ಉಡುಪಿ: ದೇಶದ 6.50 ಲಕ್ಷ ಕೋಟಿ ಮೌಲ್ಯದ ರಾಷ್ಟ್ರೀಯ ಸಂಪತ್ತನ್ನು ಆರ್ಥಿಕ ಕ್ರೋಢೀಕರಣದ ನೆಪದಲ್ಲಿ ತನ್ನವರಿಗೆ ಪರಭಾರೆ ಮಾಡಿ, 3ನೇ ಸ್ಥಾನದಲ್ಲಿದ್ದ ದೇಶವನ್ನು ವಿಶ್ವದ ಅಭಿವೃದ್ಧಿ ಶೀಲ ಪಟ್ಟಿಯಿಂದ 196ನೇ ಸ್ಥಾನಕ್ಕಿಳಿಸಿದ ಬಿಜೆಪಿಯ ಡಬಲ್ ಇಂಜಿನ್ ಆಡಳಿತವನ್ನು ಕಾಂಗ್ರೆಸ್ ಪಕ್ಷದ 70 ವರ್ಷದ ಸಮಗ್ರ ಅಭಿವೃದ್ಧಿಯ ಸುವರ್ಣ ಯುಗದೊಂದಿಗೆ ಹೋಲಿಸಲಾಗದು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಇತ್ತೀಚೆಗೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂಸದ ತೇಜಸ್ವಿಸೂರ್ಯ ಹೇಳಿಕೆಯೊಂದಕ್ಕೆ ಪ್ರತಿಕ್ರಿಯಿಸಿದೆ.
ಉದ್ಯೋಗವನ್ನು ರಸ್ತೆಗೆ ಡಾಮರು ಜಲ್ಲಿ ಹಾಕುವುದಕ್ಕೆ, ಚರಂಡಿ ನಿರ್ಮಾಣ, ಬೀದಿಬದಿ ಪಕೋಡಾ ಮಾರುವುದಕ್ಕೆ ಸೀಮಿತಗೊಳಿಸಿರುವ ಬಿಜೆಪಿ ನಾಯಕರಿಗೆ, ಉದ್ಯೋಗದ ಆಧ್ಯತೆ ಮತ್ತು ಬಡತನದ ಅನುಭವ ಆಗಿಲ್ಲವೆಂದು ಕಾಣುತ್ತದೆ. ಬಿಜೆಪಿಯ ಆರ್ಥಿಕ ನೀತಿಯಿಂದಾಗಿ ವಿವಿಧ ಕ್ಷೇತ್ರಗಳಲ್ಲಿ ವಾರ್ಷಿಕ ಸರಿಸುಮಾರು 2ಕೋಟಿ ಉದ್ಯೋಗ ನಷ್ಟ ಸಂಭವಿಸುತ್ತಿದ್ದು ಅಭಿವೃದ್ದಿ ಎನ್ನುವುದು ವರ್ತಮಾನದ ಪರಿಸ್ಥಿತಿಯಲ್ಲಿ ಮರೀಚಿಕೆಯಾಗಿದೆ. ದೇಶದ ಯುವ ವಿದ್ಯಾವಂತ (ಉನ್ನತ ತಾಂತ್ರಿಕ ವೈದ್ಯಕೀಯ) ಉದ್ಯೋಗಾಕಾಂಕ್ಷಿಗಳ ಶೇ. 42 ರಷ್ಠು ಮಂದಿ ಅನ್ಯದೇಶಗಳಿಗೆ ವಲಸೆ ಹೋಗುತ್ತಿರುವುದು ದೇಶದ ದೌರ್ಭಾಗ್ಯ. ಬಹುಶ ಇದನ್ನು ಅರ್ಥಮಾಡಿ ಜೀರ್ಣಿಸುವ ಶಕ್ತಿ ಈ ಬಿಜೆಪಿ ನಾಯಕರಿಗಿಲ್ಲ ಎಂದು ಕಾಂಗ್ರೆಸ್ ಹೇಳಿದೆ.
ಚುನಾವಣೆ ವೇಳೆ ರಾಜಧರ್ಮ ಜಪ: ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಿಜೆಪಿಗೆ ರಾಜಧರ್ಮದ ಕನಸು ಬೀಳುತ್ತಿದೆ. ಈ ದೇಶದ ಮತದಾರ ಕೊಡುವ ಒಂದೊಂದು ಮತ ಈ ದೇಶದ ಸಮಗ್ರತೆ ಸೌಹಾರ್ದತೆ ಮತ್ತು ಅಭಿವೃದ್ಧಿಯನ್ನು ಎತ್ತಿ ಹಿಡಿಯಬಲ್ಲ ರಾಷ್ಟ್ರೀಯ ಶಕ್ತಿಯಾಗಿ ಹೊರಹೊಮ್ಮ ಬೇಕೇ ಹೊರತು ಅದು ದೇಶದ ಆಂತರಿಕ ಸೌಹಾರ್ದ ಕೆಡಿಸುವ ಪ್ರಜಾತಂತ್ರ ವಿರೋಧಿ ಮನುವಾದಿ ಶಕ್ತಿಗಳನ್ನು ಪ್ರೋತ್ಸಾಹಿಸುವಂತಿರ ಬಾರದು. ಆ ನೆಲೆಯಲ್ಲಿ ಈ ದೇಶದ ಬುದ್ಧಿವಂತ ಮತದಾರ ಮುಂದಿನ ಚುನಾವಣೆಗಳಲ್ಲಿ ದೇಶವನ್ನು ಬಿಜೆಪಿಯ ಜನವಿರೋಧಿ ಆಡಳಿತದಿಂದ ಮುಕ್ತವಾಗಿಸಲಿದ್ದಾರೆ. ಎಂದು ಕಾಂಗ್ರೆಸ್ ಹೇಳಿದೆ.
ಪ್ರೋಗ್ರೆಸ್ ಕಾರ್ಡ್ ತಿದ್ದುವ ಸಚಿವ ಸುನೀಲ್: ಸಚಿವ ಸುನೀಲ್ ಕುಮಾರ್ ಪ್ರೋಗ್ರೆಸ್ ಕಾಡ್೯ ತಿದ್ದುವುದರಲ್ಲಿ ಜಾಣರೆಂದು ಈ ಕ್ಷೇತ್ರದ ಜನರಿಗೆ ಈಗಾಗಲೇ ತಿಳಿದಿದೆ. ಅವರ ಅಭಿವೃದ್ದಿ ಪತ್ರದ ಅಸಲಿಯತ್ತನ್ನು ಬಟಾಬಯಲು ಮಾಡಲು ಅವರ ಪಕ್ಷದ ಬಿ’ಟೀಮ್ ಈಗಾಗಲೇ ಸಿದ್ಧವಾಗಿದೆ. ಆ ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಅಪ ಪ್ರಚಾರದ ಕ್ಷುದ್ರ ರಾಜಕೀಯ ಮಾಡದು. ಅದು ಕೇವಲ ಬಿಜೆಪಿ ಸಂಸ್ಕೃತಿ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.