ಬೆಳ್ತಂಗಡಿ: ಕ್ಷುಲ್ಲಕ ಕಾರಣಕ್ಕೆ ಸಾರಿಗೆ ಬಸ್ಸು ಮತ್ತು ರಿಕ್ಷಾ ಚಾಲಕರ ಮಧ್ಯೆ ಭಾರೀ ಹೊಡೆದಾಟ ನಡೆದಿರುವ ಅದರ ವೀಡಿಯೋ ವೈರಲಾಗಿದೆ. ಘಟನೆ ಆದಿತ್ಯವಾರ ಧರ್ಮಸ್ಥಳದಲ್ಲಿ ನಡೆದಿದ್ದು ಪ್ರಕರಣ ಠಾಣೆಯ ಮೆಟ್ಟಲೇರಿದೆ.
ಪ್ರಯಾಣಿಕರ ಮತ್ತು ಸಾರ್ವಜನಿಕರ ಮುಂದೆಯೇ ಆಗಿರುವ ಈ ಹಲ್ಲೆಯಿಂದ ಎರಡೂ ಕಡೆಯವರ ಮುಖದಲ್ಲೂ ರಕ್ತ ಹರಿದಿದ್ದು, ವಸ್ತ್ರಗಳನ್ನು ಹರಿದುಹಾಕಿದ ದೃಶ್ಯಗಳು ಕಂಡು ಬಂದಿವೆ.
ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸುಳ್ಯ ಡಿಪೊದಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಲಿಂಗರಾಜು, ಕೆ.ಎಮ್ ಅವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದಾರೆ.
ತನಗೆ 4 ಜನರ ತಂಡ ಹಲ್ಲೆ ನಡೆಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಆರೋಪಿಗಳನ್ನು ಚಂದನ್ ಮತ್ತು ಸ್ವಸ್ತಿಕ್ ಎಂದು ಗುರುತಿಸಲಾಗಿದ್ದು ಇನ್ನಿಬ್ಬರ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪ್ರಯಾಣಿಕರನ್ನು ಹೇರಿಕೊಂಡು ಬಂದು ಮಧ್ಯಾಹ್ನ 3.00 ಗಂಟೆಗೆ ಧರ್ಮಸ್ಥಳ ದೇವಸ್ಥಾನದ ಮಹಾದ್ವಾರದ ಬಳಿ ರಸ್ತೆಯ ಎಡ ಬದಿಯಲ್ಲಿ ಚಾಲಕ ಬಸ್ಸು ನಿಲ್ಲಿಸಿದ್ದರು. ಆ ಸಮಯ 4 ಜನ ಆರೋಪಿಗಳು ಒಟ್ಟು ಸೇರಿ ಬಸ್ಸು ಚಾಲಕರಲ್ಲಿ ಬಸ್ಸನ್ನು ಮುಂದಕ್ಕೆ ಚಲಾಯಿಸಲು ತಿಳಿಸಿದ್ದು, ಆ ಸಮಯ ಪ್ರಯಾಣಿಕರು ಇಳಿಯುತ್ತಿದ್ದ ಕಾರಣ ಮುಂದಕ್ಕೆ ಹೋಗಲು ಆಗದೇ ಇದ್ದುದರಿಂದ ಅವರೊಳಗೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಕೋಪಗೊಂಡ ಆಟೋ ಚಾಲಕರು ಬಸ್ಸು ಚಾಲಕ ಲಿಂಗರಾಜು ಅವರಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು, ಬಸ್ಸಿನಿಂದ ಎಳೆದು ಹಾಕಿ ಬಾಗಿಲಿನ ಲಾಕ್ ನ್ನು ಕೈಯಿಂದ ಮುರಿದು ಚಾಲಕನ ತಲೆಯ ಮುಂಬಾಗಕ್ಕೆ ಹೊಡೆದು ರಕ್ತ ಬರುವಂತೆ ಹಲ್ಲೆ ನಡೆಸಿದ್ದಾರೆ ಎಂಬುದಾಗಿ ದೂರು ಕೇಳಿಬಂದಿದೆ.
ಈ ಮಧ್ಯೆ ಎದುರುದಾರರೂ ಕೂಡ ಬಸ್ಸು ಚಾಲಕನ ವರ್ತನೆ ಮತ್ತು ತಮ್ಮ ಮೇಲೆ ಹಲ್ಲೆ ನಡೆಸಿರುವುದಾಗಿ ಆಪಾದಿಸಿ ಪ್ರತಿದೂರು ನೀಡಿದ್ದಾರೆನ್ನಲಾಗಿದೆ. ಘಟನೆಯ ಬಗ್ಗೆ ಧರ್ಮಸ್ಥಳ ಠಾಣೆಯ ಪೊಲೀಸರು ಮಾಹಿತಿ ಕಲೆಹಾಕಿದ್ದು ತನಿಖೆ ನಡೆಸುತ್ತಿದ್ದಾರೆ.