ಮಂಗಳೂರು: ಅಸಾನಿ ಚಂಡಮಾರುತ ಪ್ರಭಾವದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆಯಿಂದ ನಿರಂತರ ವರ್ಷಧಾರೆಯಾಗಿದೆ. ಹವಾಮಾನ ಇಲಾಖೆ ಇನ್ನು ಎರಡು ದಿನಗಳ ಕಾಲ ಕರಾವಳಿಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಅಬ್ಬರವಿಲ್ಲದ ಹನಿ ಮಳೆಯಾಗಿದ್ದು, ದೈನಂದಿನ ಉರಿ ಸೆಕೆಯಿಂದ ತತ್ತರಿಸಿದ್ದ ಜನರು ನಿರಾಳತೆ ಅನುಭವಿಸುವಂತಾಯಿತು.
ಬಂಟ್ವಾಳದ ಕೆದಿಲದಲ್ಲಿಅತ್ಯಧಿಕ 65.5 ಮಿಮೀ ಮಳೆಯಾಗಿದ್ದು, ಇಡ್ಕಿದು 59.5, ಅನಂತಾಡಿ 49.5, ಇರಾ 48, ಸುಳ್ಯದ ಬಾಳಿಲ 45 ಮಿಮೀ. ಮಳೆಯಾಗಿದೆ. ಬಳ್ಪ, ಕಲ್ಮಡ್ಕ, ಬೆಳ್ಳಾರೆ, ಮಂಚಿ, ನರಿಕೊಂಬು, ಅಡ್ಯಾರ್, ಹರೇಕಳ, ಬಳ್ನಾಡು ಮೊದಲಾದೆಡೆಗಳಲ್ಲಿ ಹೆಚ್ಚು ಮಳೆಯಾಗಿದೆ. ಮಂಗಳೂರಿನಲ್ಲಿ ದಿನದ ಗರಿಷ್ಠ ತಾಪಮಾನ 28.4 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 26.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮಳೆಯಿಂದಾಗಿ ಸಾಮಾನ್ಯಕ್ಕಿಂತ ಸುಮಾರು 6 ಡಿಗ್ರಿ ಸೆಲ್ಸಿಯಸ್ನಷ್ಟು ಗರಿಷ್ಠ ತಾಪಮಾನದಲ್ಲಿ ಇಳಿಕೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನಗರ ಭಾಗದಲ್ಲಿ ಸಾಧಾರಣ ಮಳೆಯಾದರೆ ಗ್ರಾಮಾಂತರ ಭಾಗದಲ್ಲಂತೂ ಉತ್ತಮ ಮಳೆಯಾಗಿದೆ. ವಿಶೇಷವಾಗಿ ಪುತ್ತೂರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿ ಹಾಗೂ ಮೂಡುಬಿದಿರೆ ಭಾಗದಲ್ಲಿಉತ್ತಮ ಮಳೆಯಾಗಿದೆ. ಕೆಲವು ಕಡೆಯಲ್ಲಿ ಗುಡುಗು, ಸಿಡಿಲಿನ ಜತೆಗೆ ಗಾಳಿ ಮಳೆಯಿಂದಾಗಿ ಸಮಸ್ಯೆಗಳು ಸೃಷ್ಟಿಯಾಗಿದೆ. ಸುಳ್ಯ ನಗರ, ಸುಬ್ರಹ್ಮಣ್ಯ, ಗುತ್ತಿಗಾರು, ಎಲಿಮಲೆ, ದೊಡ್ಡತೋಟ, ಬೆಳ್ಳಾರೆ, ಜಾಲ್ಸೂರು, ಪಂಜ ಸೇರಿ ನಾನಾ ಕಡೆ ಭಾರಿ ಮಳೆಯಾಗಿದೆ.