ಪುತ್ತೂರು: ಒಂದೊಮ್ಮೆ ಪುತ್ತೂರು ಕಾಂಗ್ರೆಸ್‌ನ ಭದ್ರಕೋಟೆ. ಈ ಕೋಟೆಯನ್ನು ಬೇಧಿಸಿದ್ದು ಡಿ.ವಿ. ಸದಾನಂದ ಗೌಡ. ನಂತರ ಸಾಲು ಸಾಲಾಗಿ ಬಿಜೆಪಿಯದ್ದೇ ಆಡಳಿತ. ನಡುವೆ ಆಗೊಮ್ಮೆ – ಈಗೊಮ್ಮೆ ಕಾಂಗ್ರೆಸ್ ಅಧಿಕಾರ ಪಡೆದಿದೆಯಾದರೂ, ಅದು ಶಾಶ್ವತವಾಗಿರಲಿಲ್ಲ. ಆದ್ದರಿಂದ ಈ ಬಾರಿ ಕೈತಪ್ಪಿ ಹೋಗಿರುವ ಪುತ್ತೂರು ಕ್ಷೇತ್ರವನ್ನು ಪಡೆದೇ ತೀರಬೇಕು ಎಂದು ಕಾಂಗ್ರೆಸ್ ಇನ್ನಿಲ್ಲದ ಹರಸಾಹಸ ಪಡುತ್ತಿದ್ದರೆ, ಬಿಜೆಪಿಗೆ ಕ್ಷೇತ್ರವನ್ನು ಉಳಿಸಿಕೊಳ್ಳುವುದೇ ಪ್ರತಿಷ್ಠೆ ಎನಿಸಿಕೊಂಡಿದೆ.
ಪುತ್ತೂರಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಸ್ಪರ್ಧೆ. ನಡುವೆ ಆಮ್ ಆದ್ಮಿ, ಜೆಡಿಎಸ್, ಪಕ್ಷೇತರರು ಎಂಬ ಸ್ಪರ್ಧೆ ಇರುತ್ತದೆಯಾದರೂ, ಅವರೇನೂ ದೊಡ್ಡ ಮತ ಬಾಚಿಕೊಂಡ ಉದಾಹರಣೆ ಇಲ್ಲ. ಹಾಗಿರುವಾಗ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದೊಳಗೆ ಟಿಕೇಟ್ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದೇ ಇದೆ. ಬಿಜೆಪಿಯಲ್ಲಿ ನೇರವಾಗಿ ಹೇಳಿಕೊಳ್ಳದೇ ಇದ್ದರೆ, ಕಾಂಗ್ರೆಸ್‌ನಲ್ಲಿ ಸಾರ್ವಜನಿಕವಾಗಿ ತಾನೂ ಪ್ರಬಲ ಟಿಕೇಟ್ ಆಕಾಂಕ್ಷಿ ಎಂದು ಹೇಳಿಬಿಡುತ್ತಾರಷ್ಟೇ. ಈ ಬಾರಿ ಕಾಂಗ್ರೆಸ್‌ನಿಂದ ೧೪ ಮಂದಿ ಟಿಕೇಟ್ ಆಕಾಂಕ್ಷಿಗಳು ಕಣದಲ್ಲಿದ್ದಾರೆ. ಬಿಜೆಪಿಯಲ್ಲಿ ಮುಕ್ತವಾಗಿ ಕೇಳಿಬರುತ್ತಿರುವ ಹೆಸರು ಎರಡೇ ಅದು – ಹಾಲಿ ಶಾಸಕ ಸಂಜೀವ ಮಠಂದೂರು ಹಾಗೂ ಹಿಂದೂ ಫೈರ್‌ಬ್ರಾಂಡ್ ಅರುಣ್ ಕುಮಾರ್ ಪುತ್ತಿಲ.
ಪುತ್ತಿಲ ವರ್ಸಸ್ ಮಠಂದೂರು!: ಹಿಂದಿನ ಚುನಾವಣೆ ಸಂದರ್ಭ ಬಿಜೆಪಿ ಟಿಕೇಟ್‌ಗಾಗಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಅದರಲ್ಲಿದ್ದ ಅಶೋಕ್ ಕುಮಾರ್ ರೈ ಅವರು ಈ ಬಾರಿ ಕೈ ಹಿಡಿದ ಕಾರಣ, ಸಂಜೀವ ಮಠಂದೂರು ಹಾಗೂ ಅರುಣ್ ಕುಮಾರ್ ಪುತ್ತಿಲ ಅವರ ನಡುವೆ ಟಿಕೇಟ್‌ಗಾಗಿ ನೇರ ಜಿದ್ದಾಜಿದ್ದಿ ಇದೆ.
ಪುತ್ತಿಲ ಫಾರ್ ಪುತ್ತೂರು ಎಂಬ ಹೆಸರಿನಲ್ಲಿ ಅರುಣ್ ಕುಮಾರ್ ಪುತ್ತಿಲ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದರು. ಹಲವು ವಾಟ್ಸ್‌ಆಪ್ ಗ್ರೂಪ್‌ಗಳು ಕ್ರಿಯೇಟ್ ಆದವು. ನೋಡನೋಡುತ್ತಿದ್ದಂತೆ ಗ್ರೂಪ್‌ಗಳು ತುಂಬಿ ತುಳುಕತೊಡಗಿದವು. ಅಷ್ಟರಮಟ್ಟಿಗೆ ಪುತ್ತಿಲ ಹವಾ ಎಬ್ಬಿಸಿದ್ದರು.
ಈ ನಡುವೆ ಪತ್ರಿಕಾಗೋಷ್ಠಿಯಲ್ಲಿ ಬ್ಯಾನರ್ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ, ಶಾಸಕ ಸಂಜೀವ ಮಠಂದೂರು ಅವರು, ಕಾರ್ಯಕ್ರಮದಲ್ಲಿ ಹಾಕುವ ಬ್ಯಾನರ್‌ಗಳು ಮಳೆಗಾಲದ ಅಣಬೆಗಳಂತೆ ಎಂದು ಹೆಸರು ಹೇಳದೆ ಟಾಂಗ್ ನೀಡಿದ್ದರು. ಇದು ಪುತ್ತಿಲ ಅವರನ್ನೇ ಗುರಿಯಾಗಿಸಿ ನೀಡಿದ ಹೇಳಿಕೆ ಎಂದು ಪುತ್ತಿಲ ಅಭಿಮಾನಿಗಳು ರೊಚ್ಚಿಗೆದ್ದರು. ಇದು ಬಿಜೆಪಿಗೆ ಹಿನ್ನಡೆ ಎಂಬ ಮಾತು ಕೇಳಿಬಂದಿತು. ಆದರೆ ಅಮಿತ್ ಶಾ ಕಾರ್ಯಕ್ರಮದ ಪ್ರಚಾರಾರ್ಥ ಹಮ್ಮಿಕೊಂಡಿದ್ದ ಜಾಥಾದ ಕೊನೆಯಲ್ಲಿ, ಪುತ್ತಿಲ ಅಭಿಮಾನಿಗಳು ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತಪಡಿಸಿದರು. ಒಂದು ಹಂತಕ್ಕೆ ಕೈ ಕೈ ಮಿಲಾಯಿಸುವಲ್ಲಿಗೂ ತಲುಪಿತು. ಇದು ಬಿಜೆಪಿಯ ಹಿರಿಯ ನಾಯಕರನ್ನು ಕೆರಳಿಸಿದ್ದು ಸುಳ್ಳಲ್ಲ.
ಹಾಲಿ ಶಾಸಕ ಸಂಜೀವ ಮಠಂದೂರು ಅವರು ಅಣಬೆ ಹೇಳಿಕೆ ನೀಡಿದ್ದೊಂದು ಬಿಟ್ಟರೆ, ಎಲ್ಲಿಯೂ ವಿವಾದಗಳಿಗೆ ವಸ್ತುವಾದರೇ ಅಲ್ಲ. ಪುತ್ತಿಲ ತಾಯಿ ಮೃತಪಟ್ಟಾಗ ಅವರ ಮನೆಗೂ ಭೇಟಿ ನೀಡಿ, ಸಾಂತ್ವನ ಹೇಳಿದರು. ಯಾವುದೇ ಹಮ್ಮು – ಬಿಮ್ಮಿಲ್ಲದ ಓರ್ವ ಸರಳ ಶಾಸಕ. ಸದಾ ಓಡಾಟ, ಅಭಿವೃದ್ಧಿಯ ಕನಸು ಅವರ ಜೀವನ. ಹಾಗಾಗಿ ಈ ಬಾರಿ ಪುತ್ತಿಲ ಹಾಗೂ ಮಠಂದೂರು ಅವರ ನಡುವೆ ಟಿಕೇಟ್‌ಗಾಗಿ ನೇರ ಸ್ಪರ್ಧೆ ಏರ್ಪಟ್ಟಿದೆ. ಇನ್ನುಳಿದಂತೆ ಬಿಜೆಪಿ ಟಿಕೇಟ್‌ಗಾಗಿ ಸಾಕಷ್ಟು ಮಂದಿ ಕಾದು ಕುಳಿತಿದ್ದಾರೆ. ಆದರೆ ಅವರ‍್ಯಾರು ಸಾರ್ವಜನಿಕವಾಗಿ ಟಿಕೇಟ್ ಆಕಾಂಕ್ಷಿಗಳು ಎಂದು ಎಲ್ಲೂ ಹೇಳಿಕೊಂಡಿಲ್ಲ.
ಕೈಗೆ ರೈ ಅನಿವಾರ್ಯ: ಉದ್ಯಮಿ ಅಶೋಕ್ ಕುಮಾರ್ ರೈ ಅವರು ಬಿಜೆಪಿಯ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿದ್ದವರು. ಪಕ್ಷ ತನ್ನ ಆಕಾಂಕ್ಷೆಗೆ ಮಣೆ ಹಾಕಿಲ್ಲ ಎಂಬ ಕಾರಣಕ್ಕೆ, ಕಾಂಗ್ರೆಸ್ ತೆಕ್ಕೆಗೆ ಜಾರಿಕೊಂಡಿದ್ದಾರೆ. ಕೇಂದ್ರದ ಮಾಜಿ ಸಚಿವ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರ ಆಪ್ತ ವಲಯದಲ್ಲಿ ಗುರುತಿಸಿಕೊಂಡರೂ, ಬಿಜೆಪಿಯಲ್ಲಿ ಅಶೋಕ್ ರೈ ಅವರನ್ನು ಜನಪ್ರತಿನಿಧಿ ಮಾಡಲು ಆಗಲೇ ಇಲ್ಲ. ಆದ್ದರಿಂದ ಅಧಿಕಾರ ಹಿಡಿದೇ ತೀರಬೇಕು ಎಂಬ ತುಡಿತದಲ್ಲಿರುವ ಕಾಂಗ್ರೆಸ್‌ಗೆ ಅಶೋಕ್ ಕುಮಾರ್ ರೈ ಅವರು ಅನಿವಾರ್ಯವಾಗಿ ಸಿಕ್ಕಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ವಿನಯ್ ಕುಮಾರ್ ಸೊರಕೆ ಅವರು ಪುತ್ತೂರಿನಲ್ಲಿ ಶಾಸಕರಾಗಿ ನಿಂತು, ಬಳಿಕ ಸೋಲುಂಡಿದ್ದರು. ನಂತರ ಮತ್ತೊಮ್ಮೆ ಪುತ್ತೂರು ಕ್ಷೇತ್ರವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಭರವಸೆ ಮೂಡಿಸಿದ್ದು ಶಾಸಕಿಯಾಗಿ ಶಕುಂತಳಾ ಶೆಟ್ಟಿ. ಆ ಕನಸು ಮತ್ತೆ ಕಮರಿತು. ಕಾಂಗ್ರೆಸನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವವರು, ಎಲ್ಲರನ್ನು ಜೊತೆಗೆ ಕೊಂಡೊಯ್ಯುವ ಅಭ್ಯರ್ಥಿಯ ಅಗತ್ಯ ಪುತ್ತೂರು ಕಾಂಗ್ರೆಸ್‌ಗೆ ಖಂಡಿತಾ ಇತ್ತು. ಟಿಕೇಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದೇ ಇದ್ದರೂ, ಭಿನ್ನಮತೀಯರನ್ನು ಸಮಾಧಾನಿಸಿ ಪಕ್ಷ ಮುನ್ನಡೆಸುವ ಚಾಕಚಕ್ಯತೆ ಬೇಕಲ್ಲವೇ? ಇಂತಹ ಸಂದರ್ಭದಲ್ಲಿ ಹೊರಬಿದ್ದದ್ದೇ ಅಶೋಕ್ ಕುಮಾರ್ ರೈ ಹೆಸರು. ಇತ್ತೀಚೆಗಷ್ಟೇ ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ, ಶಾಸಕ ಸ್ಥಾನದ ಟಿಕೇಟ್ ಹೆಚ್ಚು-ಕಡಿಮೆ ಅಂತಿಮಗೊಂಡಿದೆ ಎಂದೇ ಹೇಳಬಹುದು.
ಇನ್ನುಳಿದಂತೆ ಕಾಂಗ್ರೆಸ್‌ನಲ್ಲಿ ಘಟಾನುಘಟಿ ನಾಯಕರ ಪಟ್ಟಿಯೇ ಇದೆ. ಕಾವು ಹೇಮನಾಥ ಶೆಟ್ಟಿ ಅವರು ಪಕ್ಷದ ಹಲವು ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದವರು. ಹಲವು ಅವಧಿಗಳಲ್ಲಿ ಶಾಸಕ ಅಭ್ಯರ್ಥಿಯಾಗಬೇಕೆಂದು ಪ್ರಬಲ ಬೇಡಿಕೆ ಮುಂದಿಟ್ಟವರು. ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ, ತಮ್ಮ ಬೇಡಿಕೆಯನ್ನು ಮುಂದಿಟ್ಟು ಬಂದಿದ್ದಾರೆ. ಇನ್ನೊಂದೆಡೆ, ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಅವರು ಟಿಕೇಟ್ ರೇಸ್‌ನಲ್ಲಿದ್ದಾರೆ. ಶಕುಂತಳಾ ಶೆಟ್ಟಿಯೂ ತನಗೆ ಟಿಕೇಟ್ ಸಿಗಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ. ಇವರೆಲ್ಲರಲ್ಲಿ ಪಕ್ಷದ ಆಯ್ಕೆ ಯಾರು? ಕಾದು ನೋಡಬೇಕಷ್ಟೇ.
ಶಕುವಕ್ಕ ನಿವೃತ್ತಿ?: ಅಶೋಕ್ ಕುಮಾರ್ ರೈ ಅವರನ್ನು ಕಾಂಗ್ರೆಸ್‌ಗೆ ಕರೆತಂದದ್ದು, ಮಾತ್ರವಲ್ಲ ತನ್ನ ಉತ್ತರಾಧಿಕಾರಿ ಎಂಬಂತೆ ಕೆಲಸ ನಿರ್ವಹಿಸುತ್ತಿರುವವರು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ. ಸ್ವತಃ ತಾನೂ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿ ಎಂದು ಹೇಳಿಕೊಂಡು ಓಡಾಡಿದರೂ, ಕಾರ್ಯವೈಖರಿಯಲ್ಲಿ ಮೊದಲಿನ ಖದರು ಇಲ್ಲ. ಅಶೋಕ್ ರೈ ಅವರನ್ನು ಕಾಂಗ್ರೆಸ್‌ಗೆ ಪರಿಚಯಿಸಿದರಲ್ಲಿ ಶಕುಂತಳಾ ಶೆಟ್ಟಿ ಅವರದ್ದು ಒಂದು ಸ್ವಾರ್ಥವೂ ಇದೆ. ಅದೇನೆಂದರೆ, ಇನ್ನೊಮ್ಮೆ ಚುನಾವಣೆಗೆ ನಿಂತು ಗೆಲ್ಲುವಷ್ಟು ಶಕ್ತೆ ತಾನಲ್ಲ ಎಂಬ ಸತ್ಯ ಶಕುಂತಳಾ ಶೆಟ್ಟಿ ಅವರಿಗೆ ಅರಿವಾಗಿದೆ. ಹಾಗಾಗಿ ಅಶೋಕ್ ಕುಮಾರ್ ರೈ ಅವರನ್ನು ಶಾಸಕ ಸ್ಥಾನಕ್ಕೆ ಆಯ್ಕೆ ಮಾಡಿ, ಗೆದ್ದರೆ, ಕೈ ಅಭ್ಯರ್ಥಿಯನ್ನು ಗೆಲ್ಲಿಸಿದೆ ಎಂದಾಗುತ್ತದೆ. ಮಾತ್ರವಲ್ಲ, ಮುಂದೆ ತನ್ನ ‘ಹವಾ’ವನ್ನು ಹೀಗೆ ಮುಂದುವರಿಸಬಹುದು ಎನ್ನುವುದು ಅವರ ಲೆಕ್ಕಾಚಾರ ಎಂಬ ವಿಶ್ಲೇಷಣೆ ಇದೆ. ಅಂದರೆ ತಾನು ನಿಧಾನವಾಗಿ ನಿವೃತ್ತಿ ಅಂಚಿಗೆ ಸರಿಯುವ ಸುಳಿವು ಇದು ಎಂದು ಬೇರೆ ಹೇಳಬೇಕಾಗಿಲ್ಲ.
ಆಪ್ ಓಡಾಟ: ಆಮ್ ಆದ್ಮಿ ಪಕ್ಷ ಪುತ್ತೂರು ಪೇಟೆಯಲ್ಲಿ ಸದ್ದಿಲ್ಲದೇ ಕಾರ್ಯಾಚರಣೆ ಮಾಡುತ್ತಿದೆ. ತಳಮಟ್ಟದಲ್ಲಿ ಜನಸಾಮಾನ್ಯರನ್ನು ತಲುಪಿ, ಅವರಿಗೆ ಆಮ್ ಆದ್ಮಿ ಪಕ್ಷದ ಬಗ್ಗೆ ತಿಳಿಹೇಳುತ್ತಿದೆ. ಪ್ರಜಾಪ್ರಭುತ್ವದ ಆಶಯಗಳನ್ನು ಜನರ ಕಿವಿಗೆ ಹಾಕುತ್ತಿದೆ. ಇದೆಲ್ಲಾ ಈ ಬಾರಿಯ ಚುನಾವಣೆಗೆ ದೊಡ್ಡ ಪ್ರಭಾವ ಬೀರಲಿಕ್ಕಿಲ್ಲ. ಆದರೂ ಕಾಂಗ್ರೆಸ್, ಬಿಜೆಪಿ ಹೊರತುಪಡಿಸಿದರೆ ಆಮ್ ಆದ್ಮಿ ಪಕ್ಷದ ಹೆಸರು ಮಾತ್ರ ಕೇಳಿಬರುತ್ತಿದೆ. ಜೆಡಿಎಸ್ ಇನ್ನೂ ಆಖಾಡಕ್ಕೆ ಧುಮುಕ್ಕಿಲ್ಲ. ಎಸ್‌ಡಿಪಿಐ ಶಾಫಿ ಬೆಳ್ಳಾರೆ ಹೆಸರು ಹಿಡಿದುಕೊಂಡು, ಗಿಮಿಕ್ ಆಟದಲ್ಲಿ ಮಗ್ನವಾಗಿದೆ.
ವರದಿ: ಗಣೇಶ್ ಎನ್. ಕಲ್ಲರ್ಪೆ