ಉಡುಪಿ: ಹಣಕಾಸು ವ್ಯವಹಾರದ ವಿಚಾರದಲ್ಲಿ ಯುವ ಉದ್ಯಮಿಯೊಬ್ಬರನ್ನು ಹತ್ಯೆ ಮಾಡಿರುವ ಘಟನೆ ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಾಳಾವರದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಅಜೇಂದ್ರ ಶೆಟ್ಟಿ (33) ಮೃತ ಉದ್ಯಮಿ. ಅವರು ಅನೂಪ್ ಎಂಬುವವರೊಂದಿಗೆ ಕಳೆದ 5 ವರ್ಷಗಳಿಂದ ಪಾಲುದಾರಿಕೆಯಲ್ಲಿ ಡ್ರೀಮ್ ಫೈನಾನ್ಸ್ ಎಂಬ ಹೆಸರಿನಲ್ಲಿ ವ್ಯವಹಾರ ನಡೆಸುತ್ತಿದ್ದರು. ಅಜೇಂದ್ರ ಅವರು ಅವಿವಾಹಿತರಾಗಿದ್ದು, ಸಾಮಾಜಿಕ ಕಾರ್ಯಕರ್ತರೂ ಆಗಿದ್ದಾರೆ.
ರಾತ್ರಿ 11 ಗಂಟೆಯಾದರೂ ಅಜೇಂದ್ರ ಮನೆಗೆ ಬಾರದ ಕಾರಣ ಅನುಮಾನಗೊಂಡ ಕುಟುಂಬಸ್ಥರು ಮೊಬೈಲ್’ಗೆ ಕರೆ ಮಾಡಿದ್ದಾರೆ. ಈ ವೇಳೆ ಸಂಪರ್ಕಕ್ಕೆ ಸಿಗದ ಕಾರಣ ಕಚೇರಿಗೆ ಹೋಗಿ ನೋಡಿದಾಗ ಅಜೇಂದ್ರ ಅವರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ.
ಆಘಾತಗೊಂಡ ಕುಟುಂಬಸ್ಥರು ಕೂಡಲೇ ಹತ್ತಿರವಿದ್ದ ಎನ್ಆರ್ ಆಚಾರ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ. ಘಟನೆ ಸಂಬಂಧ ಅಜೇಂದ್ರ ಅವರ ಸಹೋದರ ಮಹೇಂದ್ರ ಶೆಟ್ಟಿ (35) ಪೊಲೀಸರಿಗೆ ದೂರು ನೀಡಿದ್ದಾರೆ.
ಅಜೇಂದ್ರ ಮುಖದ ಮೇಲೆ ಹಲವಾರು ಗಾಯಗಳು ಕಂಡು ಬಂದಿತ್ತು. ಹತ್ಯೆ ಹಿಂದೆ ಅನೂಪ್ ಕೈವಾಡವಿದೆ ಎಂದು ಮಹೇಂದ್ರ ಶೆಟ್ಟಿಯವರು ಶಂಕೆ ವ್ಯಕ್ತಪಡಿಸಿದ್ದಾರೆ.
ಉಡುಪಿ ಎಸ್’ಪಿ ವಿಷ್ಣುವರ್ಧನ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.