NewsKarnataka
Tuesday, December 07 2021

ಮಂಗಳೂರು

ವಿ.ಹಿಂ.ಪ. ರಾಷ್ಟ್ರಮಟ್ಟದ ಪತ್ರಿಕಾಗೋಷ್ಠಿ

ಬೆಳ್ತಂಗಡಿ: ಸರಕಾರಗಳು ಹೇಗೆ ಮಸೀದಿ, ಚರ್ಚ್, ಗುರುದ್ವಾರಗಳ ಮೇಲೆ ಹಿಡಿತವನ್ನು ಹೊಂದಿಲ್ಲವೋ ಅದೇ ರೀತಿ ಹಿಂದೂ ದೇವಸ್ಥಾನಗಳ ಮೇಲಿನ ಹಿಡಿತವನ್ನು ಬಿಟ್ಟು ಬಿಡಬೇಕು. ಇದಕ್ಕಾಗಿ ಕೇಂದ್ರೀಯ ಕಾನೂನನ್ನು ರಚಿಸಬೇಕು ಎಂದು ಕೇಂದ್ರ ಸರಕಾರವನ್ನು ಆಗ್ರಹಿಸುತ್ತೇವೆ. ಇದಕ್ಕಾಗಿ ವಿಶ್ವ ಹಿಂದೂ ಪರಿಷತ್ ದೇಶಾದ್ಯಂತ ಜನಜಾಗರಣ ಅಭಿಯಾನವನ್ನು ಶೀಘ್ರವಾಗಿ ಕೈಗೊಳ್ಳಲಿದೆ ಎಂದು ವಿ.ಹಿಂ.ಪ. ಕೇಂದ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಪ್ರಕಟಿಸಿದರು.
ಅವರು ಶನಿವಾರ ಧರ್ಮಸ್ಥಳದ ಸನ್ನಿಧಿ ಅತಿಥಿ ಗೃಹದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ವಿಶ್ವ ಹಿಂದು ಪರಿಷತ್‌ನ ಮುಂದಿನ ನಡೆಗಳನ್ನು ವಿವರಿಸಿದರು.
ಹಿಂದೂ ದೇವಸ್ಥಾನಗಳ ಮೇಲಿನ ಹಿಡಿತವನ್ನು ಸರಕಾರಗಳು ಬಿಟ್ಟು ಅವುಗಳನ್ನು ಮರಳಿ ಹಿಂದೂ ಸಮಾಜಕ್ಕೆ ಒಪ್ಪಿಸಬೇಕು. ದೇವಸ್ಥಾನಗಳಲ್ಲಿ ಸಂಗ್ರಹವಾದ ಹಣ ಹಿಂದೂ ಸಮಾಜದ ಏಳಿಗೆಗೆ ವಿನಿಯೋಗಿಸುವಂತಾಗಬೇಕು ಎಂದು ವಿ.ಹಿ.ಪಂ.ನ ಮಾರ್ಗದರ್ಶಕ ಮಂಡಲವು ಆಗ್ರಹಿಸಿದೆ. ಬೋರ್ಡ್ ಆಫ್ ಟ್ರಸ್ಟೀಸ್ ಕೂಡ ಇದನ್ನೇ ಪುನರುಚ್ಛರಿಸಿದೆ. ಇದಕ್ಕಾಗಿ ಯಾವ ರೀತಿಯ ಕಾನೂನನ್ನು ರಚಿಸಬಹುದು, ದೇವಸ್ಥಾನಗಳನ್ನು ಯಾರಿಗೆ, ಹೇಗೆ ಒಪ್ಪಿಸಬಹುದು ಎಂಬ ಕುರಿತು ಎಲ್ಲರೂ ಸೇರಿ ಚಿಂತನೆ ನಡೆಸಲಾಗುತ್ತಿದೆ. ಈ ಕುರಿತು ಕೇಂದ್ರ ಸರಕಾರಕ್ಕೆ ತಿಳಿಸಿದಾಗ ಇದು ಕನ್‌ಕರೆಂಟ್ ಲಿಸ್ಟ್‌ನಲ್ಲಿದೆ ಎಂದು ತಿಳಿಯಿತು. ಹೀಗಾಗಿ ಕೇಂದ್ರ ಸರಕಾರವೇ ಕಾನೂನೊಂದನ್ನು ರೂಪಿಸಬೇಕು. ಮಸೀದಿ, ಚರ್ಚ್, ಗುರುದ್ವಾರಗಳು ಸರಕಾರದ ಸುಪರ್ದಿಯಲ್ಲಿರದಿರುವಾಗ ದೇವಸ್ಥಾನಗಳನ್ನು ನಡೆಸುವುದು ಸರಕಾರದ ಕೆಲಸವಲ್ಲ. ಈ ಬಗ್ಗೆ ಕೇಂದ್ರ ಸರಕಾರವು ಸೂಕ್ತ ಕ್ರಮ ಕೈಗೊಳ್ಳುವಂತಾಗಲು ಆಂದೋಲನ ಮಾಡಲಿದ್ದೇವೆ ಎಂದರು.
ದೇಶದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಪ.ಜಾ.,ಪಂ.ದವರನ್ನು ಮತಾಂತರ ಮಾಡಲಾಗುತ್ತಿದೆ. ಇದು ಆಸೆ, ಆಮಿಷ, ಭಯ,ಮೋಸ ಮತ್ತು ಲವ್ ಜೆಹಾದ್ ನಿಂದಾಗಿ ಆಗುತ್ತಿದೆಯೇ ಹೊರತು ಅಂತರಾತ್ಮದ ಬದಲಾವಣೆಯಿಂದ ಅಲ್ಲ ಎಂಬುದನ್ನು ಅರಿತುಕೊಂಡಿದ್ದೇವೆ. ನಾವು ಮತಾಂತರ ನಡೆದ ಜಿಲ್ಲೆಗಳನ್ನು ಗುರುತಿಸಿದ್ದೇವೆ. ಇದನ್ನು ತಡೆಯಲು ಮತ್ತು ಅವರನ್ನು ಮರಳಿ ಮಾತೃಧರ್ಮಕ್ಕೆ ಕರೆತರಲು ದೊಡ್ಡಮಟ್ಟದ ಅಭಿಯಾನ ಮಾಡಲಿದ್ದೇವೆ.ಇದಕ್ಕಾಗಿ ರಾಜ್ಯದ ಎಲ್ಲಾ ಸಂತರನ್ನು ಭೇಟಿಯಾಗುತ್ತಿದ್ದೇವೆ. ನಮಗೆ ಸಮರ್ಥನೆಯೂ ಸಿಗುತ್ತಿದೆ. ಇಲ್ಲಿನ ಬಿಜೆಪಿ ಸರಕಾರವು ಉ.ಪ್ರ., ಗುಜರಾತ್, ಮ.ಪ್ರ.,ಹಿ.ಪ್ರ.,ಅಸ್ಸಾಂ, ಉತ್ತಾರಖಂಡ ರಾಜ್ಯಗಳಲ್ಲಿದ್ದಂತೆ ಮತಾಂತರ ಮತ್ತು ಲವ್ ಜೆಹಾದ್ ಬಗ್ಗೆ ಪರಿಣಾಮಕಾರಿ ಕಾನೂನ್ನು ತರುವ ಬದ್ಧತೆಯನ್ನು ಪ್ರದರ್ಶಿಸಿತ್ತು. ಈ ಬಗ್ಗೆ ದೀಪಾವಳಿಯ ಬಳಿಕ ಸಂತರೊಂದಿಗೆ ಇಲ್ಲಿನ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಅದರ ಬಗ್ಗೆ ನೆನಪು ಮಾಡಿಕೊಡಲಿದ್ದೇವೆ ಎಂದರು.
ಈಚೆಗೆ ಬಾಂಗ್ಲಾ ದೇಶದಲ್ಲಾದ ಹಿಂದೂಗಳ ಮೇಲಿನ ದಾಳಿಯ ಬಗ್ಗೆ ಚಿಂತೆ ವ್ಯಕ್ತಪಡಿಸಿದ ಅವರು, ಅಲ್ಲಿ ೨೫೦ ಪೂಜಾ ಪೆಂಡಾಲ್ ಗಳನ್ನು ನಾಶಪಡಿಸಲಾಗಿದೆ. ೧೧ ಮಂದಿ ಮೃತಪಟ್ಟಿದ್ದಾರೆ. ಹಿಂದೂಗಳ ಅಂಗಡಿ ಲೂಟಿಯಾಗಿದೆ, ಮನೆಗಳನ್ನು ಹಾಳುಗೆಡವಲಾಗಿದೆ. ಅಲ್ಲಿನ ಸಂವಿಧಾನದ ಪ್ರಕಾರ ಇಸ್ಲಾಂ ರಾಜಧರ್ಮವಾಗಿದ್ದರೂ ಅಲ್ಲಿನ ಹಿಂದೂ, ಬೌದ್ಧ, ಸಿಖ್, ಜೈನ, ಕ್ರಿಶ್ಚಿಯನ್ನರಿಗೆ ಸಮಾನ ಅಧಿಕಾರ ಹಾಗೂ ಸುರಕ್ಷತೆಯನ್ನು ಪ್ರಧಾನಿಸಲಾಗಿದೆ. ಆದರೆ ಬಾಂಗ್ಲಾ ಸರಕಾರ ಇದನ್ನು ನಿಭಾಯಿಸಲು ಸಂಪೂರ್ಣ ವಿಫಲವಾಗಿದೆ. ಇದರ ಬಗ್ಗೆ ಪರಿಷತ್ ದೇಶಾದ್ಯಂತ ಪ್ರತಿಭಟನೆ ಮಾಡಿದೆ. ಕೇಂದ್ರ ಸರಕಾರವು ಪಾಕಿಸ್ತಾನ ಮತ್ತು ಬಾಂಗ್ಲಾದ ಮೇಲೆ ರಾಜತಾಂತ್ರಿಕ ಒತ್ತಡ ತಂದು ಅಲ್ಲಿನ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ವಹಿಸುವಂತೆ ಮಾಡಬೇಕು. ಬಾಂಗ್ಲಾ ಪ್ರಧಾನಿ ದೋಷಿಗಳಿಗೆ ಶಿಕ್ಷೆಯಾಗಲಿದೆ ಮತ್ತು ಪೀಡಿತರಿಗೆ ನೆರವು ನೀಡಲಾಗುವುದು ಎಂದು ಪ್ರಕಟಿಸಿದ್ದಾರೆ. ಈ ರೀತಿಯ ಆತಂಕವಾದಿತನದಿಂದ ಯಾವ ಪ್ರಯೋಜನವೂ ಆಗಲಾರದು.ಅಂತಾರಾಷ್ಟ್ರೀಯ ಸಂಘಟನೆಗಳೂ ಈ ಕುರಿತ ಗಮನಹರಿಸಲಿವರ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಕಾಶ್ಮೀರ ಸ್ಥಿತಿಯನ್ನು ಪ್ರಸ್ತಾವಿಸಿದ ಅವರು, ಅಲ್ಲಿ ೩೭೦ ವಿಧಿಯನ್ನು ತೆಗೆದ ಮೇಲೆ ಶಾಂತಿ ನೆಲೆಸಿದೆ ಎಂದು ತಿಳಿದುಕೊಂಡಿದ್ದೇವು. ಕಾಶ್ಮೀರಿ ಪಂಡಿತರು ಮರಳುತ್ತಾ ಇದ್ದರು. ಎಲ್ಲರೂ ಸುರಕ್ಷಿತ ಭಾವನೆಯಿಂದ ಇದ್ದರು. ಆದರೆ ಕಳೆದ ೨೦ ದಿನಗಳಲ್ಲಿ ೩ ದಾಳಿಗಳು ನಡೆದಿದ್ದು ೧೧ ನಾಗರಿಕರನ್ನು ಹತ್ಯೆಮಾಡಲಾಗಿದೆ. ಇದು ಚಿಂತೆಗೆ ಕಾರಣವಾಗಿದೆ. ಅಲ್ಲಿ ಹಿಂದೂ, ಸಿಖ್ ಜನರು, ವಲಸಿಗರು ಮತ್ತು ಸರಕಾರದೊಂದಿಗೆ ನಿಷ್ಠೆಯಿಂದ ದುಡಿಯುವ ಮುಸಲ್ಮಾನರಿಗೂ ಭಯ ಉಂಟಾಗಿದೆ. ಆದರೂ ರಾಜ್ಯ ಬಿಟ್ಟವರಿಗೆ ಮರಳಿಬರುವಂತೆ ಮಾತುಕತೆ ನಡೆಸಲಾಗಿದೆ. ಇದುವರೆಗಿನ ಅಲ್ಲಿನ ಪ್ರಗತಿಗೆ ಇಂತಹ ಘಟನೆಗಳು ದುರ್ಬಲಗೊಳಿಸುತ್ತವೆ. ದೇಶದ ಗೃಹ ಮಂತ್ರಿಗಳು ಅಲ್ಲಿಗೆ ಮೂರು ದಿನಗಳ ಪ್ರವಾಸ ಕೈಗೊಂಡಿರುವುದು ಸಂತಸ ತಂದಿದೆ ಎಂದ ಅವರು, ಸರಕಾರವು ಅಲ್ಲಿನ ಸುರಕ್ಷತೆಯನ್ನು ಇನ್ನಷ್ಟು ಬಿಗಿಗೊಳಿಸಲಿದೆ, ಇಂತಹ ಘಟನೆಗಳ ಪುನಾರಾವೃತ್ತಿ ಆಗಲಾರದು, ಕಾಶ್ಮೀರ ಬಿಟ್ಟವರು ಮತ್ತೆ ಬಂದು ಆರಾಮ ಜೀವನ ಮಾಡಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಭಯೋತ್ಪಾದಕರ ಹೇಡಿತನದ ಕೃತ್ಯಗಳು ಭಾರತದ ಇಚ್ಛಾಶಕ್ತಿಯನ್ನು, ಸಂಕಲ್ಪವನ್ನು ಎಂದಿಗೂ ದುರ್ಬಲಗೊಳಿಸಲಾರದು. ನಾವು ಒಂದಾಗಿಯೇ ಇರಲಿದ್ದೇವೆ ಮತ್ತು ಕಾಶ್ಮೀರದ ಏಕಾತ್ಮತೆಯನ್ನು, ಅಖಂಡತೆಯನ್ನು ಉಳಿಸಿಕೊಳ್ಳಲಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೇಂದ್ರೀಯ ಸಹ ಪ್ರ.ಕಾರ್ಯದರ್ಶಿ ಕೋಟೇಶ್ವರ ಶರ್ಮ, ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವರಾಜ್, ಪ್ರಾಂತ ಸಹ ಕಾರ್ಯದರ್ಶಿ ಕೃಷ್ಣಮೂರ್ತಿ, ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್, ಪುತ್ತೂರು ಜಿಲ್ಲಾ ಅಧ್ಯಕ್ಷ ಡಾ. ಪ್ರಸನ್ನ ಕೆ., ಕಾರ್ಯಾಧ್ಯಕ್ಷ ಭಾಸ್ಕರ ಧರ್ಮಸ್ಥಳ, ಕಾರ್ಯದರ್ಶಿ ಸತೀಶ್, ತಾಲೂಕು ಅಧ್ಯಕ್ಷ ದಿನೇಶ್ ಚಾರ್ಮಾಡಿ, ಕಾರ್ಯದರ್ಶಿ ಮೋಹನ್ ಬೆಳ್ತಂಗಡಿ, ಸಾಪ್ತಾಹಿಕ್ ಮಿಲನ್ ಪ್ರಮುಖ್ ಸಂತೋಷ್ ಅತ್ತಾಜೆ, ವಿದ್ಯಾರ್ಥಿ ಪ್ರಮುಖ್ ಸಂಕೇತ್ ಇದ್ದರು.

ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಕೇವಲ ಓರ್ವ ವ್ಯಕ್ತಿಯಲ್ಲ, ಶಕ್ತಿಯಾಗಿದ್ದಾರೆ. ಅವರು ಮಾಡಿರುವ ದೇವಾಲಯಗಳ ಜೀರ್ಣೋದ್ಧಾರ, ಕೆರೆಗಳ ಪುನರುತ್ಥಾನ, ಸ್ವಸಹಾಯ ಗುಂಪುಗಳು, ಗ್ರಾಮಾಭಿವೃದ್ಧಿ ಹಾಗೂ ಅನ್ಯಾನ್ಯ ಸೇವಾ ಚಟುವಟಿಕೆಗಳನ್ನು ಕೇವಲ ೫೪ ವರ್ಷಗಳಲ್ಲಿ ಮಾಡಿರುವುದು ಪ್ರಶಂಸನೀಯ. ಇದರಿಂದ ಹಿಂದೂ ಜನಮಾನಸದ, ಭಾವದ ಜಾಗರಣವೂ ನಡೆದಿದೆ. ಪರಿಷತ್ತು ಹೆಗ್ಗಡೆಯವರ ಚಟುವಟಿಕೆಗಳನ್ನು ಅಧ್ಯಯನ ಮಾಡಿ ತನ್ನ ಸೇವಾಚಟುವಟಿಕೆಗಳಲ್ಲಿ ಅಳವಡಿಸುವ ಪ್ರಯತ್ನ ಮಾಡಲಿದೆ – ಅಲೋಕ್ ಕುಮಾರ್

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a Reply

Your email address will not be published. Required fields are marked *

Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!