ ನಿರ್ಮಾಣ ಒಂದು ವರ್ಷ ವಿಳಂಬವಾಗಿತ್ತು. ಅನೇಕ ಅಡೆತಡೆಗಳ ನಡುವೆ ಮನೆ ನಿರ್ಮಾಣ ಹಂತಕ್ಕೆ ಬಂದಾಗ ಕೆಲವಷ್ಟು ಮನೆಗಳ ವಾರಸುದಾರರು ಮೃತಪಟ್ಟಿದ್ದಾರೆ.
ಹಳ್ಳಿಯವರಿಗೆ ಅರ್ಥವಾಗದೆ ಇಂದಿನ ವ್ಯವಸ್ಥೆ
ಮಿತ್ತಬಾಗಿಲು ರಾಮಣ್ಣ ಗೌಡ ಅವರಿಗೆ 2019 ಸೆ. 30ರಿಂದ 2020 ಮೇ ವರೆಗೆ 25,000 ರೂ., 75,000 ರೂ. ಕೈಸೇರಿದೆ. ಉಳಿದ ಹಣ ಬಾಕಿ ಉಳಿದಿವೆ. ಹೆಸರು ಬದಲಾವಣೆಗೆ ಎಲ್ಲ ಮೂಲ ದಾಖಲೆ ಸಹಿತ ತಾ.ಪಂ., ಜಿ.ಪಂ. ವಸತಿ ನಿಗಮಕ್ಕೂ ಕಳುಹಿಸಲಾಗಿದೆ. ಆದರೂ ಈವರೆಗೆ ಖಾತೆ ಬದಲಾಗಿಲ್ಲ. ಕಂದಾಯ ಇಲಾಖೆ ನೆರೆ ಸಂತ್ರಸ್ತರ ಸಮಸ್ಯೆಯನ್ನು ನಿರ್ವಹಿಸುತ್ತಿರುವುದರಿಂದ ಇಲ್ಲಿ ಕೆಲವು ಗೊಂದಲಗಳು ಏರ್ಪಟ್ಟಿವೆ. ಕಾಳಜಿ ಫ್ಲಡ್ ರಿಲೀಫ್ ಫಂಡ್ನಿಂದ ಸಂತ್ರಸ್ತರಿಗೆ ತಲಾ ಒಂದು ಲಕ್ಷ ರೂ. ಲಭಿಸಿದ್ದು ಒಂದಷ್ಟು ಅನುಕೂಲವಾಗಿದೆ. ಆದರೆ ಮನೆ ಪೂರ್ಣ ಗೊಳ್ಳಬೇಕಾದರೆ ಸರಕಾರದ ತಾಂತ್ರಿಕ ತೊಂದರೆಗಳು ನಿವಾರಣೆಯಾಗಲೇ ಬೇಕಾಗಿದೆ.
ಕೊಲ್ಲಿ ಸೀತು ಗೌಡ ಮೃತಪಟ್ಟಿದ್ದು ಅವರಿಗೆ ಈವರೆಗೆ ನಾಲ್ಕು ಕಂತುಗಳ ಖಾತೆಗೆ ಸೇರಿದ್ದು ಒಂದು ಕಂತು ಬಾಕಿ ಉಳಿದಿಎ. ಕಲ್ಲೊಲೆ ಲಿಂಗಪ್ಪ ಗೌಡ ಎಪ್ರಿಲ್ 2020 ರಲ್ಲಿ ಮೃತಪಟ್ಟಿದ್ದು 2019 ಸೆಪ್ಟೆಂಬರ್ನಿಂದ ಮೂರು ಕಂತುಗಳಲ್ಲಿ ತಲಾ ಒಂದು ಲಕ್ಷ ರೂ. ಬಂದಿದ್ದು ಇನ್ನೆರಡು ಕಂತುಗಳು ಖಾತೆಗೆ ಜಮೆಯಾಗಿಲ್ಲ. ಆ್ಯಪ್ ನಲ್ಲಿ ತೋರಿಸುತ್ತಿದ್ದು ಖಾತೆಗೆ ಜಮೆಯಾಗಿಲ್ಲ. ಕಿಲ್ಲೂರು ಅಬ್ದುಲ್ ರಝಾಕ್ 2020 ಜನವರಿಯಲ್ಲಿ ಮೃತಪಟ್ಟಿದ್ದಾರೆ. ಇದಕ್ಕೂ ಮುನ್ನ 2019 ಸೆಪ್ಟೆಂಬರ್ನಲ್ಲಿ 25,000, ಅಕ್ಟೋಬರ್ನಲ್ಲಿ 31,000 ರ ಎರಡನೇ ಕಂತು ಹೊರತುಪಡಿಸಿದರೆ ವಸತಿ ನಿಗಮದಿಂದ ಇನ್ನಾವುದೇ ಖಾತೆಗೆ ಹಣ ಬಂದಿಲ್ಲ.
ಮನೆಯವರೆಲ್ಲ ಬೆಂಗಳೂರು ಸಹಿತ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನು ಭೇಟಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಅವಲತ್ತುಕೊಂಡಿದ್ದಾರೆ. ವಾರಸುದಾರರ ಬದಲಾವಣೆ ವಿಚಾರವಾಗಿ ಇಲಾಖೆ ಮುಂಚಿತವಾಗಿ ಚಿಂತಿಸದೇ ಇದ್ದುದರಿಂದ ಮಧ್ಯಂತರದಲ್ಲಿ ಇವುಗಳ ಬದಲಾವಣೆಗೆ ಸಮಸ್ಯೆಯಾಗಿದೆ. ಈ ಬಗ್ಗೆ ಸರಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು ಶೀಘ್ರವಾಗಿ ಯೋಚಿಸಿ ಕ್ರಮಕೈಗೊಳ್ಳಬೇಕಾಗಿದೆ.
ನರೆ ಸಂತ್ರಸ್ತರು ಮೃತಪಟ್ಟಿದ್ದಲ್ಲಿ ಅವರ ಖಾತೆ ಬದಲಾವಣೆ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ವರದಿಯನ್ನು ತರಿಸಿ, ನೆರೆ ಸಂತ್ರಸ್ತರ ಪುನರ್ವಸತಿ ಯೋಜನೆಗೆ ಸಂಬಂಧಪಟ್ಟ ಅಧಿಕಾರಿಗಳು, ಎಂಜಿನಿಯರ್ಗಳೊಂದಿಗೆ ಚರ್ಚಿಸಿ ತತ್ಕ್ಷಣ ಕ್ರಮ ಕೈಗೊಳ್ಳಲಾಗುವುದು.
ಡಾ. ಕೆ. ವಿ. ರಾಜೇಂದ್ರ ದ.ಕ. ಜಿಲ್ಲಾಧಿಕಾರಿ
ಮಲವಂತಿಗೆ ಗ್ರಾಮದ ಪಾಮಜಿ ಮನೆ ನಿವಾಸಿ ರಾಮಣ್ಣ ಗೌಡ, ಕಿಲ್ಲೂರು ತಿಮ್ಮನಬೆಟ್ಟು ಅಬ್ದುಲ್ ರಫೀಕ್, ಕಲ್ಲೊಲೆ ಲಿಂಗಪ್ಪ ಗೌಡ ಸೇರಿದಂತೆ ಕೊಲ್ಲಿ ಸೀತು ಗೌಡ ಮೃತಪಟ್ಟಿದ್ದು ಅವರ ಖಾತೆಯನ್ನು ಮಕ್ಕಳು ಅಥವಾ ಪತ್ನಿ ಹೆಸರಿಗೆ ಬದಲಾಯಿಸಲು ಬೆಂಗಳೂರಿನಲ್ಲಿರುವ ರಾಜೀವ ಗಾಂಧಿ ವಸತಿ ನಿಗಮದ ಎಲ್ಲಾ ಇಲಾಖೆಗಳಿಗೆ ಸುತ್ತಾಡಿದರೂ ಪ್ರಯೋಜನವಾಗಿಲ್ಲ. ಸಂಪೂರ್ಣ ದಾಖಲೆ ಒದಗಿಸಿದರೂ ಕಂದಾಯ ಇಲಾಖೆ ಕಣ್ಮುಚ್ಚಿಕುಳಿತಿರುವುದು ವಿಪರ್ಯಾಸ. ಪ್ರಸಕ್ತ ಮುಂದಿನ ಹಂತದ ಜಿ.ಪಿ.ಎಸ್. ಪ್ರಕ್ರಿಯೆ ನಡೆಯದಿರುವುದರಿಂದ ಮೂರು ಅಥವಾ ನಾಲ್ಕು ಕಂತುಗಳು ಬಂದಿದ್ದು ಉಳಿದ ಕಂತುಗಳು ಬಾಕಿಯಾಗಿವೆ. ಯಾಕೆ ಹೀಗೆ ಎಂಬುದಕ್ಕೆ ಇಲಾಖೆ ಸ್ಪಷ್ಟ ಉತ್ತರ ಕೊಡುತ್ತಿಲ್ಲ.