News Kannada
Monday, September 25 2023
ಮಂಗಳೂರು

ಸುಳ್ಯ ಬಿಜೆಪಿ ಅಭ್ಯರ್ಥಿ ಬದಲಾವಣೆ ಗಾಳಿ, ಕಾಂಗ್ರೆಸ್‌ಗೂ ಹೊಸ ಮುಖ

Belthangady assembly constituency: Rakshit from Congress, Harish Poonja from BJP
Photo Credit : News Kannada

ಸುಳ್ಯ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು ಬಿಜೆಪಿ ಭದ್ರ ಕೋಟೆ ಎಂದೇ ಖ್ಯಾತಿ ಗಳಿಸಿರುವ ದಕ್ಷಿಣ ಕನ್ನಡದತ್ತ ಜನ ನಾಯಕರ ಚಿತ್ತ ಹೊರಳಿದೆ. ಚುನಾವಣೆ ಸಮೀಪಿಸುವ ಈ ಹೊತ್ತಿನಲ್ಲಿ ಕುತೂಹಲಕ್ಕೆ ಕಾರಣವಾಗುವುದು ಇಲ್ಲಿ ನಡೆಯುವ ರಾಜಕೀಯ ಬೆಳವಣಿಗೆ ಹಾಗೂ ಕೋಮು ಗಲಭೆಗಳೇ ಎಂದರೆ ತಪ್ಪಾಗದು. ಹೀಗಿರುವಾಗ ಸುಳ್ಯ ಕ್ಷೇತ್ರದಲ್ಲಿ ೧೯೯೪ ರಿಂದ ೨೦೧೮ರ ತನಕ ಸತತವಾಗಿ ಗೆಲುವು ಸಾಧಿಸಿಕೊಂಡು ಬಂದ ಬಿಜೆಪಿಯಲ್ಲಿ ಅಭ್ಯರ್ಥಿ ಬದಲಾವಣೆ ಗಾಳಿ ಬೀಸತೊಡಗಿದೆ. ಅದರಂತೆ ಕಾಂಗ್ರೆಸ್‌ ಕೂಡ ಹೊಸ ಮುಖ ಪರಿಚಯಿಸುವ ತವಕದಲ್ಲಿದೆ.

ಪುತ್ತೂರು ಉಪವಿಭಾಗಕ್ಕೆ ಸೇರಿದ್ದ ಸುಳ್ಯ ೧೯೬೫ರಲ್ಲಿ ಸ್ವತಂತ್ರ ತಾಲೂಕಾಯಿತು. ದೊಡ್ಡ ತಾಲೂಕಾದ ಸುಳ್ಯದ ಕಡಬ ಮತ್ತದರ ಸುತ್ತಲಿನ ಗ್ರಾಮಗಳನ್ನು ಪ್ರತ್ಯೇಕಿಸಿ ಹೊಸ ತಾಲೂಕು ರಚಿಸುವಂತೆ ಎರಡು ದಶಕಗಳ ಕಾಲ ಹೋರಾಟ ನಡೆದಿತ್ತು. ೨೦೧೮ರಲ್ಲಿ ಸುಳ್ಯ-ಪುತ್ತೂರು ಮತ್ತು ಬೆಳ್ತಂಗಡಿಯ ಕೆಲವು ಹಳ್ಳಿಗಳನ್ನು ಸೇರಿಸಿ ಕಡಬ ತಾಲೂಕು ಘೋಷಿಸಲಾಗಿದೆ. ಇನ್ನು ಬಹುಜನ ಸಮಾಜವೇ ದೊಡ್ಡದಿರುವ ಸುಳ್ಯ ಮೊದಲ ವಿಧಾನಸಭಾ ಚುನಾವಣೆಯಿಂದಲೂ ರಾಜ್ಯದ ಏಕೈಕ ದಲಿತ ಮೀಸಲು ಕ್ಷೇತ್ರ.

ರಾಜ್ಯದ ಏಕೈಕ ದಲಿತ ಮೀಸಲು ಕ್ಷೇತ್ರ: ಇನ್ನು ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಹಲವು ಬಾರಿಯಾದರೂ ಸುಳ್ಯದ ಮೀಸಲಾತಿ ಮಾತ್ರ ಬದಲಾಗಿಲ್ಲ. ಮೊದಲು ಪುತ್ತೂರು ಕ್ಷೇತ್ರದೊಂದಿಗೆ ಸೇರಿಕೊಂಡಿದ್ದ ಸುಳ್ಯ ದ್ವಿಸದಸ್ಯ ಕ್ಷೇತ್ರವಾಗಿತ್ತು. ಇನ್ನು ೧೯೬೨ರಲ್ಲಿ ಸುಳ್ಯ ಸ್ವತಂತ್ರ ಕ್ಷೇತ್ರವಾಯಿತಾದರೂ ಮೀಸಲಾತಿ ಬದಲಾಗಲಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಈ ಕ್ಷೇತ್ರ ಕಾಯ್ದಿಡಲಾಯಿತು. ೧೯೭೨ರಿಂದ ಪರಿಶಿಷ್ಟ ಜಾತಿಯವರಿಗೆ ಮಾತ್ರ ಸ್ಪರ್ಧೆಗೆ ಅವಕಾಶವಾಗಿರುವುದು ಕಂಡುಬರುತ್ತದೆ.

೨೦೧೩ರಲ್ಲಿ ಬಿಜೆಪಿ ಕೈ ಹಿಡಿದಿದ್ದ ಕರಾವಳಿ ಜಿಲ್ಲೆಯ ಏಕೈಕ ಕ್ಷೇತ್ರ: ೧೯೬೨ರಲ್ಲಿ ಸುಳ್ಯ ಸ್ವತಂತ್ರ ಕ್ಷೇತ್ರವಾಯಿತಾದರೂ ಮೀಸಲಾತಿ ಬದಲಾಗಲಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಈ ಕ್ಷೇತ್ರ ಕಾಯ್ದಿಡಲಾಯಿತು. ೧೯೭೨ರಿಂದ ಪರಿಶಿಷ್ಟ ಜಾತಿಯವರಿಗೆ ಮಾತ್ರ ಸ್ಪರ್ಧೆಗೆ ಅವಕಾಶವಾಗಿರುವುದು ಕಂಡುಬರುತ್ತದೆ. ಮುಂದೆ ೧೯೮೫, ೮೯ರ ಚುನಾವಣೆಯಲ್ಲಿ ಸುಳ್ಯದಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿತಾದರೂ ೧೯೯೪ರಲ್ಲಿ ಮರಳಿ ಕ್ಷೇತ್ರ ಬಿಜೆಪಿ ತೆಕ್ಕೆಗೆ ಬಂತು. ನಂತರ ಒಮ್ಮೆಯೂ ಇಲ್ಲಿ ಬಿಜೆಪಿ ಸೋತಿದ್ದಿಲ್ಲ. ೧೯೯೪, ೧೯೯೯, ೨೦೦೪, ೨೦೦೮, ೨೦೧೩, ೨೦೧೮ ಹೀಗೆ ಸತತ ೬ ಚುನಾವಣೆಗಳಲ್ಲಿ ಬಿಜೆಪಿಯ ಎಸ್ ಅಂಗಾರ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇನ್ನು ೨೦೧೩ರಲ್ಲಿ ದಕ್ಷಿಣ ಕನ್ನಡದ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಸೋತಾಗ ಗೆದ್ದ ಏಕೈಕ ಕಮಲ ಪಕ್ಷದ ಅಭ್ಯರ್ಥಿ ಅಂದರೆ ಎಸ್ ಅಂಗಾರ ಆಗಿದ್ದಾರೆ. ತಮ್ಮ ಗೆಲುವಿನ ಮೂಲಕ ಕರಾವಳಿ ಜಿಲ್ಲೆಯಲ್ಲಿ ಅವರು ಬಿಜೆಪಿಯ ಮಾನ ಉಳಿಸಿದ್ದರು. ಇನ್ನು ಇಲ್ಲಿ ವರ್ಷದಿಂದ ವರ್ಷಕ್ಕೆ ಗೆಲುವಿನ ಅಂತರ ಕಡಿಮೆಯಾಗುತ್ತಿದ್ದುದು, ೨೦೧೮ರ ಚುನಾವಣೆಯಲ್ಲಿ ಮತ್ತೆ ಅಂಗಾರ ಭಾರೀ ಅಂತರದಿಂದ ತಮ್ಮ ಎದುರಾಳಿಯನ್ನು ಸೋಲಿಸಿರುವುದು ಬಿಜೆಪಿಯನ್ನು ಕೊಂಚ ನಿರಾಳವನ್ನಾಗಿಸಿದೆ.

See also  ಸಕಲೇಶಪುರ: ಬೆಳಗೋಡು, ಗೋಳಗೊಂಡೆ ಗ್ರಾಮದ ಸುತ್ತಮುತ್ತ ಕಾಡಾನೆ ಓಡಾಟ

ಈ ಬಾರಿ ಅಭ್ಯರ್ಥಿಗಳಾರು?: ಮೀಸಲು ಕ್ಷೇತ್ರದಲ್ಲಿ ಕೇಸರಿ ಪಡೆ ನಿರಂತರವಾಗಿ ಜಯ ದಾಖಲಿಸಿಕೊಳ್ಳುತ್ತಿದ್ದರೂ, ಇತ್ತ ಕಾಂಗ್ರೆಸ್? ಸೋಲಿಲ್ಲದ ಸರದಾರ ಅಂಗಾರರನ್ನು ಸೋಲಿಸಲು ತುದಿಗಾಲಿಲ್ಲ ನಿಂತಿದೆ. ಈ ನಿಟ್ಟಿನಲ್ಲಿ ವಿರೋಧ ಪಕ್ಷವೂ ಈ ಕ್ಷೇತ್ರದಲ್ಲಿ ಬಲೆ ಹೆಣೆಯಲಾರಂಭಿಸಿದ್ದು, ಜನ ಸಾಮಾನ್ಯರ ಗಮನ ಸೆಳೆಯಲು ಪ್ಲಾನ್ ಮಾಡಿದೆ.

ರಾಜಕೀಯ ಜೀವನಕ್ಕೆ ನಿವೃತ್ತಿ ಹಾಡ್ತಾರಾ ಅಂಗಾರ!?: ಸಚಿವ ಅಂಗಾರ ತನ್ನ ರಾಜಕೀಯ ಜೀವನಕ್ಕೆ ನಿವೃತ್ತಿ ಘೋಷಿಸಲಿದ್ದಾರೆ ಎಂಬ ವಿಚಾರ ಸುಳ್ಯ ರಾಜಕೀಯ ವಲಯದಲ್ಲಿ ಗುಲ್ಲೆದ್ದಿದೆ. ಸಚಿವ ಸ್ಥಾನ ಸಿಕ್ಕಿದ ಬಳಿಕ ತನ್ನ ಸುದೀರ್ಘ ರಾಜಕೀಯ ಜೀವನಕ್ಕೆ ನಿವೃತ್ತಿ ಘೋಷಿಸಿ ವಿಶ್ರಾಂತ ಜೀವನ ನಡೆಸಲಿದ್ದಾರಂತೆ. ಸತತ ಆರು ಬಾರಿ ಸುಳ್ಯ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದರೂ ಕೂಡ ಗೆಲವುವಿನ ಅಂತರ ಕಡಿಮೆಯಾಗುತ್ತಾ ಹೋಗುತ್ತಿದೆ. ಜೊತೆಗೆ ಜನಸಾಮಾನ್ಯ ಮಾತ್ರವಲ್ಲ ಸಂಘ ಪರಿವಾರ ಮತ್ತು ಬಿಜೆಪಿ ಪಾಳಯದಲ್ಲಿ ಕೂಡ ಈ ಬಾರಿ ಅಂಗಾರರನ್ನು ಬಿಟ್ಟು ಹೊಸ ಅಭ್ಯರ್ಥಿಯನ್ನು ಇಳಿಸುವ ಸಾಧ್ಯತೆ ಬಗ್ಗೆ ವರಿಷ್ಠರು ಚರ್ಚೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹೇಳಿ ಕೇಳಿ ಅಂಗಾರ ಸೌಮ್ಯ ಸ್ವಭಾವದ ವ್ಯಕ್ತಿ. ಯಾವುದೇ ಪದವಿ, ಮಂತ್ರಿ ಸ್ಥಾನಕ್ಕೆ ಆಸೆ ಪಟ್ಟವರಲ್ಲ. ಮಂತ್ರಿ ಸ್ಥಾನ ಕೂಡ ಕೇಳಿ ಪಡೆದದ್ದಲ್ಲ. ಏನೇ ನಿರ್ಧಾರವಿದ್ದರೂ ಅದು ಪಕ್ಷದ ತೀರ್ಮಾನ. ಅದಕ್ಕೆ ನಾನು ಯಾವತ್ತೂ ತಲೆ ಬಾಗುವೆ ಎಂದು ಮೊದಲಿನಿಂದಲೂ ಹೇಳಿಕೊಂಡ ನಿಷ್ಠಾವಂತ ವ್ಯಕ್ತಿ. ಆದರೆ ಈ ಬಾರಿ ಅಂಗಾರರನ್ನು ಬಿಟ್ಟು ಹೊಸ ಅಭ್ಯರ್ಥಿಯನ್ನು ಇಳಿಸಿದಲ್ಲಿ ಬಿಜೆಪಿ ಸೋಲನ್ನು ಕಾಬಹುದು ಎಂಬ ಮಾತು ಕೂಡ ಕೇಳಿ ಬರುತ್ತಿದೆ.

ಬಿಜೆಪಿ ಪಕ್ಷದಿಂದ ಕಣಕ್ಕಿಳಿಯಲು ಸಾಲು ಸಾಲು ಹೆಸರು:
ಶಿವಪ್ರಸಾದ್ ಪೆರುವಾಜೆ:
ಈ ಬಾರಿ ಬಿಜೆಪಿಯಿಂದ ಉತ್ತಮ ವಿದ್ಯಾವಂತ ಯುವ ಪೀಳಿಗೆಯನ್ನು ಕಣಕ್ಕಿಳಿಸಲು ಬಿಜೆಪಿ ಮತ್ತು ಸಂಘಪರಿವಾರ ಕೆಲ ಹೆಸರುಗಳನ್ನು ಸೂಚಿಸಿದೆ ಎನ್ನಲಾಗಿದೆ. ಅದರಲ್ಲಿ ಮೊದಲು ಕೇಳಿಬರುತ್ತಿರುವ ಹೆಸರು ಶಿವಪ್ರಸಾದ್ ಪೆರುವಾಜೆ. ಬಾಲ್ಯದಿಂದಲೇ ಸಂಘದ ಸಂಪರ್ಕದಿಂದ ಮುನ್ನೆಲೆಗೆ ಬಂದ ೩೧ ವರ್ಷದ ಶಿವಪ್ರಸಾದ್ ಪೆರುವಾಜೆ ಕಳೆದ ೬ ವರ್ಷಗಳಿಂದಲೂ ಹೆಚ್ಚು ಸಂಘದ ಜವಾಬ್ದಾರಿ ನಿರ್ವಹಿಸಿ ತಾಲೂಕಿನ ಕಾರ್ಯಕರ್ತರಿಗೆ ಚಿರಪರಿಚಿತ ಯುವಕರಾಗಿದ್ದಾರೆ. ಸಂಘ ಹೇಳಿದ ಕೆಲಸವನ್ನು ನಿಷ್ಠೆಯಿಂದ ಮಾಡುವ ಪಾದರಸದಂತಹ ವ್ಯಕ್ತಿತ್ವದ ಶಿವಪ್ರಸಾದ್ ಸಮಾಜದ ಎಲ್ಲಾ ವರ್ಗದವರನ್ನು ಸಮಾನವಾಗಿ ಕಾಣುತ್ತ ಎಲ್ಲಾ ಬಣಗಳೊಂದಿಗೆ ಅನ್ಯೋನ್ಯತೆ ಕಾಯ್ದುಕೊಂಡವರು. ಅಭ್ಯರ್ಥಿಗಳ ನಡುವಿನ ತಿಕ್ಕಾಟ ತಾರಕಕ್ಕೇರಿದರೇ ಇದೇ ಹೆಸರು ಬಹುತೇಕ ಅಂತಿಮ. ಆದರೆ ಇನ್ನೂ ಚುನಾವಣಾ ತಯಾರಿಗೆ ಇಳಿಯದೇ ಇರುವುದು ಸ್ವಲ್ಪ ಹಿನ್ನೆಡೆಯಾಗಬಹುದು. ಕಾಲೇಜು ನಾಯಕತ್ವ ನಿಭಾಯಿಸಿರುವ ಅನುಭವ ಇರುವ ಈತ ಬಿಕಾಂ ಪದವೀಧರನಾಗಿದ್ದಾರೆ. ಬಿಜೆಪಿ ಮತ್ತು ಸಂಘಪರಿವಾರದ ಉನ್ನತ ಮಟ್ಟದಲ್ಲಿ ಕೂಡ ಶಿವಪ್ರಸಾದ್ ಹೆಸರು ಮುಂಚೂಣಿಯಲ್ಲಿದೆ ಎಂದು ಹೇಳಲಾಗಿದೆ.

ಪದ್ಮಕುಮಾರ್: ಎಬಿವಿಪಿ ಹಿನ್ನೆಲೆಯ ೨೭ ವರ್ಷದ ಪದ್ಮಕುಮಾರ್ ಗುಂಡಡ್ಕ ಸಂಘದೊಂದಿಗೂ ನಿಕಟ ಸಂಪರ್ಕ ಹೊಂದಿದವರು. ಪ್ರಸ್ತುತ ರಾಜಕೀಯ ಶಾಸ್ತ್ರದ ಉಪನ್ಯಾಸಕರಾಗಿರುವ ಪದ್ಮಕುಮಾರ್ ಉತ್ತಮ ವಾಗ್ಮಿಗಳು ಕೂಡ ಹೌದು. ಇವರ ಪರವಾಗಿ ಪ್ರಬಲ ಬ್ಯಾಟಿಂಗ್ ಮಾಡುವ ತಂಡವು ಈಗಲೇ ಕಾರ್ಯಪ್ರವೃತ್ತವಾಗಿದೆ. ವಯಸ್ಸಿನ ಕಾರಣವೊಂದು ಅಡ್ಡಿಯಾಗದಿದ್ದರೇ ಇವರು ಅಭ್ಯರ್ಥಿಯಾಗಿ ಮುನ್ನೆಲೆಗೆ ಬರಬಹುದು.

See also  ಮಂಗಳೂರು: ನಂದಿನಿ ಮೊಸರು, ಲಸ್ಸಿ, ಮಜ್ಜಿಗೆ ದರ ಅಲ್ಪ ಇಳಿಕೆ

ಮಿಕ್ಕಂತೆ ಬಿಜೆಪಿಯಲ್ಲಿ ಸಾಲು ಸಾಲು ಹೆಸರುಗಳಿವೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಭಾಗೀರಥಿ ಮುರುಳ್ಯ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಚನಿಯ ಕಲ್ತಡ್ಕ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಡಿಕೇರಿ ಸಂಘಪರಿವಾರದ ಪಿಎಂ ರವಿ, ಶಂಕರ್ ಪೆರಾಜೆ, ಶೀನಪ್ಪ ಬಯಂಬು, ವಕೀಲ ಜಗದೀಶ್, ಸಂಜಯಕುಮಾರ್ ಪೈಚಾರು, ಬಜರಂಗದಳ ಲತೀಶ್ ಗುಂಡ್ಯ ಹೀಗೆ ಇವರೆಲ್ಲ ಸ್ಥಳೀಯ ನಾಯಕರಾಗಿದ್ದಾರೆ. ಏನಿದ್ದರೂ ಬಿಜೆಪಿಯಲ್ಲಿ ಸಂಘಪರಿವಾರದ ನಿರ್ಧಾರವೇ ಅಂತಿಮವಾಗಿದೆ.

ಕಾಂಗ್ರೆಸ್‌ಗೆ ಹೊಸ ಮುಖಗಳು: ಅಂಗಾರನ್ನು ನಾಲ್ಕು ಬಾರಿ ಎದುರಿಸಿ ಸೋತಿರುವ ಡಾ. ಎಸ್ ರಘು ಬೆಳ್ಳಿಪ್ಪಾಡಿ ಅವರು ಈ ಬಾರಿ ಚುನಾವಣಾ ಕಣದಿಂದ ದೂರ ಉಳಿದಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಹೊಸ ಮುಖ ಬರುವುದು ಬಹುತೇಕ ಖಚಿತವಾಗಿದೆ. ಇದರ ಬೆನ್ನಲ್ಲೇ ಡಾ. ರಘು ಬೆಳ್ಳಿಪ್ಪಾಡಿ ಅವರ ಇಬ್ಬರ ಮಕ್ಕಳಾದ ಪ್ರಹ್ಲಾದ್ ಮತ್ತು ಅಭಿಷೇಕ್ ಟಿಕೆಟ್ ನೀಡಲು ಕೆಪಿಸಿಸಿಗೆ ಮನವಿ ಮಾಡಿದ್ದಾರೆ. ಮಿಕ್ಕಂತೆ ಮಡಿಕೇರಿ ನಗರ ಸಭೆಯ ಮಾಜಿ ಅಧ್ಯಕ್ಷ, ಉದ್ಯಮಿ, ಕಡಬ ತಾಲೂಕಿನ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ಹಾಗೂ ಕೆಪಿಸಿಸಿ ಸದಸ್ಯರಾಗಿರುವ ಹೆಚ್.ಎಂ. ನಂದಕುಮಾರ. ಮತ್ತೋರ್ವ ಅಭ್ಯರ್ಥಿಯಾಗಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿಯಾಗಿರುವ ಕೆಪಿಸಿಸಿ ಸಂಯೋಜಕರಾದ ಜಿ.ಕೃಷ್ಣಪ್ಪ ಅವರ ಹೆಸರು ಕೂಡ ಮುಂಚೂಣಿಯಲ್ಲಿದೆ. ಮಂಗಳೂರು ಮಾಜಿ ಕಾರ್ಪೋರೇಟರ್ ಅಪ್ಪಿ, ಹೀಗೆ ಹಲವು ಹೆಸರುಗಳು ಕೇಳಿ ಬರುತ್ತಿದೆ.

ಎಎಪಿ ಅಭ್ಯರ್ಥಿ ಘೋಷಣೆ: ಉಳಿದಂತೆ ಆಮ್ ಆದ್ಮಿ ಪಕ್ಷದಿಂದ ಈಗಾಗಲೇ ಅಭ್ಯರ್ಥಿಯ ಘೋಷಣೆಯಾಗಿದೆ. ಸುಳ್ಯದ ಮಾಜಿ ಶಾಸಕರಾಗಿದ್ದ ಕೆ.ಕುಶಲ ಅವರ ಮಗಳು ಸುಮನಾ ಬೆಳ್ಳಾರ್ಕರ್ ಅವರನ್ನು ಅಭ್ಯರ್ಥಿಯೆಂದು ಬಿಂಬಿಸಲಾಗಿದೆ. ಮಿಕ್ಕಂತೆ ಜೆಡಿಎಸ್ ಮತ್ತು ಎಸ್‌ಡಿಪಿಐ ಪಕ್ಷದ ಅಭ್ಯರ್ಥಿಯ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಆಮ್ ಆದ್ಮಿ ಪಕ್ಷದಿಂದ ವಿದ್ಯಾವಂತ ಯುವತಿಗೆ ಟಿಕೆಟ್ ನೀಡಿರುವುದು ಬಿಜೆಪಿ ಜೊತೆಗೆ ಇತರ ಪಕ್ಷಗಳಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪಕ್ಷದೊಳಗಿನ ಗೊಂದಲಗಳು, ಮತ್ತು ವಿದ್ಯಾವಂತರ ಮತಗಳು, ನೋಟಾ ಅಥವಾ ಆಪ್ ಮಡಿಲು ಸೇರಬಹುದು.

ವರದಿ:  ಜಯದೀಪ್‌ ಕುದ್ಕುಳಿ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು