ಬೆಳ್ತಂಗಡಿ: ನಾನು ಯಾವುದೇ ರೀತಿಯ ಕೃತಕ ಮುಖವಾಡವಿಲ್ಲದೆ ಸ್ವಾಭಾವಿಕವಾಗಿ, ಸಹಜವಾಗಿ ಬದುಕುತ್ತಿದ್ದೇನೆ. ಇಂದಿನ ಪುಸ್ತಕ ಬಿಡುಗಡೆ ಸಮಾರಂಭವು ಕನ್ನಡಿಯ ಎದುರು ನಿಂತು ನನ್ನನ್ನು ನಾನು ಅವಲೋಕನ ಮಾಡುವಂತೆ ಮಾಡಿದೆ” ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಹಿರಿಯ ಯಕ್ಷಗಾನ ಅರ್ಥಧಾರಿ, ನಿವೃತ್ತ ಪ್ರಿನ್ಸಿಪಾಲ್ ಡಾ. ಪ್ರಭಾಕರ ಜೋಶಿ ಅವರ ಲೇಖನ ಸಂಕಲನ ಶ್ರೀ ವೀರೇಂದ್ರ ಹೆಗ್ಗಡೆ ದೃಷ್ಟಿ ಮತ್ತು ಸೃಷ್ಟಿ ಗ್ರಂಥ ಲೋಕಾರ್ಪಣೆಗೊಳಿಸಿದ ಸಂದರ್ಭ ಮಾತನಾಡಿದರು.
ನಾವು ನಿತ್ಯವೂ ಯಾವುದನ್ನು ಕೇಳುತ್ತೇವೆಯೋ ಅದು ನಮಗೆ ಹೊಸ ಅನುಭವ ನೀಡುತ್ತದೆ. ಧರ್ಮಸ್ಥಳಕ್ಕೆ ನಿತ್ಯವೂ ಬರುವ ಸಹಸ್ರಾರು ಭಕ್ತಾದಿಗಳಿಂದ ಅವರ ಸಮಸ್ಯೆಗಳನ್ನು, ಅಹವಾಲುಗಳನ್ನು ತಾಳ್ಮೆಯಿಂದ ಆಲಿಸಿ ಸಹಾನುಭೂತಿಯಿಂದ ಸಾಂದರ್ಭಿಕವಾಗಿ ಪರಿಹಾರಕ್ಕಾಗಿ ಸಲಹೆ, ಮಾರ್ಗದರ್ಶನದೊಂದಿಗೆ ಅಭಯದಾನ ಮಾಡುತ್ತೇನೆ. ನಿತ್ಯವೂ ಪ್ರತಿಕ್ಷಣವೂ ವೈವಿಧ್ಯತೆಯಿಂದ ಕೂಡಿದ್ದು ಪರಿವರ್ತನಾಶೀಲವಾಗಿದ್ದು ತನಗೆ ವಿಶೇಷ ಲೋಕಾನುಭವ ನೀಡುತ್ತದೆ. ಇದು ತನಗೆ ಯಾವಾಗಲೂ ಸುಖ, ಸಂತೋಷ, ಶಾಂತಿ ಮತ್ತು ನೆಮ್ಮದಿಯನ್ನು ನೀಡುತ್ತದೆ ಎಂದು ಹೆಗ್ಗಡೆಯವರು ಹೇಳಿದರು.
ಧರ್ಮಸ್ಥಳಕ್ಕೆ ಇಂದು ಸರ್ವರೀತಿಯ ಸಹಕಾರ ನೀಡಲು ಬೃಹತ್ ಭಕ್ತರ ಗಡಣವೇ ಸಿದ್ಧವಾಗಿದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು.
ಡಾ. ಪ್ರಭಾಕರ ಜೋಶಿಯವರು ಸಮಗ್ರ ಅಧ್ಯಯನ ಮಾಡಿ, ನೋಡಿ, ತಿಳಿದು, ಮಾಹಿತಿ ಕಲೆ ಹಾಕಿ ಉತ್ತಮ ಪುಸ್ತಕವನ್ನು ರಚಿಸಿರುವುದಕ್ಕೆ ಡಾ. ಹೆಗ್ಗಡೆಯವರು ಅವರನ್ನು ಅಭಿನಂದಿಸಿ ಗೌರವಿಸಿದರು.
ಗ್ರಂಥ ಲೋಕಾರ್ಪಣೆ ಮಾಡಿದ ಉಜಿರೆಯ ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ.ಎಸ್. ಪ್ರಭಾಕರ್ ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ ಅನ್ನುವಂತೆ ಹೆಗ್ಗಡೆಯವರು ತ್ಯಾಗ ಮತ್ತು ಸೇವೆ ಮಾಡದ ಕ್ಷೇತ್ರವಿಲ್ಲ. ೧೯೪೮ ರ ನವೆಂಬರ್ ೨೫ ರಂದು ಅಂದು ವೀರೇಂದ್ರ ಕುಮಾರ್ ಜನಿಸಿದಾಗ ಧರ್ಮಸ್ಥಳದ ಬೀಡಿನ ಜ್ಯೋತಿ ಬೆಳಗಿತು ಎಂದು ಹಿರಿಯರು ಹೇಳಿದ್ದರಂತೆ. ಆದರೆ, ಈಗ ಹೆಗ್ಗಡೆಯವರು ಭುವನದ ಜ್ಯೋತಿಯಾಗಿ ಬೆಳೆಯುತ್ತಿದ್ದಾರೆ, ಬೆಳಗುತ್ತಿದ್ದಾರೆ ಎಂದು ಅವರು, ತಾನು ಹೆಗ್ಗಡೆಯವರ ಬಾಲ್ಯದಿಂದಲೂ ಬೆಳವಣಿಗೆಯನ್ನು ಗಮನಿಸಿದ್ದು ಹೆಗ್ಗಡೆಯವರು ಸಂಕೀರ್ಣ, ವಿಸ್ಮಯದ ಹಾಗೂ ವಿಶೇಷ ವ್ಯಕ್ತಿತ್ವ ಹೊಂದಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಶ್ರೀ ವೀರೇಂದ್ರ ಹೆಗ್ಗಡೆ ದೃಷ್ಟಿ ಮತ್ತು ಸೃಷ್ಟಿ ಲೇಖನ ಸಂಕಲನ ಸಂಪಾದಕ ಡಾ. ಪ್ರಭಾಕರ ಜೋಶಿ ಅವರು ಪುಸ್ತಕದ ಕುರಿತು ಪ್ರಸ್ತಾವಿಸಿ, ಸ್ವಾಗತಿಸಿದರು.
ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ , ಹಿರಿಯ ಪತ್ರಕರ್ತ ಶ್ರೀಕರ ಭಟ್ ಮುಂಡಾಜೆ, ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್, ಕಸಾಪ ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್, ಹಿರಿಯ ಯಕ್ಷಗಾನ ಕಲಾವಿದ ಕೆ. ಗೋವಿಂದ ಭಟ್, ಉಗ್ರಾಣ ಹಿರಿಯ ಮುತ್ಸದ್ದಿ ಬಿ.ಭುಜಬಲಿ, ಧರ್ಮಸ್ಥಳ ಗ್ರಾ.ಪಂ.ಉಪಾಧ್ಯಕ್ಷ ಶ್ರೀನಿವಾಸ್ ರಾವ್, ಬಂಟ್ವಾಳ ತಾಲೂಕು ಕಸಾಪ ಅಧ್ಯಕ್ಷ ಮೋಹನ್ ರಾವ್, ಸುಚೇತಾ ಜೋಶಿ ಮೊದಲಾದವರು ಇದ್ದರು.
ಯಕ್ಷಗಾನ ಸಂಘಟಕ, ಸಂಯೋಜಕ ಉಜಿರೆ ಅಶೋಕ ಭಟ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.