News Kannada
Monday, September 25 2023
ಮಂಗಳೂರು

ಮಂಗಳೂರಿನಲ್ಲಿ ಮೇ 31, ಜೂನ್ 1ರಂದು ರಾಜ್ಯ ಮಟ್ಟದ ಮುಸ್ಲಿಂ ಸಮಾವೇಶ

muslim 1
Photo Credit : News Kannada

ಮಂಗಳೂರು: ಭಾರತದ ದೊಡ್ಡ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲಿಮರ ಸ್ಥಿತಿಗತಿ, ದೇಶದ ರಾಜಕಾರಣ ಹೆಚ್ಚು ಹೆಚ್ಚು ಕೋಮುವಾದೀಕರಣಗೊಳ್ಳುತ್ತಿರುವುದರಿಂದ ಮುಸ್ಲಿಂ ಸಮುದಾಯ ಎದುರಿಸುತ್ತಿರುವ ಬಹು ಆಯಾಮಗಳ ಬಿಕ್ಕಟ್ಟುಗಳ ಹಿನ್ನಲೆಯಲ್ಲಿ ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿಯು ಮಂಗಳೂರಿನ ಪುರಭವನದಲ್ಲಿ ಮೇ 31, ಜೂನ್ 1ರಂದು ಎರಡು ದಿನಗಳ ರಾಜ್ಯ ಮಟ್ಟದ ಮುಸ್ಲಿಂ ಸಮಾವೇಶವನ್ನು ಹಮ್ಮಿಕೊಂಡಿದೆ.

ನ್ಯಾಯಮೂರ್ತಿ ರಾಜೇಂದ್ರ ಸಾಚಾರ್ ವರದಿಯ ಪ್ರಕಾರ ಮುಸ್ಲಿಮರ ಸ್ಥಿತಿ ಹಲವು ವಿಭಾಗಗಳಲ್ಲಿ ದಲಿತ ಸಮುದಾಯಗಳಿಗಿಂತ ನಿಕೃಷ್ಟವಾಗಿದೆ. ಭೂಮಿಯ ಒಡೆತನ, ಶಿಕ್ಷಣದ ಅವಕಾಶ, ಸರಕಾರಿ, ಸಾರ್ವಜನಿಕ ವಲಯದ ಉದ್ಯೋಗಗಳಲ್ಲಿ ಬೇರೆಲ್ಲ ಸಮುದಾಯಗಳಿಗಿಂದ ಮುಸ್ಲಿಮರ ಪಾಲು ಕಡಿಮೆ.

ಬಡತನದ ಸರಾಸರಿಯಲ್ಲೂ ಮುಸ್ಲಿಮರ ಪ್ರಮಾಣ ಅತೀ ಹೆಚ್ಚಿದೆ. ಇಂತಹ ಸಮುದಾಯವೊಂದನ್ನು ಮೇಲೆತ್ತಲು ಸರಕಾರವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿತ್ತು. ಬದಲಿಗೆ ಕೋಮುದ್ವೇಷದ ರಾಜಕಾರಣಕ್ಕೆ ನಿರಂತರ ಗುರಿಯಾಗಿಸಲಾಗುತ್ತಿದೆ. ಮುಸ್ಲಿಮರ ಆಚರಣೆ, ನಂಬಿಕೆಗಳು, ಆಹಾರ ಪದ್ದತಿ, ಆರಾಧನಾಲಯಗಳನ್ನು ವಿವಾದವನ್ನಾಗಿಸಲಾಗುತ್ತಿದೆ. ವ್ಯಾಪಾರ, ಒಡನಾಟಗಳಿಗೆ ತಡೆ ಹೇರಲಾಗುತ್ತಿದೆ. ಪ್ರಕೃತಿ ವಿಕೋಪ ಹಾಗೂ ಇನ್ನಿತರೆ ದುರಂತಗಳ ಸಂದರ್ಭ ಪರಿಹಾರ ವಿತರಣೆಗಳಲ್ಲೂ ಸರಕಾರ ಮುಸ್ಲಿಮರೊಂದಿಗೆ ತಾರತಮ್ಯ ತೋರುತ್ತಿದೆ. ಅಲ್ಪಸಂಖ್ಯಾತ ಸಮುದಾಯವೊಂದರ ಮೇಲಿನ ಇಂತಹ ಆಘಾತಕಾರಿ ದಾಳಿಗಳಿಗೆ ಆಳುವ ಸರಕಾರಗಳೇ ಬೆಂಬಲವಾಗಿ ನಿಂತಿರುವುದು ಮುಸ್ಲಿಂ ಸಮುದಾಯವನ್ನು ಅಸಹಾಯಕತೆ, ಅಭದ್ರತೆ, ಆತಂಕದ ಸ್ಥಿತಿಗೆ ತಳ್ಳಿದೆ. ರಾಜ್ಯದ ಬಿಜೆಪಿ ಸರಕಾರ ತನ್ನ ವೈಫಲ್ಯಗಳನ್ನು ಮುಚ್ಚಿ ಹಾಕಲು ಪೂರ್ತಿಯಾಗಿ ಕೋಮುವಾದದ ಮೊರೆ ಹೋಗಿದೆ. ಒಟ್ಟು ದೇಶದ ರಾಜಕಾರಣವನ್ನೆ ಈಗ ಮುಸ್ಲಿಂ ವಿರೋಧಿ ಭಾವನೆಗಳ ಸುತ್ತ ತಂದು ನಿಲ್ಲಿಸಲಾಗಿದೆ.

ಇಂತಹ ಸಂದರ್ಭದಲ್ಲಿ ವ್ಯವಸ್ಥೆಯ ದ್ವೇಷ, ಅನಾದಾರಕ್ಕೆ ಗುರಿಯಾದ ಮುಸ್ಲಿಮರ ನೈಜ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಬೇಕು. ಕರ್ನಾಟಕದಲ್ಲಿ ಮುಸ್ಲಿಮರ ಸ್ಥಿತಿಗತಿಗಳ ವಾಸ್ತವವನ್ನು ಜನರ ಮುಂದೆ ತೆರೆದಿಡಬೇಕು, ಸುಳ್ಳು ಆರೋಪ, ಪೂರ್ವಾಗ್ರಹಗಳನ್ನು, ಸಂಶಯಗಳನ್ನು ದೂರೀಕರಿಸಲು ಯತ್ನಿಸಬೇಕು ಹಾಗೂ ಮತೀಯವಾದದ ಬಗ್ಗೆ ಪ್ರಜ್ಞಾಪೂರ್ವಕ ತಿಳುವಳಿಕೆ, ಕೋಮು ಸೌಹಾರ್ದತೆ, ಜಾತ್ಯಾತೀತತೆ, ಸಂವಿಧಾನದ ಮೌಲ್ಯಗಳ ಪ್ರತಿಪಾದನೆಯ ಉದ್ದೇಶದೊಂದಿಗೆ ಜಾತ್ಯಾತೀತತೆ, ಸಬಲೀಕರಣ, ಮುನ್ನಡೆ ಎಂಬ ಘೋಷಣೆಯ ಅಡಿಯಲ್ಲಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕೇರಳದ ಮಾಜಿ ಉನ್ನತ ಶಿಕ್ಷಣ ಸಚಿವರೂ ಹಾಲಿ ಶಾಸಕರಾದ ಡಾ. ಕೆ.ಟಿ. ಜಲೀಲ್‌ರವರು ಸಮಾವೇಶವನ್ನು ಮೇ ೩೧ರಂದು ಬೆಳಿಗ್ಗೆ ೧೦:೩೦ಕ್ಕೆ ಉದ್ಘಾಟಿಸಲಿದ್ದಾರೆ.

ಹಿರಿಯ ದಲಿತ ನಾಯಕ ಮಾವಳ್ಳಿ ಶಂಕರ್,ಖ್ಯಾತ ಸಾಹಿತಿ ಡಾ.ಕೆ. ಷರೀಫಾ ಮತ್ತಿತರ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಧ್ಯಹ್ನದ ನಂತರ ಎರಡು ಮಹತ್ವದ ಗೋಷ್ಟಿಗಳು ಜರುಗಲಿದೆ. ಇದರಲ್ಲಿ ಹಂಪಿ ವಿ.ವಿಯ ನಿವೃತ್ತ ಪ್ರಾಧ್ಯಾಪಕ ಡಾ. ಚಂದ್ರ ಪೂಜಾರಿ, ಪತ್ರಕರ್ತ ಬಿ.ಎಮ್. ಹನೀಫ್, ಡಾ. ಕೆ ಪ್ರಕಾಶ್, ಕೆ. ನೀಲಾ, ಬಿ. ಪೀರ್ ಭಾಷಾ ಮುಂತಾದ ಖ್ಯಾತನಾಮರು ವಿಷಯ ಮಂಡಿಸಲಿದ್ದಾರೆ. ಸಂಜೆ ಏಳರ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

See also  ಎಸ್ಸೆಸ್ಸೆಲ್ಸಿ ಫಲಿತಾಂಶ: 624 ಅಂಕ ಪಡೆದ ಕಾಯರ್ತಡ್ಕದ ಬಾಲಕಿ ಅನನ್ಯಾಗೆ ಸನ್ಮಾನ

ಜೂನ್ 1 ರಂದು ಅಲ್ಪಸಂಖ್ಯಾತ ಸಮುದಾಯಗಳ ಸಬಲೀಕರಣಕ್ಕಾಗಿ ಮುಂದೆ ನಡೆಸಬೇಕಾದ ಕೆಲಸಗಳ ಕುರಿತು ವಿವಿಧ ಜಿಲ್ಲೆಗಳಿಂದ ಆಗಮಿಸುವ ಪ್ರತಿನಿಧಿಗಳಿಗಾಗಿ ಆಂತರಿಕ ಕಲಾಪಗಳು ನಡೆಯಲಿವೆ. ಮೇ 31ರಂದು ನಡೆಯುವ ಸಮಾವೇಶದಲ್ಲಿ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಇದೆ ಎಂದು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು