News Kannada
Friday, December 09 2022

ಮಂಗಳೂರು

ಕಾಂಗ್ರೆಸ್‌ ಪಕ್ಷ ಕರಾವಳಿಗೆ ಪ್ರತ್ಯೇಕ ಚುನಾವಣ ಪ್ರಣಾಳಿಕೆ ಸಿದ್ಧಪಡಿಸಲಿದೆ: ಡಿಕೆಶಿ

Photo Credit : News Kannada

ಮಂಗಳೂರು: ಕರಾವಳಿಯ ಸಮಗ್ರ ಅಭಿವೃದ್ಧಿ ಮತ್ತು ಎಲ್ಲ ವರ್ಗಗಳ ಹಿತವನ್ನು ಕಾಯ್ದು ಕೊಳ್ಳುವ ಗುರಿಯನ್ನಿರಿಸಿಕೊಂಡು ಕಾಂಗ್ರೆಸ್‌ ಪಕ್ಷ ಕರಾವಳಿಗೆ ಪ್ರತ್ಯೇಕ ಚುನಾವಣ ಪ್ರಣಾಳಿಕೆಯನ್ನು ಸಿದ್ಧಪಡಿ ಸಲಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ದಕ್ಷಿಣ ಕನ್ನಡ ಮೂಲದ, ಕರ್ನಾಟಕ ವಿಧಾನಪರಿಷತ್ತಿನ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಹಾಗೂ ವಿಧಾನಸಭೆಯ ವಿಪಕ್ಷ ಉಪ ನಾಯಕ ಯು.ಟಿ. ಖಾದರ್‌ ಅವರಿಗೆ ಅಭಿನಂದನ ಸಮಿತಿ ವತಿಯಿಂದ ನಗರದ ಕುದ್ಮುಲ್‌ ರಂಗರಾವ್‌ ಪುರ ಭವನದಲ್ಲಿ ಗುರುವಾರ ಆಯೋಜಿಸಿದ್ದ ಅಭಿನಂದನ ಸಮಾರಂಭದ ಅಧ್ಯಕ್ಷತೆ ವಹಿಸಿ ಸಮ್ಮಾನ ನೆರವೇರಿಸಿ ಅವರು ಮಾತನಾಡಿ, ಮೀನುಗಾರರು, ಬಿಲ್ಲವರು, ಹಿಂದುಳಿದವರು ಸೇರಿದಂತೆ ಎಲ್ಲ ವರ್ಗಗಳಿಗೆ ಪೂರಕವಾದ ಪ್ರಣಾಳಿಕೆ ಇದಾಗಲಿದೆ. ಇದಕ್ಕಾಗಿ ತಾನು ಸದ್ಯದಲ್ಲೇ ಕರಾವಳಿಗೆ ಆಗಮಿಸಿ ಇಲ್ಲಿನ ನಾಯಕರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದರು.

ಸ್ವಾಭಿಮಾನಿ ನಾಯಕರು :

ಹರಿಪ್ರಸಾದ್‌ ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ, ನಾಯಕನಾಗಿ ಕಳೆದ 40 ವರ್ಷಗಳಿಂದ ಪಕ್ಷಕ್ಕಾಗಿ ದುಡಿದು ಶಕ್ತಿಯನ್ನು ತುಂಬಿದವರು. ಎಂದೂ ಅಧಿಕಾರವನ್ನು ಹುಡುಕಿಕೊಂಡು ಹೋದವರಲ್ಲ. ಅಧಿಕಾರಕ್ಕಾಗಿ ಸ್ವಾಭಿಮಾನವನ್ನು ಬಿಟ್ಟವರಲ್ಲ. ನೇರ ನಡೆ ನುಡಿಯ ನಾಯಕ. ಇದೇ ರೀತಿ ಯುವ ನಾಯಕ ಯು.ಟಿ. ಖಾದರ್‌ ಕೂಡ ಪಕ್ಷವನ್ನು ಸಂಘಟಿಸುವಲ್ಲಿ ಬದ್ಧತೆಯಿಂದ ಶ್ರಮಿಸಿದವರು. ಪಕ್ಷ ನೀಡಿದ ಜವಾಬ್ದಾರಿಯನ್ನು ದಕ್ಷತೆಯಿಂದ ನಿರ್ವಹಿಸಿದವರು ಎಂದು ಅಭಿನಂದಿಸಿದರು.

ದ್ವೇಷ ಬಿತ್ತುವ ಬಿಜೆಪಿ :

ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರದ ಆಡಳಿತದಿಂದ ಜನತೆ ಸಂಪೂರ್ಣ ಭ್ರಮನಿರಸನಗೊಂಡಿದೆ. ಭ್ರಷ್ಟಾಚಾರ, ಲಂಚ ಮಿತಿ ಮೀರಿದೆ. ಮತೀಯವಾದವನ್ನು ತಮ್ಮ ಮುಖ್ಯ ಕಾರ್ಯಸೂಚಿಯನ್ನಾಗಿ ಮಾಡಿಕೊಂಡು ಜನರ ಮಧ್ಯೆ ದ್ವೇಷ ಸೃಷ್ಟಿಸುವ ಕಾರ್ಯ ಮಾಡುತ್ತಿದೆ ಎಂದು ಆರೋಪಿಸಿದ ಅವರು ಸಮಾನತೆಯ ಸಂದೇಶವನ್ನು ನೀಡಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಪಾಠವನ್ನು ಪಠ್ಯದಿಂದ ತೆಗೆದುಹಾಕುವ ಮೂಲಕ ತನ್ನ ನಿಜರೂಪವನ್ನು ಬಿಜೆಪಿ ಬಯಲು ಮಾಡಿದೆ. ಆದರೆ ಇದನ್ನು ಪ್ರತಿಭಟಿಸಿ ರಾಜೀನಾಮೆ ನೀಡಬೇಕಾಗಿದ್ದ ಸಚಿವರಾದ ಸುನಿಲ್‌ ಕುಮಾರ್‌ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಕ್ಕೆ ಅಂಟಿಕೊಂಡಿದ್ದಾರೆ ಎಂದರು.

ರಾಜ್ಯಸಭಾ ಸದಸ್ಯ ಡಾ| ಎಲ್‌. ಹನುಮಂತಯ್ಯ ಅವರು ಅಭಿನಂದನ ಭಾಷಣ ಮಾಡಿ, ಹರಿಪ್ರಸಾದ್‌ ಮತ್ತು ಯು.ಟಿ. ಖಾದರ್‌ ಅವರನ್ನು ಅಭಿನಂದಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್‌ ಕಾರ್ಯಕ್ರಮ ಉದ್ಘಾಟಿಸಿ ಈ ಅಭಿನಂದನ ಸಮಾರಂಭ ಇಬ್ಬರು ನಾಯಕರನ್ನು ಅಭಿನಂದಿಸುವ ಜತೆಗೆ ಪಕ್ಷ ಸಂಘಟನೆಯ ನಿಟ್ಟಿನಲ್ಲಿ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಕಾರ್ಯಕ್ರಮವೂ ಆಗಿದೆ ಎಂದರು.

ಸಮಬಾಳು, ಸಮಪಾಲು :

ಅಭಿನಂದನೆ ಸ್ವೀಕರಿಸಿದ ಬಿ.ಕೆ. ಹರಿಪ್ರಸಾದ್‌ ಮಾತನಾಡಿ, ಕಾಂಗ್ರೆಸ್‌ ಪಕ್ಷ ಸರ್ವರಿಗೂ ಸಮಬಾಳು, ಸಮಪಾಲು ಸಿದ್ಧಾಂತದಲ್ಲಿ ಮುನ್ನಡೆ ದುಕೊಂಡುಬಂದಿರುವ ಪಕ್ಷ ಮತ್ತು ಇದರಿಂದ ಎಂದೂ ವಿಮುಖವಾಗಿಲ್ಲ. ಆರೆಸ್ಸೆಸ್‌, ಬಿಜೆಪಿಯ ಕೋಮು ವಾದವನ್ನು ಕಾಂಗ್ರೆಸ್‌ ಪಕ್ಷ ಸಮರ್ಥ ವಾಗಿ ಹಿಮ್ಮೆಟಿಸಲಿದೆ ಎಂದರು.

See also  ಮಾತಾ ಅಮೃತಾನಂದಮಯಿ ಮಠದ ಶ್ರೀ ಬ್ರಹ್ಮಸ್ಥಾನ ಕ್ಷೇತ್ರ ದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ

ಯು.ಟಿ. ಖಾದರ್‌ ಮಾತನಾಡಿ, ಈ ಅಭಿನಂದನೆ ನನ್ನನ್ನು ಬೆಳೆಸಿದ ನನ್ನ ಕ್ಷೇತ್ರದ ಜನರಿಗೆ ಅರ್ಪಿಸುತ್ತೇನೆ ಎಂದರು. ಪಕ್ಷದ ಕಾರ್ಯಕರ್ತರು ಬೂತ್‌ಮಟ್ಟದಿಂದಲೇ ಪಕ್ಷ ಸಂಘಟನೆಯನ್ನು ಬಲಪಡಿಸುವ ಕಾರ್ಯದಲ್ಲಿ ನಿರತರಾಗಿ ಮುಂದಿನ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಜಯಗಳಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಕರೆ ನೀಡಿದರು.

ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಬಿ.ಕೆ. ಹರಿಪ್ರಸಾದ್‌ ಹಾಗೂ ಯು.ಟಿ. ಖಾದರ್‌ ಅವರನ್ನು ಅಭಿನಂದಿಸಿದರು. ಅಭಿನಂದನ ಸಮಿತಿ ಸಂಚಾಲಕ ಶಶಿಧರ ಹೆಗ್ಡೆ ಸ್ವಾಗತಿಸಿ ಪ್ರಸ್ತಾವನೆಗೈದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ. ಹರೀಶ್‌ ಕುಮಾರ್‌, ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವರಾದ ಕೆ. ಅಭಯ ಚಂದ್ರ ಜೈನ್‌, ಮಾಜಿ ಶಾಸಕರಾದ ವಿಜಯ ಕುಮಾರ್‌ ಶೆಟ್ಟಿ, ಮೊದಿನ್‌ ಬಾವಾ, ಶಕುಂತಾಳ ಶೆಟ್ಟಿ, ಜೆ.ಆರ್‌. ಲೋಬೋ, ರಾಜ್ಯಸಭಾ ಸದಸ್ಯ ಇಬ್ರಾಹಿಂ, ನಾಯಕರಾದ ಮಹಮ್ಮದ್‌ ಮಸೂದ್‌, ಇಬ್ರಾಹಿಂ ಕೋಡಿಜಾಲ್‌, ಮೋಹನ್‌ ಪಿ.ವಿ., ಮಿಥುನ್‌ ರೈ, ಧನಂಜಯ ಅಡ³ಂಗಾಯ, ರಾಜಶೇಖರ ಕೋಟ್ಯಾನ್‌, ಪ್ರಸಾದ್‌ರಾಜ್‌ ಕಾಂಚನ್‌,ಮಮತಾ ಗಟ್ಟಿ, ಕವಿತಾ ಸನಿಲ್‌, ರಾಕೇಶ್‌ ಮಲ್ಲಿ, ಡಾ| ರಘ, ಹೇಮನಾಥ ಶೆಟ್ಟಿ,ಅಮೃತ್‌ ಶೆಣೈ ಅತಿಥಿಗಳಾಗಿದ್ದರು.

ಅಭಿನಂದನ ಸಮಿತಿಯ ಪುರುಷೋತ್ತಮ ಚಿತ್ರಾಪುರ, ನವೀನ್‌ ಆರ್‌. ಡಿ’ಸೋಜಾ, ರವೂಫ್‌, ಲುಕಾ¾ನ್‌ ಬಂಟ್ವಾಳ, ಸುಧೀರ್‌ ಟಿ.ಕೆ., ಶಬೀರ್‌ ಉಪಸ್ಥಿತರಿದ್ದರು. ಸಾಹುಲ್‌ ಹಮೀದ್‌ ನಿರೂಪಿಸಿದರು.

ಈ ನೆಲ ಶಕ್ತಿ ನೀಡಿದೆ: ಹರಿಪ್ರಸಾದ್‌ :

ತನ್ನ ತಂದೆ ಬಂಟ್ವಾಳ ತಾಲೂಕಿನ ಅರಳದವರು. ತಾಯಿ ಉಳ್ಳಾಲದವರು. ಧೈರ್ಯ, ಸಾಹಸ, ಅಭಿವೃದ್ಧಿ ಪರ ಚಿಂತನೆ ಕರಾವಳಿಯ ನೆಲದ ಗುಣ.ಇದು ನನಗೆ ಅನ್ಯಾಯ, ದಬ್ಟಾಳಿಕೆ, ದೌರ್ಜನ್ಯದ ವಿರುದ್ಧ ಹೋರಾಡುವ ಸ್ಫೂರ್ತಿ ಮತ್ತು ಶಕ್ತಿಯನ್ನು ನೀಡಿದೆ ಎಂದು ಬಿ.ಕೆ. ಹರಿಪ್ರಸಾದ್‌ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು