ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜ್ಯುಕೇಶನಲ್ ಸೊಸೈಟಿ ರಿ. ಉಜಿರೆ ಇವರ ಆಡಳಿತಕ್ಕೊಳಪಟ್ಟ ಸಂಸ್ಥೆ ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯು ಕೇವಲ ಆಟ, ಪಾಠಕ್ಕೆ ಸೀಮಿತಗೊಳ್ಳದೆ ವಿವಿಧ ಕಾರಣಗಳಿಗಾಗಿಯೂ ಗುರುತಿಸಲ್ಪಡುತ್ತಿದೆ.
ಸುಂದರವಾದ ಪರಿಸರದ ಆವರಣದೊಳಗೆ ಶೋಭಿಸುತ್ತಿರುವ ಈ ಶಾಲೆಯು ಇದೀಗ ತನ್ನ ಗೋಡೆಗಳಲ್ಲೆಲ್ಲಾ ಬಣ್ಣ ಬಣ್ಣದ, ವೈವಿಧ್ಯಮಯ ರೇಖೆ, ಚಿತ್ರ ಮತ್ತು ಭಾವಚಿತ್ರಗಳಿಂದ ಆವರಿಸಿಕೊಂಡು, ಕಲಾ ಗ್ಯಾಲರಿಯಾಗಿ ನೋಡುಗರ ಕಣ್ಮನ ಸೆಳೆಯುತ್ತಿದೆ.
ಶಾಲಾವರಣವನ್ನು ಪ್ರವೇಶಿಸಿದಂತೆ ಇಲ್ಲೇನೊ ಹೊಸತನವಿದೆ ಎಂಬ ಅನುಭವವಾಗುತ್ತದೆ. ಮೂರು ಸುತ್ತಿನ ಒಳಾವರಣದ ಗೋಡೆಗಳಲ್ಲಿ ಬಣ್ಣ ಬಣ್ಣದ ರೇಖೆಗಳ ವರ್ಲಿ ಚಿತ್ರಗಳ ಅಲಂಕಾರವಿದೆ. ನಮ್ಮ ದೇಶದ ಮತ್ತು ರಾಜ್ಯದ ಶಾಸ್ತ್ರೀಯ ಹಾಗೂ ಜಾನಪದ ಕಲಾಪ್ರಕಾರಗಳ ಪೈಂಟಿಂಗ್ಸ್ ಗಳ ಸಾಲು ರಾರಾಜಿಸುತ್ತಿವೆ. ಆ ನಂತರ ರಾಷ್ಟ್ರ ಪ್ರಸಿದ್ಧರಾಗಿರುವ ಎಂಬತ್ತೆರಡು ಮಹನೀಯರ ಭಾವಚಿತ್ರಗಳು ಮುರೂ ಸುತ್ತುಗಳ ಭಿತ್ತಿಗಳಲ್ಲಿ, ನಮ್ಮ ಚಿತ್ತಭಿತ್ತಿಗಳನ್ನು ಆಕರ್ಷಿಸುತ್ತಿವೆ.
ಶಾಲೆಯು ಈ ಕಲಾ ಗ್ಯಾಲರಿಯೊಂದಿಗೆ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿ ರೂಪುಗೊಂಡಿದೆ. ಇಲ್ಲಿನ ವರ್ಲಿ ರೇಖಾಚಿತ್ರಗಳು ಕಲಾ ಗ್ಯಾಲರಿಗೆ ಹಾರವನ್ನು ತೊಡಿಸಿದಂತಿದೆ. ಈ ಹಾರದ ಸುತ್ತಲಿನ ಪೈಂಟಿಂಗ್ಸ್ ಗಳು ಮತ್ತು ಭಾವಚಿತ್ರಗಳು ವೈವಿಧ್ಯತೆಗಳಿಂದ ಕೂಡಿದೆ. ಭಾರತೀಯ ಶಾಸ್ತ್ರೀಯ ಕಲೆಗಳಾದ ಭರತನಾಟ್ಯ, ಕುಚುಪುಡಿ, ಒಡಿಸ್ಸಿ , ಕಥಕ್, ಮೋಹಿನಿಯಾಟ್ಟಂ,ಕಥಕ್ಕಳಿ ಮುಂತಾದವುಗಳ ಪೈಂಟಿಂಗ್ಸ್. ನಮ್ಮ ರಾಜ್ಯದ ಮತ್ತು ಜಿಲ್ಲೆಯ ಜಾನಪದ ಕಲಾ ಪ್ರಕಾರಗಳಾದ ಯಕ್ಷಗಾನ, ಭೂತಾರಾಧನೆ, ಕರಗ, ಡೊಳ್ಳು ಕುಣಿತ, ಕಂಗೀಲು, ಸೋಣೆ ಜೋಗಿ, ಆಟಿ ಕಳಂಜ, ಕಂಬಳ, ಹುಲಿವೇಷವೇ ಮುಂತಾದ ಇಪ್ಪತ್ತಾರು ಚಿತ್ರಗಳು ಆಕರ್ಷಕವಾಗಿ ನೋಟಕರನ್ನು ಸೆಳೆಯುತ್ತಿದೆ.
ಜೊತೆಗೆ ಬಲು ಅಪೂರ್ವವಾದ, ಪ್ರಾಚೀನ ಭಾರತದಿಂದ ತೊಡಗಿ ಆಧುನಿಕದವರೆಗಿನ ಎಂಬತ್ತೆರಡು ಮಹಾನ್ ಸಾಧಕರ ಭಾವಚಿತ್ರಗಳು ಕಲಾ ಗ್ಯಾಲರಿಗೆ ಕಿರೀಟ ತೊಡಿಸಿದಂತಿದೆ. ಇದರಲ್ಲಿ ವಾಲ್ಮೀಕಿ, ವ್ಯಾಸ, ಭರತ ಮುನಿ, ಪತಂಜಲಿ, ವರಾಹ ಮಿಹಿರ, ಆರ್ಯಭಟ, ಭಾಸ್ಕರಾಚಾರ್ಯ, ಕಣಾದ, ಸಾಯಣಾಚಾರ್ಯ, ಚರಕ, ಸುಶ್ರೀತ, ಮಹಾವೀರ, ಬುದ್ಧ, ಮಹಮ್ಮದ್ ಪೈಗಂಬರ್, ಏಸು ಕ್ರಿಸ್ತ, ಆಚಾರ್ಯತ್ರಯರು,ಬಸವಣ್ಣ, ಅಕ್ಕಮಹಾದೇವಿ, ಕಲ್ಹಣ, ಪಂಪ, ರನ್ನ, ಜನ್ನ, ಪೊನ್ನ, ರತ್ನಾಕರವರ್ಣಿ, ಜ್ಞಾನಪೀಠ ಪುರಸ್ಕೃತ ಕವಿ ಸಾಹಿತಿಗಳು, ಮೇಜರ್ ಧ್ಯಾನ್ ಚಂದ್, ಗಾಂಧಿ , ಅಂಬೇಡ್ಕರ್, ವಿವೇಕಾನಂದ, ಸಲೀಂ ಆಲಿ, ಭೀಮಸೇನ್ ಜೋಷಿ, ಲತಾ ಮಂಗೆಶ್ಕರ್ ಹೀಗೆ ಕವಿಗಳು , ಸಾಹಿತಿಗಳು, ಸಂಶೋಧಕರು, ಸ್ವಾತಂತ್ರ್ಯ ಹೋರಾಟಗಾರರು, ವಿಜ್ಞಾನಿಗಳೇ ಮೊದಲಾದವರ ಎಂಬತ್ತೆರಡು ಭಾವಚಿತ್ರಗಳು ಗ್ಯಾಲರಿಯಲ್ಲಿ ಶೋಭಿಸುತ್ತಿವೆ.
ಇದೊಂದು ತೆರೆದ ಕಲಾ ಗ್ಯಾಲರಿಯಾಗಿದೆ. ವಿದ್ಯಾರ್ಥಿಗಳಿಗೆ ನಿತ್ಯ ದರ್ಶನ ನೀಡುವ ಶೈಕ್ಷಣಿಕ ಮತ್ತು ಪಠ್ಯ ಪೂರಕ ಮಾಹಿತಿಗಳಾಗಿವೆ. ಇದರ ರಚನೆಯ ಹಿಂದೆ, ಶಾಲಾ ಮುಖ್ಯೋಪಾಧ್ಯಾಯರ ಮತ್ತು ಸಿಬ್ಬಂದಿಗಳ ದೂರದೃಷ್ಟಿ ಮತ್ತು ಶ್ರಮ ಕಾಣುತ್ತಿದೆ.
ಇಷ್ಟೊಂದು ಪೈಂಟಿಂಗ್ಸ್ ಮತ್ತು ವರ್ಲಿ ಚಿತ್ರಗಳ ರಚನೆಯಲ್ಲಿ ಶಾಲೆಯ ಚಿತ್ರಕಲಾ ಅಧ್ಯಾಪಕರಾದ ಶ್ರೀರಾಮರ ನೇತೃತ್ವ ಮತ್ತು ಶ್ರೀ ಧ. ಮ. ಶಿಕ್ಷಣ ಸಂಸ್ಥೆಗಳ ಚಿತ್ರಕಲಾ ಶಿಕ್ಷಕರ ಶ್ರಮ ಅಪಾರವಾಗಿ ಸಂದಿದೆ. ಇವರೊಂದಿಗೆ ಶಾಲಾ ಮಕ್ಕಳನ್ನೂ ತೊಡಗಿಸಿಕೊಂಡು ಅವರಿಗೂ ಚಿತ್ರಕಲೆಯ ಪ್ರಾಯೋಗಿಕ ಅನುಭವ ನೀಡಿದ್ದಾರೆ. ವಿಶೇಷವಾಗಿ ಪೈಂಟಿಂಗ್ಸ್ ನಲ್ಲಿ ಶಾಲೆಯ ಹಳೆ ವಿದ್ಯಾರ್ಥಿ, ಕಲಾಕಾರ ವಿಘ್ನೇಶ್ ಮಾಯಾ ಅವರ ಕೈಚಳಕ ಎದ್ದು ಕಾಣುತ್ತಿದೆ.
ಇಷ್ಟೊಂದು ರಚನೆಗಳಿಗೆ ಆರ್ಥಿಕ ಬೆಂಬಲವನ್ನು ನೀಡಿದವರು ಶಾಲೆಯ ಹಳೆ ವಿದ್ಯಾರ್ಥಿಗಳು ಮತ್ತು ಊರಿನ ವಿವಿಧ ಸಂಘ ಸಂಸ್ಥೆಗಳವರು. ಈ ಕಲಾ ಗ್ಯಾಲರಿಯ ರಚನೆಯಲ್ಲಿ, ಬಹಳಷ್ಟು ಶ್ರಮ ಸೇವಾರೂಪದಲ್ಲಿ ಬಂದಿವೆ. ಆದರೂ ಸುಮಾರು ಎಪ್ಪತ್ತೈದು ಸಾವಿರ ರೂಪಾಯಿಗಳ ವೆಚ್ಚ ತಗಲಿರುವ ಬಗ್ಗೆ ಮುಖ್ಯೋಪಾಧ್ಯಾಯ ರಾಮಕೃಷ್ಣ ಬೆಳಾಲು ಅವರು ವಿವರ ನೀಡಿದ್ದಾರೆ.
ಸದ್ಯ ಬೆಳಾಲು ಶಾಲೆಯು ಪರಿಸರ ಸಂರಕ್ಷಣೆ ಮತ್ತು ನೀರಿಂಗಿಸುವ ವಿಶೇಷ ಪ್ರಯೋಗಗಳಿಂದ ಜನಾಕರ್ಷಣೆಯನ್ನು ಪಡೆದಿರುವುದರ ಜೊತೆಗೆ ಕಲಾ ಗ್ಯಾಲರಿಯೂ ಸೇರ್ಪಡೆಯಾಗಿರುವುದು ಇಲ್ಲಿನ ಶೈಕ್ಷಣಿಕ ವ್ಯವಸ್ಥೆಗೆ ಕಲಶಪ್ರಾಯವಾಗಿದೆ. ಶೈಕ್ಷಣಿಕವಾಗಿ ಶಾಲಾ ಫಲಿತಾಂಶದಲ್ಲೂ ಎ ಗ್ರೇಡ್ ಗುಣಮಟ್ಟದ ಯಶಸ್ಸನ್ನು ನಿರಂತರವಾಗಿ ಸಾಧಿಸಿ ತೋರಿಸುತ್ತಿರುವುದೂ ಗಮನಾರ್ಹ. ಜೊತೆ ಜೊತೆಗೆ ಕ್ರೀಡೆ, ಸಹಪಠ್ಯ ಚಟುವಟಿಕೆಗಳು, ಉಚಿತ ಕಂಪ್ಯೂಟರ್ ಶಿಕ್ಷಣ, ಇಂಗ್ಲಿಷ್ ಸಂವಹನ ತರಗತಿಗಳು, ಯೋಗ ಮತ್ತು ನೈತಿಕ ಶಿಕ್ಷಣ ಇತ್ಯಾದಿ ಶೈಕ್ಷಣಿಕ ಯೋಜನೆಗಳಿಂದ ರಾಜ್ಯ ಮಟ್ಟದಲ್ಲಿ ಗುರುತಿಸುವ ಸಾಧನೆ ಈ ಶಾಲೆಯದು.
ಈ ಕಲಾ ರಚನೆಯ ಹಿಂದಿನ ಪ್ರೇರಕ ಶಕ್ತಿ ಆಡಳಿತ ಮಂಡಳಿಯವರು ಎನ್ನುತ್ತಾರೆ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ರವರು. ಜೊತೆಗೆ ಹಳೆ ವಿದ್ಯಾರ್ಥಿಗಳು, ಪೋಷಕರು , ಊರಿನ ಸಂಘ ಸಂಸ್ಥೆಗಳವರು ಇದರ ಆಧಾರಶಕ್ತಿಗಳಾಗಿವೆ ಎಂಬುದಾಗಿ ಮುಖ್ಯ ಶಿಕ್ಷಕರು ಸ್ಮರಿಸಿಕೊಳ್ಳುತ್ತಾರೆ.
ಶೈಕ್ಷಣಿಕವಾಗಿ, ಮಾನಸಿಕವಾಗಿ , ಬೌದ್ಧಿಕವಾಗಿ ಬಹಳಷ್ಟು ಧನಾತ್ಮಕ ಪರಿಣಾಮ ಇಲ್ಲಿನ ಕಲಾ ರಚನೆಗಳು ವಿದ್ಯಾರ್ಥಿಗಳ ಮೇಲೆ ಬೀರಲಿರುವುದು ಗುರುತಿಸಬೇಕಾದ ಅಂಶವಾಗಿದೆ. ಮುಕ್ತ ಪ್ರವೇಶ ಮತ್ತು ವೀಕ್ಷಣೆಗೆ ಅವಕಾಶವಿರುವ ಕಲಾ ಗ್ಯಾಲರಿ ಇತರರಿಗೆ ಮಾದರಿಯಾಗಿದೆ ಮತ್ತು ಕೇವಲ ಕಲಾಸಕ್ತರ ಅಲ್ಲ ಎಲ್ಲರ ಗಮನವನ್ನೂ ಸೆಳೆಯುವಂತಿದೆ.
ಸರಕಾರದ ಅನುದಾನಿತ ಖಾಸಗಿ ಶಾಲೆ ಇದಾಗಿದ್ದು ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಈ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರು. ಪ್ರೊ. ಎಸ್ ಪ್ರಭಾಕರ್ ಮತ್ತು ಶ್ರೀ ಡಿ. ಸುರೇಂದ್ರ ಕುಮಾರ್ ರವರು ಉಪಾಧ್ಯಕ್ಷರು. ಶ್ರೀ ಡಿ. ಹರ್ಷೇಂದ್ರ ಕುಮಾರ್ ರವರು ಕಾರ್ಯದರ್ಶಿಗಳಾಗಿದ್ದು, ಡಾ. ಬಿ ಯಶೋವರ್ಮ ರವರು ಕಾರ್ಯದರ್ಶಿಗಳೂ , ಶಾಲಾ ಸಂಚಾಲಕರೂ ಆಗಿದ್ದಾರೆ. ಇವರ ಮಾರ್ಗದರ್ಶನದಲ್ಲಿ, ಬೆಳಾಲಿನ ಪ್ರೌಢಶಾಲೆಯು ತನ್ನದೇ ಆದ ವಿಶೇಷತೆಗಳಿಂದ ಎಲ್ಲರ ಗಮನ ಸೆಳೆಯುತ್ತಿದೆ.