ಮಂಗಳೂರು : ಕರಾವಳಿ ಕರ್ನಾಟಕದ ಬಿಜೆಪಿಯ ಹಿರಿಯ ನೇತಾರ ಪುತ್ತೂರಿನ ಪ್ರಥಮಗಳ ಸರದಾರ ಮಾಜಿ ಶಾಸಕ ಉರಿಮಜಲು ಕೆ. ರಾಮಭಟ್ (93) ನಿಧನ ಹೊಂದಿದರು.
ಮೃತರು ಸಹಕಾರಿ ಮುಂದಾಳು ಹಾಗೂ ಸಮಾಜ ಸೇವಕಿ ಪತ್ನಿ ಸವಿತಾ ಭಟ್, ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ. ನಗರದ ಕೊಂಬೆಟ್ಟು ನಿವಾಸಿಯಾಗಿದ್ದ ರಾಮಭಟ್ ಅಜಾತಶತ್ರು ವ್ಯಕ್ತಿತ್ವವನ್ನು ಹೊಂದಿದ್ದರು. ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ ಹಾಗೂ ದಕ್ಷತೆಯನ್ನು ಮೆರೆದಿದ್ದರು.
ಪುತ್ತೂರಿನಲ್ಲಿ ಭಾರತೀಯ ಜನಸಂಘವನ್ನು ಕಟ್ಟಿ ಬೆಳೆಸಿದವರಲ್ಲಿ ಪ್ರಮುಖರಾದ ಕೆ. ರಾಮ ಭಟ್, ಗ್ರಾಮ ಪಂಚಾಯತ್ ಪರಿವರ್ತಿತ ಪುತ್ತೂರು ಪುರಸಭೆಯ ಪ್ರಥಮ ಅಧ್ಯಕ್ಷರಾಗುವ ಮೂಲಕ ಪುತ್ತೂರು ಪುರಸಭೆಯಲ್ಲಿ 1972ರ ದಶಕದಲ್ಲಿ ಭಾರತೀಯ ಜನಸಂಘವನ್ನು ಅಧಿಕಾರಕ್ಕೆ ತಂದಿದ್ದರು.
1978ರಲ್ಲಿ ನಡೆದ ಕರ್ನಾಟಕ ವಿಧಾನಸಭೆಯ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಅಂದಿನ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ ರಾಮ ಭಟ್ ವಿಧಾನಸಭೆಗೆ ಆಯ್ಕೆಯಾಗುವ ಮೂಲಕ ಪುತ್ತೂರಿನ ಪ್ರಥಮ ಕಾಂಗ್ರೇಸೇತರ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ.
1983ರಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ಕೆ. ರಾಮ ಭಟ್ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. 1984ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜನತಾ ಪಕ್ಷದ ಸಂಯುಕ್ತ ಅಭ್ಯರ್ಥಿಯಾಗಿ ಅಂದಿನ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು.