ಬೆಳ್ತಂಗಡಿ: ತಾಲೂಕಿನ ಕಲ್ಮಂಜ- ಮುಂಡಾಜೆ ಗ್ರಾಮಪಂಚಾಯತಿ ಗಳ ವ್ಯಾಪ್ತಿಯ ನಿಡಿಗಲ್ ನೇತ್ರಾವತಿ ನದಿಯಲ್ಲಿ ಮಂಗಳವಾರ ಹೋರಿಯ ಕಳೇಬರವೊಂದು ಪತ್ತೆಯಾಗಿದೆ.
ಇಲ್ಲಿನ ಹಳೆ ಮತ್ತು ಹೊಸ ಸೇತುವೆ ಮಧ್ಯಭಾಗದ ನದಿ ಪ್ರದೇಶದಲ್ಲಿ ಕಲ್ಲೊಂದಕ್ಕೆ ಸಿಲುಕಿಕೊಂಡಿದ್ದ ಸುಮಾರು ನಾಲ್ಕರಿಂದ ಐದು ವರ್ಷ ಪ್ರಾಯದ ಜರ್ಸಿ ಜಾತಿಯ ಹೋರಿಯ ಕಳೇಬರ ಸ್ಥಳೀಯರಿಗೆ ಕಂಡುಬಂದಿತ್ತು.
ಈ ಕುರಿತು ಕಲ್ಮಂಜ ಹಾಗೂ ಮುಂಡಾಜೆ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಲಾಯಿತು. ಕಲ್ಮಂಜ ಗ್ರಾಪಂ ಪಿಡಿಒ ಇಮ್ತಿಯಾಜ್, ಮುಂಡಾಜೆ ಗ್ರಾಪಂ ಪಿಡಿಒ ಸುಮಾ ಎ. ಎಸ್, ಹಿರಿಯ ಪಶುವೈದ್ಯ ಪರೀಕ್ಷಕ ನಾಗಶಯನ ರಾವ್ ಹಾಗೂ ಇತರರು ಆಗಮಿಸಿ ಪರಿಶೀಲನೆ ನಡೆಸಿದರು. ಪಂಚಾಯಿತಿಗಳ ವತಿಯಿಂದ ಹೋರಿಯ ಕಳೇಬರವನ್ನು ಸ್ಥಳೀಯರ ಸಹಕಾರದಲ್ಲಿ ವಿಲೇವಾರಿ ಮಾಡಲಾಯಿತು.
ನದಿಯಲ್ಲಿ ರಭಸವಾಗಿ ನೀರು ಹರಿಯುತ್ತಿರುವ ಕಾರಣ ಜೆಸಿಬಿ ಮೂಲಕ ಕಳೇಬರವನ್ನು ಮೇಲಕ್ಕೆತ್ತಲಾಯಿತು. ನೇತ್ರಾವತಿ ನದಿ ದಿಡುಪೆ,ಮಲವಂತಿಗೆ, ಮಿತ್ತಬಾಗಿಲು, ಕಡಿರುದ್ಯಾವರ, ಕನ್ಯಾಡಿ ಮುಂಡಾಜೆ ಕಲ್ಮಂಜ ಗ್ರಾಮಗಳಲ್ಲಿ ಹರಿಯುತ್ತಿದ್ದು,ಇದು ಮೇಲ್ಭಾಗದಿಂದ ನದಿ ನೀರಿನಲ್ಲಿ ತೇಲಿಬಂದು ಇಲ್ಲಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕಳೆದ ಎರಡು ದಿನಗಳಲ್ಲಿ ಪರಿಸರದಲ್ಲಿ ಮಳೆ ಕಡಿಮೆ ಇದ್ದರೂ ಸಂಜೆಯ ವೇಳೆ ನದಿಯ ನೀರಿನ ಹರಿವು ಹೆಚ್ಚಿತ್ತು.ಅಲ್ಲದೆ ಈ ನದಿಗೆ ಹಲವಾರು ಹಳ್ಳಗಳು ಸೇರುತ್ತವೆ.