News Karnataka Kannada
Thursday, March 28 2024
Cricket
ಮಂಗಳೂರು

ಬಯಲನ್ನೇ ಆಲಯವಾನ್ನಾಗಿಸಿದ ಸೌತಡ್ಕದ ಗಣಪ: ಏನಿವನ ವಿಶೇಷತೆ?

Photo Credit :

ಮಂಗಳೂರು: ಇಲ್ಲಿಯ ಗಣಪನಿಗೆ ಗುಡಿಯೇ ಇಲ್ಲ. ಇವನು ಬಯಲು ಆಲಯದಲ್ಲಿಯೇ ಇರುವುದು‌. ಪ್ರಕೃತಿಯ ರಮಣೀಯ ತರುಲತೆಗಳ ಮಡಿಲೇ ಈತನಿಗೆ ಆಲಯ. ಆದರೂ ಈತನು ಪ್ರಸಿದ್ಧ‌. ಇವನ ಕಾರ್ಣಿಕದಿಂದ ದೂರದೂರುಗಳಿಂದಲೂ ಈ ಗಣಪನನ್ನು ಕಾಣಲು ಬರುತ್ತಾರೆ‌.

ಹೌದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದಿಂದ ಸುಮಾರು 2 ಕಿ.ಮೀ. ದೂರದಲ್ಲಿ ಬಯಲನ್ನೇ ಆಲಯವಾಗಿ ನೆಲೆಸಿರುವ ಗಣಪನ ಕ್ಷೇತ್ರವೇ ಸೌತಡ್ಕ. ಈ ಗಣಪನಿಗೆ‌ ಯಾವುದೇ ಆಡಂಬರಗಳಿಲ್ಲ. ಗರ್ಭಗುಡಿಯೇ ಇಲ್ಲದೇ ಮುಕ್ತ ವಾತಾವರಣದಲ್ಲಿರುವುದರಿಂದ ಈ ಬಯಲು ಆಲಯ ಗಣಪನ ಕ್ಷೇತ್ರವು ಅಪೂರ್ವತೆಯನ್ನು ಪಡೆದುಕೊಂಡಿದೆ.

ಆಗಮ ಶಾಸ್ತ್ರದಂತೆ ದೇವಸ್ಥಾನಗಳು ವಾಸ್ತು ಶಿಲ್ಪಕ್ಕನುಗುಣವಾಗಿ ಗೋಪುರ ಗರ್ಭ ಗುಡಿಗಳನ್ನು ರಚಿಸಿ ಪೂರ್ವಾಭಿಮುಖವಾಗಿ ದೇವರ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವ ಪೂರ್ವ ಸಂಪ್ರದಾಯ ನಿಯಮವಿದೆ. ಆದರೆ ಸೌತಡ್ಕ ಗಣಪನು ಈ ಎಲ್ಲಾ ಸಂಪ್ರದಾಯಗಳನ್ನು ತಿರಸ್ಕರಿಸಿ, ಪ್ರಕೃತಿಯ ಸಂದರ ತಾಣದಲ್ಲಿ ಆಗ್ನೇಯಕ್ಕೆ ಮುಖ ಮಾಡಿ ಬಯಲನ್ನೇ ಆಲಯ ಮಾಡಿರುವುದು ಇಲ್ಲಿನ ವಿಶೇಷ.

ಸುಮಾರು 800 ವರ್ಷಗಳ ಹಿಂದೆ ಈ ಪ್ರದೇಶದ ಸಮೀಪ ರಾಜವಂಶಕ್ಕೊಳಪಟ್ಟಿರುವ ದೇವಾಲಯವಿತ್ತು. ಸಂಗ್ರಾಮವೊಂದರಲ್ಲಿ ಅಲ್ಲಿಯ ರಾಜ ಪದವಿ ಭ್ರಷ್ಟನಾಗಿ ದೇವಾಲಯವೂ ಧ್ವಂಸವಾಗಿತ್ತು. ಈ ದೇವಾಲಯದಲ್ಲಿ ಪೂಜಿಸಲಾಗುತ್ತಿದ್ದ ಗಣಪನ ವಿಗ್ರಹವು ದನಗಳನ್ನು ಕಾಯುತ್ತಿದ್ದ ಗೋವಳ ಬಾಲರಿಗೆ ಗೋಚರವಾಗಿದೆ. ಅವರೆಲ್ಲರೂ ಸೇರಿಕೊಂಡು ಗಣಪತಿ ವಿಗ್ರಹವನ್ನು ಎತ್ತಿಕೊಂಡು ದಾರಿಯುದ್ದಕ್ಕೂ ಭಜನೆ ಪೂಜೆಗಳನ್ನು ಮಾಡುತ್ತಾ ಈಗ ಇರುವ ಮರದ ಬುಡದಲ್ಲಿ ಕಾಟುಕಲ್ಲುಗಳ ಕಟ್ಟೆ ಇಟ್ಟು ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಅಲ್ಲದೆ ತಾವು ಬೆಳೆಯುತ್ತಿದ್ದ ಸೌತೆ ಮಿಡಿಗಳನ್ನು ಪ್ರತಿ ದಿನ ನೈವೇದ್ಯವನ್ನಾಗಿ ಅರ್ಪಿಸಿ ಭಜನೆ ಪೂಜೆಗಳನ್ನು ಮಾಡತೊಡಗಿದರು. ಅಂದಿನಿಂದ ಈ ಕ್ಷೇತ್ರಕ್ಕೆ ಸೌತಡ್ಕ ಎಂದು ಹೆಸರು ಬಂತು. (ಸೌತೆ + ಅಡ್ಕ : ಅಡ್ಕ ಎಂದರೆ ಬಯಲು ಎಂದರ್ಥ).

ಹಿಂದೆ ಈ ಪರಿಸರದ ಶ್ರೀಮಂತ ಬ್ರಾಹ್ಮಣ ಭಕ್ತರೊಬ್ಬರು ಗಣೇಶನಿಗೆ ದೇವಸ್ಥಾನ ನಿರ್ಮಿಸಲು ತೀರ್ಮಾನಿಸಿ ಕೆಲಸ ಪ್ರಾರಂಭ ಮಾಡುವಷ್ಟರಲ್ಲಿ ಗಣಪತಿಯು ದನ ಕಾಯುವ ಹುಡುಗನ ರೂಪದಲ್ಲಿ ಆ ಬ್ರಾಹ್ಮಣನಿಗೆ ಕನಸಿನಲ್ಲಿ ಕಾಣಿಸಿಕೊಂಡು ದೇಗುಲ ನಿರ್ಮಿಸುವುದಾದರೆ ಗೋಪುರವು ರಾತ್ರಿ ಬೆಳಗಾಗುವುದರೊಳಗೆ ತಂದೆಯಾದ ಕಾಶಿ ವಿಶ್ವನಾಥನಿಗೆ ಕಾಣುವಷ್ಟು ಎತ್ತರದಲ್ಲಿ ಇರಬೇಕೆಂದು ಕಟ್ಟಾಜ್ಞೆ ಮಾಡಿದ್ದನಂತೆ. ಬ್ರಾಹ್ಮಣನು ಆ ಸವಾಲನ್ನು ಎದುರಿಸಲು ಸಾಧ್ಯವಾಗದೆ ದೇಗುಲ ನಿರ್ಮಾಣದ ಯೋಜನೆಯನ್ನು ಅಲ್ಲಿಗೆ ಕೈಬಿಟ್ಟರೆಂಬ ಎಂಬ ಪ್ರತೀತಿಯೊಂದು ಸೌತಡ್ಕ ದೇವಾಲಯದ ಬಗ್ಗೆ ಪ್ರಚಲಿತದಲ್ಲಿದೆ.

ಸೌತಡ್ಕದಲ್ಲಿ ಭಕ್ತರು ತಮ್ಮ ಮನದಲ್ಲಿನ ಇಚ್ಛೆಯನ್ನು ಶುದ್ಧ ಮನಸ್ಸಿನಿಂದ ಪ್ರಾರ್ಥಿಸಿ ಗಂಟೆ ಕಟ್ಟಿದರೆಂದರೆ ಅವರ ಇಷ್ಟಾರ್ಥ 45 ದಿನಗಳ ಒಳಗಾಗಿ ಪೂರ್ಣಗೊಳ್ಳುತ್ತದೆಂಬ ನಂಬಿಕೆಯಿದೆ. ಹಾಗಾಗಿ ಇಲ್ಲಿ ಗಂಟೆ ಹರಕೆಯೇ ವಿಶೇಷ. ಧನವನ್ನು ಅರಸಿ ಬರುವವರಿಗೆ ಧನ, ಸಂತಾನ ಭಾಗ್ಯ ಅರಸಿ ಬರುವವರಿಗೆ ಸಂತಾನ ಭಾಗ್ಯ ಕರುಣಿಸುವ ಈ ಗಣಪತಿಯ ಸನ್ನಿಧಾನದಲ್ಲಿ 10,000 ಮಂತ್ರಗಳಿಂದ  ಕೂಡಿದ ಅಥರ್ವಶಿರ್ಷ ಹವನ ಮಾಡುವುದರಿಂದ ಸಕಲ ಇಚ್ಛೆಗಳು ನೆರವೇರುವುದು ಎನ್ನುವ ನಂಬಿಕೆ ಇದೆ. ಇಲ್ಲಿರುವ ಗಣಪನಿಗೆ ದರ್ಬೆಯಿಂದ ಪೂಜಿಸಿದರೆ  ಅವನು ಪ್ರಸನ್ನನಾಗುತ್ತಾನೆ. ಗಣಪತಿಗೆ  ಸೌತೇಕಾಯಿಯ ನೈವೇದ್ಯವನ್ನೂ ಅರ್ಪಿಸುತ್ತಾರೆ. ಇಲ್ಲಿ ಭಕ್ತರಿಗೆ ನಿತ್ಯ ಅನ್ನದಾನ ನಡೆಯುತ್ತಾದೆ. ಸಿಹಿಯಾದ ಅವಲಕ್ಕಿಯನ್ನು ಗಣಪತಿಗೆ  ನೈವೇದ್ಯ ಮಾಡಿ ಅದನ್ನೇ ಭಕ್ತಾದಿಗಳಿಗೆ  ಪ್ರಸಾದದ ರೂಪದಲ್ಲಿ ಹಂಚಲಾಗುತ್ತದೆ.

ಗಣೇಶ ಚತುರ್ಥಿಯಾದ ಇಂದು  ಇಲ್ಲಿ ವಿಶೇಷ ಪೂಜೆ, ಜಪ, ಹೋಮ, ಹವನಾದಿಗಳು ನಡೆಯುತ್ತದೆ. ಸಂಪ್ರೀತಿಯಿಂದ ಇಲ್ಲಿಯ ಗಣಪನು ಭಕ್ತರಿಂದ ವಿಶೇಷ ಪೂಜೆಯನ್ನು ಸ್ವೀಕರಿಸಿ ಭಕ್ತರ ಇಷ್ಟಾರ್ಥವನ್ನು ಈಡೇರಿಸುತ್ತಾನೆ. ಇಂದು ಇಲ್ಲಿನ ಗಣಪನನ್ನು ಕಾಣಲು ಭಕ್ತಗಡಣವೇ ತುಂಬಿ ತುಳುಕುತ್ತಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು