ಮಂಗಳೂರು (ಮೇ 27 ): ಸೋಶಿಯಲ್ ಡೆಮೋಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ( ಎಸ್ಡಿಪಿಐ ) ವತಿಯಿಂದ ಬೃಹತ್ ಜನಾಧಿಕಾರ ಸಮಾವೇಶ ಕಣ್ಣೂರು ಮೈದಾನದ ಮರ್ಹೂಂ ಕೆ. ಎಂ. ಶರೀಫ್ ವೇದಿಕೆಯಲ್ಲಿ ನಡೆಯಿತು.
ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಎಸ್ಡಿಪಿಐ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಭಾರತವನ್ನು ಫ್ಯಾಸಿಸಂ ನಿಂದ ರಕ್ಷಿಸ ಬೇಕಾದ ಮತ್ತು ಭಾರತವನ್ನು ಸಾರ್ವಭೌಮ ಪ್ರಜಾತಾಂತ್ರಿಕ ಗಣರಾಜ್ಯವನ್ನಾಗಿ ಉಳಿಸಿಕೊಳ್ಳಲು ಎಸ್ಡಿಪಿಐ ಕಟ್ಟಿಬದ್ಧವಾಗಿದೆ ಎಂದರು.
ರಾಜ್ಯದಲ್ಲಿ ಸಂಘ ಪರಿವಾರದ ಆಟೋಟೋಪಗಳಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಹೆದರಬಹುದು. ಆದರೆ ಎಸ್ಡಿಪಿಐ ಹೆದರಲಾರದು. ನಿಮ್ಮ ಎಲ್ಲಾ ಸಮಾಜ ವಿರೋಧಿ ಚಟುವಟಿಕೆಗಳನ್ನು ಕಾನೂನಾತ್ಮಕವಾಗಿ ಮಟ್ಟಹಾಕಲಿದೆ ಎಂದರು.1991 ರ ಧಾರ್ಮಿಕ ಸ್ಥಳಗಳ ಸಂರಕ್ಷಣಾ ಕಾಯ್ದೆಯಂತೆ ಯಾವುದೇ ಧಾರ್ಮಿಕ ಸ್ಥಳಗಳ ಮೇಲೆ ಸಂಚು ಹೂಡಲು ಅವಕಾಶವಿಲ್ಲ. ಆದರೆ ಈ ಜಿಲ್ಲೆಯಲ್ಲಿ ಸಂಘಪರಿವಾರದ ಕಿಡಿಗೇಡಿಗಳು ಮಳಲಿ ಮಸೀದಿಯ ಮೇಲೆ ಸುಳ್ಳು ಕಥೆಗಳನ್ನು ಕಟ್ಟ ತೊಡಗಿದ್ದಾರೆ. ಇಂತಹವರ ಮೇಲೆ ಪೊಲೀಸ್ ಇಲಾಖೆ ಕೇಸು ದಾಖಲಿಸಬೇಕು ಎಂದರು.
ಬಳ್ಳಾರಿಯಲ್ಲಿ ಬಿಜೆಪಿ ನಾಯಕ ಜನಾರ್ದನ ರೆಡ್ಡಿ ನೇತೃತ್ವದಲ್ಲಿ ಶತಮಾನಗಳ ಇತಿಹಾಸವಿರುವ ಸುಗ್ಗಳಮ್ಮ ದೇವಿಯ ದೇವಸ್ಥಾನವನ್ನು ಬಾಂಬಿಟ್ಟು ಒಡೆದ ಈ ಧರ್ಮ ದ್ರೋಹಿಗಳು ಈಗ ಮಸೀದಿಗಳ ಅಡಿಯಲ್ಲಿ ದೇವಸ್ಥಾನ ಹುಡುಕ ತೊಡಗಿದ್ದಾರೆ. ಈಗ ಜಿಲ್ಲೆಯಲ್ಲಿ ಮಳಲಿ ಮಸೀದಿಯ ವಿವಾದಕ್ಕೆ ಕೈಹಾಕಿ ಮೂಢನಂಬಿಕೆಯ ವೀಳ್ಯದೆಲೆಯಲ್ಲಿ ಇತಿಹಾಸ ಹುಡುಕುವ ನಾಟಕ ಮಾಡಿ ಮಸೀದಿಯ ಮೇಲೆ ಹಕ್ಕು ಸಾಧಿಸುವ ಮಾತುಗಳನ್ನಾಡುತ್ತಿದ್ದಾರೆ. ಮಳಲಿ ಮಸೀದಿ ಬಿಡಿ ಅಲ್ಲಿನ ಒಂದು ಹಿಡಿ ಮರಳನ್ನು ಮುಟ್ಟಲೂ ಎಸ್ಡಿಪಿಐ ಕಾರ್ಯಕರ್ತರು ಅವಕಾಶ ನೀಡಲಾರೆವು ಎಂದರು.
ಸಮಾವೇಶವನ್ನು ಎಸ್ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮಹಮ್ಮದ್ ತುಂಬೆ ಉದ್ಘಾಟಿಸಿದರು. ಎಸ್ಡಿಪಿಐ ಕೇರಳ ರಾಜ್ಯಾಧ್ಯಕ್ಷರಾದ ಮೂವಾಟ್ಟಿಪುಝ ಅಶ್ರಫ್ ಮೌಲವಿ, ರಾಷ್ಟ್ರೀಯ ಕಾರ್ಯದರ್ಶಿ ಅಲ್ಪೊನ್ಸ್ ಫ್ರ್ಯಾಂಕೋ, ರಿಯಾಜ್ ಫರಂಗಿಪೇಟೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಆರ್.ಭಾಸ್ಕರ್ ಪ್ರಸಾದ್, ವುಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯಾಧ್ಯಕ್ಷೆ ಶಾಹಿದಾ ತಸ್ನಿಮ್, ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ, ರಾಜ್ಯ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ, ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷ ಅಥಾವುಲ್ಲಾ ಪೂಂಜಾಲ ಕಟ್ಟೆ ಮಾತನಾಡಿದರು.
ವೇದಿಕೆಯಲ್ಲಿ ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು, ರಾಜ್ಯ ಸಂಘಟನಾ ಕಾರ್ಯದರ್ಶಿ ಮಜೀದ್ ತುಂಬೆ, ರಾಜ್ಯ ಕಾರ್ಯದರ್ಶಿ ಆಶ್ರಫ್ ಮಾಚಾರ್,ಶಾಫಿ ಬೆಳ್ಳಾರೆ, ರಾಜ್ಯ ಸಮಿತಿ ಸದಸ್ಯರಾದ ಅಥಾವುಲ್ಲಾ ಜೋಕಟ್ಟೆ, ಜಲೀಲ್ ಕೆ, ರಿಯಾಝ್ ಕಡಂಬು,ಝೀನತ್ ಬಂಟ್ವಾಳ, ಎಸ್ಡಿಪಿಐ ದ ಕ.ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ, ಉಡುಪಿ ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇಕ್ಬಾಲ್ ಬೆಳ್ಳಾರೆ ಮತ್ತು ಝಾಹಿದ್ ಮಲಾರ್ ಕಾರ್ಯಕ್ರಮ ನಿರೂಪಿಸಿದರು.