ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಸೋಮವಾರ (ಫೆ .21) ರಂದು ಜನಜಂಗುಳಿ . ವಿಶೇಷವೆಂದರೆ ಅದು ಮಕ್ಕಳ ಮೇಳ(ಸಂತೆ). ಮಕ್ಕಳ ಜತೆಗೆ ಹಿರಿಯರೂ ಸಂತೆಯಲ್ಲಿ ಕೊಂಡು , ಕೊಳ್ಳುವ ವ್ಯವಹಾರದಲ್ಲಿ ನಿರತರಾಗಿದ್ದರು.
ಮಕ್ಕಳು ತಮ್ಮ ಮನೆಯಲ್ಲಿ ಬೆಳೆದ ತರಕಾರಿ ,ಹಣ್ಣು ಹಂಪಲು ,ದಿನಸಿ ಇತ್ಯಾದಿ ವಸ್ತುಗಳನ್ನು ಸಂತೆಯಲ್ಲಿ ಮಾರಾಟಕ್ಕೆ ತಂದಿರಿಸಿದ್ದರು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆದ ವ್ಯವಹಾರ ಮೇಳ( ಸಂತೆ) ದಲ್ಲಿ ವ್ಯಾಪಾರವೂ ಬಿರುಸಾಗಿಯೇ ಇತ್ತು. ಮದ್ಯಾಹ್ನದ ವೇಳೆಗೆ ವ್ಯಾಪಾರಕ್ಕೆ ತಂದ ವಸ್ತುಗಳೆಲ್ಲ ಮಾರಾಟವಾಗಿ ಮಕ್ಕಳು ಹರ್ಷದ ಹೊನಲಲ್ಲಿ ತೇಲಾಡಿದರು.
ಇದು ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳೇ ಯೋಚಿ ಸಿ, ಆಯೋಜಿಸಿದ ವ್ಯಾಪಾರ ವ್ಯವಹಾರ ಮೇಳದ ವಿಶೇಷ ವೈವಿಧ್ಯ . ಶಾಲಾ ಶಿಕ್ಷಕ ಸಂಜೀವ ಅವರ ಸಂಯೋಜನೆಯಲ್ಲಿ ಮುಖ್ಯ ಶಿಕ್ಷಕರಾದ ಸುಬ್ರಹ್ಮಣ್ಯ ರಾವ್ ,ಶೇಕರ ಗೌಡ ರಜಪೂತ ಮತ್ತಿತರ ಶಿಕ್ಷಕಿಯರ ಸಹಕಾರ , ಮಾರ್ಗದರ್ಶನದಂತೆ ವಿದ್ಯಾರ್ಥಿಗಳೇ ವ್ಯವಹಾರ ಮೇಳ ಸಂಘಟಿಸಿದ್ದರು.
ಪೂರ್ಣಿಮಾ ಜೋಶಿ ಸ್ವಾಗತಿಸಿ ,ಶ್ರೀಜಾ ಎ .ನಿರೂಪಿಸಿದರು. ವ್ಯವಹಾರ ಮೇಳಕ್ಕೆ ಆಗಮಿಸಿದ ಕ್ಷೇತ್ರದ ಡಿ. ಹರ್ಷೇನ್ದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇನ್ದ್ರ ಕುಮಾರ್ ಅವರು ಮಕ್ಕಳು ಶಾಲಾ ಶಿಕ್ಷಣದ ಜತೆಗೆ ವ್ಯವಹಾರ ಜ್ಞಾನವನ್ನೂ ಬೆಳೆಸಿಕೊಳ್ಳಬೇಕು .
ಮನೆಯ ಜವಾಬ್ದಾರಿಕೆಯಲ್ಲಿ ಇದು ಪ್ರಾರಂಭಿಕ ತರಬೇತಿಯಾಗಿ ಮಕ್ಕಳಿಗೆ ಅನುಭವವನ್ನು ಕಲಿಸಿಕೊಡುತ್ತದೆ ಎಂದು ನುಡಿದು ಮೆಚ್ಚುಗೆ ವ್ಯಕ್ತಪಡಿಸಿ ಶುಭ ಕೋರಿದರು.
ಮೇಳದ ಮಾರಾಟ ವಸ್ತು ವೈವಿಧ್ಯಗಳು ಮಕ್ಕಳ ವ್ಯವಹಾರ ಮೇಳದಲ್ಲಿ ಮಕ್ಕಳು ತಮ್ಮ ಮನೆಗಳಲ್ಲಿ ಬೆಳೆಸಿದ ತರಕಾರಿ ,ದಿನನಿತ್ಯ ಉಪಯೋಗಿ ವಸ್ತುಗಳು ,ಸಾಂಬಾರು ಹುಡಿ ,ಸೀಯಾಳ ,ಲಿಂಬು ,ಪಪ್ಪಾಯಿ , ಕಷಾಯದ ಹುಡಿ ,ಶೇಂಗಾ ,ತೆಂಗಿನಕಾಯಿ , ಬಾಳೆದಿಂಡು ,ಆಟದ ಸಾಮಗ್ರಿ ,ವೀಳ್ಯದೆಲೆ ,ಕೆಸುವಿನ ಬೀಜ ,ಬೇವು ,ನುಗ್ಗೆ ಕೊಡು ,ಹಲಸಿನ ಕಾಯಿ ,ಮುಟ್ಟಲೇ ,ಲಾಡು ,ಪೋಡಿ ,ಚರಂಬುರಿ ,ಉಪ್ಪಿನ್ಕಾರ್ಯ್ ,ಮಜ್ಜಿಗೆ , ಜಿಯಾ ಕ್ಯಾಂಟೀನ್ ,ಜ್ಯೂಸ್ .ಐಸ್ ಕ್ರೀಮ್,ಹೋಟೆಲ್,ಮಕ್ಕಳ ಆಟಿಕೆಗಳು – ಹೀಗೆ ಸುಮಾರು ೭೨ ಬಗೆಯ ವಸ್ತು ವೈವಿಧ್ಯಗಳು ಮೇಳದಲ್ಲಿ ಮಾರಾಟಕ್ಕೆ ಇರಿಸಲಾಗಿತ್ತು .
ವಿಶೇಷವೆಂದರೆ ಕಾಲು ಉಳಿಕಿದರೆ,ನೋವು ನಿವಾರಕ ,ನರ ಸೆಳೆತಕ್ಕಾಗಿ ವಾಸು ಪಂಡಿತರ ನೋವಿನ ಎಣ್ಣೆ (ತನಿಯ ತೈಲ ) ಹಾಗು ದೃಷ್ಟಿ ನಿವಾರಕ ತೈಲವೂ , 3 ಮೊಲಗಳನ್ನೂ (ತಲಾ ರೂ 450/=) ವ್ಯಾಪಾರಕ್ಕೆ ಇರಿಸಲಾಗಿತ್ತು. ಮಕ್ಕಳೂ ಉತ್ಸಾಹ,ಉಲ್ಲಾಸದಿಂದ ವ್ಯಾಪಾರ ಮೇಳದಲ್ಲಿ ಪಾಲ್ಗೊಂಡಿದ್ದರು .