ಬೆಳ್ತಂಗಡಿ: ಉಜಿರೆ ಗ್ರಾಮ ಪಂಚಾಯತ್ ನ ಮಕ್ಕಳ ಗ್ರಾಮ ಸಭೆಯು ಉಜಿರೆ ಹಳೆಪೇಟೆ ಸರಕಾರಿ ಪ್ರೌಢ ಶಾಲೆಯಲ್ಲಿ ಫೆ. 18 ರಂದು ಬ ಗ್ರಾ ,ಪಂ.ಅಧ್ಯಕ್ಷೆ ಪುಷ್ಪಾವತಿ ಆರ್ .ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಉಜಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯ 10 ಪ್ರಾಥಮಿಕ ಹಾಗು ಪ್ರೌಢ ಶಾಲೆಗಳ ತಲಾ 10 ವಿದ್ಯಾರ್ಥಿಗಳು ಗ್ರಾಮ ಸಭೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳು ಹಾಗು ಅಗತ್ಯ ಬೇಡಿಕೆಗಳನ್ನು ಸಭೆಯ ಮುಂದಿಟ್ಟರು.
ಸಭೆಯಲ್ಲಿ ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಪೌಷ್ಟಿಕ ಆಹಾರವನ್ನು ಒದಗಿಸುವ , ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಆಟ , ಪಾಠಗಳ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ರೂಪಿಸುವ ; ಪ್ರತಿ ೩ ರಿಂದ ೬ ವರ್ಷದ ಎಲ್ಲ ಅಂಗನವಾಡಿ ಹಾಗು ಶಾಲೆಗಳಲ್ಲಿ ದಾಖಲಾತಿ ಶಿಕ್ಷಣ ಪ್ರಾರಂಭಿಸುವ , ಜೀತ ಪದ್ಧತಿ ಹಾಗು ಕೃಷಿ ಕಾರ್ಮಿಕ ವೃತ್ತಿಯಲ್ಲಿ ಮಕ್ಕಳನ್ನು ತೊಡಗಿಸುವವರ ವಿರುದ್ಧ ಜಾಗೃತಿ ಮೂಡಿಸುವ ಹಾಗು ಹೆಣ್ಣು ಮಕ್ಕಳ ಪೋಷಣೆ ಹಾಗು ರಕ್ಷಣೆಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು ವಿದ್ಯಾರ್ಥಿಗಳು ತಮ್ಮ ಬೇಡಿಕೆಗಳನ್ನು ಸಭೆಯ ಮುಂದಿಟ್ಟರು.
ಚೈಲ್ಡ್ ರೈಟ್ಸ್ ಟ್ರಸ್ಟ್ ಸ್ಟೇಟ್ ಪ್ರೊ ಜೆಕ್ಟ್ ಅಸಿಸ್ಟೆಂಟ್ ಕೌಶಿಕ ಅವರು ಪ್ರಸ್ತಾವಿಸಿ ಮಕ್ಕಳಿಗೆ ಶಿಕ್ಷಣ ಪಡೆಯುವ , ಜೀವಿಸುವ, ಅಭಿವೃದ್ಧಿ ಹೊಂದುವ , ಭಾಗವಹಿಸುವ ಹಕ್ಕು ಇರುತ್ತದೆ. ಮಕ್ಕಳಿಗೆ ಯಾವುದೇ ಕೊರತೆಯಾಗದಂತೆ ಯೂನಿಫಾರ್ಮ್ , ಪೌಷ್ಟಿಕತೆ ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಗ್ರಾ.ಪಂ.ಉಪಾಧ್ಯಕ್ಷ ರವಿಕುಮಾರ್ ಬರಮೇಲು , ಶಾಲಾ ಮುಖ್ಯ ಶಿಕ್ಷಕಿ ತ್ರಿವೇಣಿ ,ಗ್ರಾ ಪಂ. ಸದಸ್ಯರಾದ ನಾಗೇಶ್ ರಾವ್ , ಜಯರಾಮ , ಶಶಿಕಲಾ , ಸಂಧ್ಯಾ , ದಿನೇಶ್ , ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ, ಶಾಲಾ ಶಿಕ್ಷಕರು , ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು .
ವಿದ್ಯಾರ್ಥಿಗಳ ಸಮಸ್ಯೆ/ಬೇಡಿಕೆಗಳು :
- ಬಿಸಿಊಟದ ಜತೆಗೆ ಮೊಟ್ಟೆ ಕೊಡಬೇಕು.
- ಬೆಳ್ತಿಗೆ ಅಕ್ಕಿಯಲ್ಲಿ ಕಲ್ಲು ಇರುತ್ತದೆ .
- ಊಟಕ್ಕೆ ಕುಚ್ಚಿಗೆ ಅಕ್ಕಿ ಕೊಡಿ.
- ಮಕ್ಕಳ ಸಂಖ್ಯೆಗನುಗುಣವಾಗಿ ಶಾಲೆಯಲ್ಲಿ ಮೈದಾನದ ಕೊರತೆಯಿದೆ
- ಶಾಲೆಯ ಮಕ್ಕಳಿಗೆ ಬೇಕಾದಷ್ಟು ಬೆಂಚ್ ,ಡೆಸ್ಕ್ ಗಳಿಲ್ಲ ..ಪಿ.ಡಿ ಇಲ್ಲ.
- ಉಜಿರೆ ಹಳೆಪೇಟೆ ಹಿ.ಪ್ರಾ .ಶಾಲೆಯಲ್ಲಿ ಶಿಕ್ಷಕರ ಕೊರತೆಯಿದೆ.
- ಮಕ್ಕಳಿಗೆ ಬೇಕಾದಷ್ಟು ಕಂಪ್ಯೂಟರ್ ಗಳಿಲ್ಲ .
- ಮುಂಡತ್ತೋಡಿ ಶಾಲೆಯಲ್ಲಿ ಮಕ್ಕಳಿಗೆ ಕೊಠಡಿಯ ಕೊರತೆಯಿದೆ.
- ಬಿಸಿಊಟದಲ್ಲಿ ಬೇಳೆ ಜತೆಗೆ ಬೇರೆ ಧಾನ್ಯಗಳೂ ಬೇಕು.
- ಸರಕಾರದಿಂದ ಶಾಲೆಗಳಿಗೆ ಪುಸ್ತಕಗಳು ಪೂರ್ಣವಾಗಿ ಇನ್ನು ಬಂದಿಲ್ಲ. 10 ನೇ ತರಗತಿ ಸೋಷಿಯಲ್ ll ಪಾರ್ಟ್ ಪುಸ್ತಕ ಪೂರ್ಣವಾಗಿ ಬಂದಿಲ್ಲ.
- ಪ್ರೈಮರಿ ಶಾಲೆಗೆ ಶೌಚಾಲಯ ಕೊರತೆಯಿದೆ
- ಹಳೆಪೇಟೆ ಹೈಸ್ಕೂಲ್ 9 ನೇ ತರಗತಿ ಬೋರ್ಡ್ ಸರಿಯಿಲ್ಲ. ಸಮೀಪದ ಸ್ಮಶಾನದ ಹೊಗೆಯಿಂದ ಕ್ಲಾಸ್ ನಲ್ಲಿ ಕುಳಿತುಕೊಳ್ಳಲಾಗುತ್ತಿಲ್ಲ . ಶಾಲಾವ ರಣಕ್ಕೆ ಕಾಂಪೌಂಡ್ ಬೇಕು.
- ಶಾಲಾ ಕಟ್ಟಡದ ಚಾವಣಿ ದುರುಸ್ತಿಯಾಗಬೇಕು. ಟಾಯ್ಲೆಟ್ ಹೆಂಚು ಒಡೆದುಹೋಗಿದೆ -ವಂಶಿಕ ,ಸಿದ್ಧವನ ಶಾಲೆ
- ಶಿಕ್ಷಕರ ಕೊರತೆ ಗುರಿಪಳ್ಳ ಶಾಲೆಯಲ್ಲಿ 1 ರಿಂದ 8 ತರಗತಿಯಲ್ಲಿ 71 ಮಕ್ಕಳಿದ್ದು ಇಬ್ಬರು ಶಿಕ್ಷರು ಮತ್ತು ಇಬ್ಬರು ಹಂಗಾಮಿ ಶಿಕ್ಷಕರು ಸೇರಿ 4 ಶಿಕ್ಷಕರಿದ್ದು ಗಣಿತ,ವಿಜ್ಞಾನ ಶಿಕ್ಷರಿಲ್ಲದೆ ಪಾಠಗಳು ನಡೆಯುತ್ತಿಲ್ಲ. ಅಂಗನವಾಡಿಗಳಲ್ಲಿ ಪುಷ್ಟಿ ಆಹಾರದ ಬದಲು ಬೇರೆ ಪ್ರೊಟೀನ್ ಆಹಾರ ಒದಗಿಸಬೇಕು. ಕಳೆದ 2 ವರ್ಷಗಳಿಂದ ಸರಕಾರದ ಸೈಕಲ್ ವಿತರಿಸಿಲ್ಲ.
- ಬದನಾಜೆ ಶಾಲೆಗೆ ಕಾಂಪೌಂಡ್ ಬೇಕು. ಸಿದ್ದವನ ಶಾಲೆಗೆ ಕುಡಿಯುವ ಬಿಸಿನೀರಿನ ಫಿಲ್ಟರ್ ಬೇಕು. ಬದನಾಜೆ ಶಾಲೆಯ ಬಸ್ ಸ್ಟಾಂಡ್ ಸರಿಯಿಲ್ಲ.ಶಾಲೆಯ ಫ್ಯಾನ್ ಹಾಳಾಗಿದೆ. .ವಿದ್ಯಾರ್ಥಿಗಳಿಗೆ ರೆಸ್ಟ್ ರೂಮ್ ಬೇಕು.
ಹೀಗೆ ಬೇಡಿಕೆಗಳು ಕೇಳಿಬಂದವು. ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ.ಅಧ್ಯಕ್ಷೆ ಪುಷ್ಪಾವತಿ ಆರ್ .ಶೆಟ್ಟಿ ಮಕ್ಕಳು ಶಾಲೆಯ ಅಗತ್ಯ ಬೇಡಿಕೆಗಳ ಬಗ್ಗೆ ಸ್ಪಂದಿಸಿ ಪ್ರಶ್ನಿಸಿರುವುದು ಉತ್ತಮ ಬೆಳವಣಿಗೆ. ಪಂಚಾಯತ್ ಹಾಗು ಇಲಾಖಾ ವತಿಯಿಂದ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು. ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆಯಲು ಪ್ರತಿಯೊಬ್ಬನಿಗೂ ಶಿಕ್ಷಣ ಅತಿ ಮುಖ್ಯ . ಸದಾ ಪಂಚಾಯತ್ ನಿಮ್ಮೊಂದಿಗಿರುತ್ತದೆ ಎಂದರು.
ಉಪಾಧ್ಯಕ್ಷ ರವಿಕುಮಾರ್ ಬರಮೇಲು ಶಾಸಕರ ನೇತೃತ್ವದಲ್ಲಿ ಬದನಾಜೆ ಶಾಲೆ ಅಭಿವೃದ್ಧಿಪಡಿಸಿ ,ಮೈದಾನ ,ಕಾಂಪೌಂಡ್ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಮುಂಡತ್ತೋಡಿ ಶಾಲೆಯನ್ನು ದಾನಿಗಳ ನೆರವಿನಿಂದ ಮಾದರಿ ಶಾಲೆಯಾಗಿ ರೂಪಿಸಲಾಗುವುದು. ಮಕ್ಕಳ ಬೇಡಿಕೆ ಬಗ್ಗೆ ಇಲಾಖೆ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದರು ಮುಖ್ಯ ಶಿಕ್ಷಕಿ ತ್ರಿವೇಣಿ ಸರಕಾರಿ ಶಾಲೆಗಳಲ್ಲಿ ಮಕ್ಕಳ ಗೈರುಹಾಜರಾತಿ ಸಮಸ್ಯೆಯಾಗಿದ್ದು ಎಲ್ಲ ಮಕ್ಕಳು ಶಾಲೆಗೆ ಬರಬೇಕು ಎಂದರು.
ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ಶಾಲೆಗಳ ಅಗತ್ಯ ಬೆಡಿಕೆಗಳನ್ನು ಒದಗಿಸಲು ಗ್ರಾ.ಪಂ.ಬದ್ಧವಾಗಿದ್ದು ಆದ್ಯತೆ ನೆಲೆಯಲ್ಲಿ ಸ್ಪಂದಿಸುತ್ತದೆ ಎಂದರು. ಗ್ರಾ,ಪಂ.ಕಾರ್ಯದರ್ಶಿ ಜಯಂತ್ ಯು .ಬಿ. ಸ್ವಾಗತಿಸಿ ,ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.