ಮಂಗಳೂರು: ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಹಾಗೂ ಡಿಸಿಪಿ ಹರಿರಾಂ ಶಂಕರ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಬೂಸ್ಟರ್ ಡೋಸ್ ಪಡೆದರು.
ಕೊರೊನಾ ಸಂಕಷ್ಟದ ಈ ಕಾಲಘಟ್ಟದಲ್ಲಿ ಫ್ರಂಟ್ ಲೈನ್ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿರುವ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪೊಲೀಸರಿಗೆ ರೋಶನಿ ನಿಲಯದಲ್ಲಿ ಬೂಸ್ಟರ್ ಡೋಸ್ ನೀಡಲಾಯಿತು.
ಸರಕಾರ ಹಾಗೂ ಪೊಲೀಸ್ ಇಲಾಖೆ ಆದೇಶದಂತೆ ಬೂಸ್ಟರ್ ಡೋಸ್ ಗೆ ಅರ್ಹರಾಗಿರುವ 750 ಮಂದಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯಲ್ಲಿ ಇಂದು 170 ಮಂದಿಗೆ ಬೂಸ್ಟರ್ ಡೋಸ್ ನೀಡಲಾಯಿತು.
ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಮಾತನಾಡಿ, ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಮೊದಲನೇ ಡೋಸ್ ಎಲ್ಲರೂ ಪಡೆದಿದ್ದಾರೆ. 95 % ಅಧಿಕ ಪೊಲೀಸರು 2ನೇ ಡೋಸ್ ಲಸಿಕೆ ಪಡೆದಿದ್ದಾರೆ.
ಉಳಿದಂತೆ ಕೆಲವು ಗರ್ಭಿಣಿಯರು, ಸಣ್ಣ ಮಕ್ಕಳು ಹೊಂದಿರುವವರು ಸೇರಿದಂತೆ ಇತರ ಕಾರಣದಿಂದ ಲಸಿಕೆ ಪಡೆದಿಲ್ಲ. ಇದೀಗ ಇಂದು ಅರ್ಹ 170 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ಬೂಸ್ಟರ್ ಡೋಸ್ ನೀಡಲಾಗಿದೆ ಎಂದರು.