ಸುಳ್ಯ: ರಾಜ್ಯದಲ್ಲಿ ಚುನಾವಣಾ ಕಾವು ದಿನೇದಿನೇ ಜೋರಾಗುತ್ತಿದೆ. ಎಲ್ಲಾ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವುದು ಹೇಗೆ ಎನ್ನುವ ಲೆಕ್ಕಾಚಾರದಲ್ಲಿ ನಿರತವಾಗಿದೆ. ಈ ನಡುವೆ ದಕ್ಷಿಣ ಕನ್ನಡದ ಎರಡು ಪ್ರಮುಖ ಕ್ಷೇತ್ರಗಳಲ್ಲಿ ಕ್ಷೇತ್ರಗಳಲ್ಲಿ ಬಿಜೆಪಿ ತಲೆಬಿಸಿ ಜೋರಾಗಿದೆ.
ಬಿಜೆಪಿಯ ಭದ್ರಕೋಟೆ ಎಂದೇ ಕರೆಯಲ್ಪಡುವ ಪುತ್ತೂರು, ಸುಳ್ಯದಲ್ಲಿ ಬಿಜೆಪಿಗೆ ಟಿಕೆಟ್ ಟೆನ್ಶನ್ ಶುರುವಾಗಿದೆ. ಈ ಪ್ರದೇಶದಲ್ಲಿ ಆಕಾಂಕ್ಷಿಗಳ ಪಟ್ಟಿ ಜೋರಾಗಿದ್ದು, ಇದರೊಂದಿಗೆ ಎರಡು ಕ್ಷೇತ್ರಗಳಲ್ಲಿ ಬಿಜೆಪಿಯ ಹಾಲಿ ಶಾಸಕರ ವಿರುದ್ಧವೇ ಆಕ್ರೋಶ ಹೆಚ್ಚಿದೆ.
ಸಂಘದಿಂದ ಆಂತರಿಕ ಸಮೀಕ್ಷೆ: ಪುತ್ತೂರು, ಸುಳ್ಯದಲ್ಲಿ ಬಿಜೆಪಿ ಶಾಸಕರ ವಿರುದ್ಧ ಅಸಮಾಧಾನವಿದ್ದು, ಬಿಜೆಪಿಯ ಬದಲು ಹಿಂದು ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ನಾಯಕರಿಗೆ ಟಿಕೆಟ್ ಕೊಡುವಂತೆ ಒತ್ತಾಯ ಜೋರಾಗಿದೆ. ಆಕಾಂಕ್ಷಿಗಳು ಹೆಚ್ಚಾದ ಹಿನ್ನಲೆಯಲ್ಲಿ ಆರ್‌ಎಸ್‌ಎಸ್‌ನಿಂದ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ. ಈಗಾಗಲೇ ಸಂಘದ ವಿಸ್ತಾರಕರಿಂದ ಸಮೀಕ್ಷೆ ನಡೆಸುವಂತೆ ತಿಳಿಸಲಾಗಿದೆ. ಈ ವರದಿಯನ್ನು ಆರೆಸ್ಸೆಸ್ ಸ್ವತಃ ಹೈಕಮಾಂಡ್‌ಗೆ ನೀಡಲಿದೆ.
ಅಂಗಾರ ರಾಜಕೀಯದಿಂದ ದೂರ ?
ಸುಳ್ಯದಲ್ಲಿ ಕಳೆದ ಆರು ಅವಧಿಯಲ್ಲಿ ಶಾಸಕರಾಗಿ ಎರಡು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿರುವ ಎಸ್. ಅಂಗಾರರು ರಾಜಕೀಯದಿಂದ ದೂರ ಉಳಿಯುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಸಚಿವರಾಗಿದ್ದರೂ ಕ್ಷೇತ್ರದಲ್ಲಿ ಹೇಳಿಕೊಳ್ಳುವ ಕೆಲಸ ಮಾಡಿಲ್ಲ ಎಂಬುದು ಸ್ವತಃ ಬಿಜೆಪಿಗರ ಅಭಿಪ್ರಾಯವೂ ಹೌದು. ಇದೇ ಕಾರಣಕ್ಕೆ ಪಕ್ಷದಲ್ಲಿ ಅಸಮಾನತೆ ಇದೆ. ಇತ್ತೀಚೆಗೆ ಅಭಿವೃದ್ಧಿ ಕುರಿತು ಸ್ಥಳೀಯರು ಪ್ರಶ್ನೆ ಮಾಡಿದ ಸಂದರ್ಭ ಸಚಿವರು ಗರಂ ಆಗಿದ್ದು, ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಮೀಸಲು ಕ್ಷೇತ್ರವಾಗಿರುವ ಸುಳ್ಯ ಅಭಿವೃದ್ಧಿ ವಿಚಾರದಲ್ಲಿ ದಶಕಗಳ ಹಿಂದಿದೆ ಎಂಬುದು ಸತ್ಯ. ರಸ್ತೆ, ಸೇತುವೆ ಸೇರಿದಂತೆ ಸುಳ್ಯದ ಕೆಲ ಪ್ರದೇಶಗಳು ಮಳೆಗಾಲದ ವೇಳೆ ದ್ವೀಪದಂತಾಗುತ್ತದೆ. ಅಡಕೆ ಹಳದಿ ಎಲೆ ರೋಗದಿಂದ ಎಕರೆಗಟ್ಟಲೇ ಪ್ರದೇಶದ ತೋಟಗಳು ನಿರ್ನಾಮವಾಗಿದ್ದು, ಬೆಳೆಗಾರರ ಬದುಕು ಬೀದಿಗೆ ಬಿದ್ದಿದೆ. ಈ ಬಗ್ಗೆ ಸರ್ಕಾರ, ಸಚಿವರು ಭರವಸೆ ನೀಡುವುದನ್ನು ಬಿಟ್ಟರೆ ಬೇರೇನು ಮಾಡಿಲ್ಲ ಎಂಬ ಆಕ್ರೋಶವಿದೆ. ಈ ನಿಟ್ಟಿನಲ್ಲಿ ಆಂತರಿಕ ಸಮೀಕ್ಷೆ ಮಹತ್ವ ಪಡೆದಿದೆ.
ಪುತ್ತೂರಿನ ಬಿಜೆಪಿ ಅಭ್ಯರ್ಥಿ ಯಾರು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪುತ್ತೂರು ಸಂಘ ಪರಿವಾದ ಗಟ್ಟಿ ಬೇರಿರುವ ಕ್ಷೇತ್ರ. 1999ರಲ್ಲಿ ಡಿ.ವಿ. ಸದಾನಂದ ಗೌಡ, 2004ರಲ್ಲಿ ಶಕುಂತಳಾ ಶೆಟ್ಟಿ, 2008ರಲ್ಲಿ ಮಲ್ಲಿಕಾ ಪ್ರಸಾದ್, 2018ರಲ್ಲಿ ಸಂಜೀವ ಮಠಂದೂರು ಹಿಂದುತ್ವದ ಆಧಾರದಲ್ಲಿಯೇ ಜಯಗಳಿಸಿದ್ದರು. 2013ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಶಕುಂತಳಾ ಶೆಟ್ಟಿ ಜಯಗಳಿಸಿದ್ದನ್ನು ಹೊರತುಪಡಿಸಿ ಇತ್ತೀಚಿನ ಎರಡು ದಶಕದಲ್ಲಿ ಕೈ ಪಾಳಯಕ್ಕೆ ಜಯದ ಅವಕಾಶವೇ ದೊರೆತಿಲ್ಲ. 1997ರಿಂದ ಇಂದಿನವರೆಗೆ ಹಿಂದು ಸಮಾವೇಶಗಳ ಮೂಲಕ ಬಿಜೆಪಿ ಸಂಘಟನೆಗೆ ಶ್ರಮಿಸಿದ ಸೂಕ್ತ ಅರುಣ್ ಕುಮಾರ್ ಪುತ್ತಿಲ ಅವರಿಗೆ ಸ್ಥಾನಮಾನ ನೀಡಿಲ್ಲ ಎಂಬ ಆಕ್ರೋಶ ಅವರ ಹಿಂಬಾಲಕರಿಗಿದೆ. ಈ ನಿಟ್ಟಿನಲ್ಲಿಪುತ್ತೂರು ಕ್ಷೇತ್ರದಲ್ಲಿ ಶಾಸಕ ಸಂಜೀವ ಮಠಂದೂರು ವಿರುದ್ದ ಕಾರ್ಯಕರ್ತರೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶಾಸಕರಾದ ಬಳಿಕ ಚುನಾವಣೆ ಗೆಲ್ಲಿಸಲು ಕಾರಣವಾದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂಬುದು ಸಿಟ್ಟಿಗೆ ಕಾರಣ. ಇದಲ್ಲದೆ ಇನ್ನೂ ಅನೇಕ ಕಾರಣಗಳಿಗೆ ಈ ಎರಡೂ ಕ್ಷೇತ್ರಗಳ ಟಿಕೆಟ್ ಹಂಚಿಕೆ ಬಿಜೆಪಿಗೆ ಇದೇ ಮೊದಲ ಬಾರಿಗೆ ಕಗ್ಗಂಟಾಗಿದೆ.
ಮಳೆಗಾಲದ ಅಣಬೆ ಹೇಳಿಕೆ ವಿವಾದ:
ಪುತ್ತೂರು ಶಾಸಕ ಸಂಜೀವ ಮಠಂದೂರು, ಅರುಣ್ ಕುಮಾರ್ ಪುತ್ತಿಲ ಅವರನ್ನು ಮಳೆಗಾಲದ ಅಣಬೆಗೆ ಹೋಲಿಸಿದ್ದು, ವಿವಾದಕ್ಕೆ ಕಾರಣವಾಗಿತ್ತು. ಕೆಲವರು ಮಳೆಗಾಲದ ಅಣಬೆಯಂತೆ ಎಲೆಕ್ಷನ್ ಹತ್ತಿರವಾಗುತ್ತಿದ್ದಂತೆ ಚುರುಕಾಗುತ್ತಾರೆ ಎಂದು ಅಣಕಿಸಿದ್ದು ಹಿಂದು ಸಂಘಟನೆ ಕಾರ್ಯಕರ್ತರ ಆಕ್ರೋಶಕ್ಕೆ ತುತ್ತಾಗಿತ್ತು.