ಮಂಗಳೂರು: ಇತ್ತೀಚೆಗೆ ಮಂಗಳೂರು ಗೌರವ ಡಾಕ್ಟರೇಟ್ ಪಡೆದ ಗಣ್ಯರಾದ ಡಾ. ಯೇನೆಪೋಯ ಅಬ್ದುಲ್ಲಾ ಕುಂಞ, ಡಾ. ಡಿ. ಹೇಮಾವತಿ ಹೆಗ್ಗಡೆ, ಡಾ. ದೇವದಾಸ್ ಕಾಪಿಕಾಡ್, ಡಾ. ಹರಿಕೃಷ್ಣ ಪುನರೂರು ಅವರುಗಳಿಗೆ ನಾಗರಿಕ ಸನ್ಮಾನ ಸಲ್ಲಿಸುವ ಬಗೆಗಿನ ಆಮಂತ್ರಣ ಪತ್ರ ಬಿಡುಗಡೆ ಇಂದು ನಗರದಲ್ಲಿ ನಡೆಯಿತು. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಪೌರ ಸನ್ಮಾನ ಸಮಿತಿ ಸಂಚಾಲಕರಾದ ಐವಾನ್ ಡಿಸೋಜಾ ಮಾತನಾಡಿದರು.
ಗೌರವ ಡಾಕ್ಟರೇಟ್ ಪಡೆದವರು ಈಗಾಗಲೇ ಸಮಾಜದಲ್ಲಿ ಸಾಕಷ್ಟು ಸೇವೆ ಸಲ್ಲಿಸಿದವರು. ಈ ಪೌರ ಸನ್ಮಾನವು ಅವರ ಸೇವೋನ್ನತಿ ಬಲಿಯುತ್ತದೆ. ಅಲ್ಲದೆ ಸನ್ಮಾನ ನಡೆಸಿದ ನಮಗೂ ಗೌರವ ತರುವುದಾಗಿದೆ. ಜೊತೆಗೆ ಇಂತಾ ಸಾಧನೆ ಮಾಡಲು ಇತರರಿಗೂ ಇದು ಸ್ಪೂರ್ತಿ ಆಗಲಿದೆ ಎಂದು ಐವಾನ್ ಡಿಸೋಜಾ ಹೇಳಿದರು.
ಜುಲಾಯಿ 7ನೇ ತಾರೀಕಿನ ಮಧ್ಯಾಹ್ನ 3 ಗಂಟೆಗೆ ಮಂಗಳೂರು ಪುರಭವನದಲ್ಲಿ ಕಾರ್ಯಕ್ರಮ ನಡೆಯುತ್ತದೆ. ಹಿರಿಯ ರಾಜಕಾರಣಿ, ಸಾಹಿತಿ ವೀರಪ್ಪ ಮೊಯ್ಲಿ, ನಿಟ್ಟೆ ವಿದ್ಯಾಲಯಗಳ ವಿನಯ ಹೆಗ್ಡೆ, ಮೇಯರ್ ಪ್ರೇಮಾನಂದ ಶೆಟ್ಟಿ, ಯು. ಟಿ. ಖಾದರ್, ವೇದವ್ಯಾಸ ಕಾಮತ್, ಸಂಸದ ನಳಿನ್ ಕುಮಾರ್ ಕಟೀಲ್ ಅಲ್ಲದೆ ಸಾಕಷ್ಟು ನಾಯಕರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಡಿಸೋಜಾ ತಿಳಿಸಿದರು.
ನಡುವೆ ಅರವಿಂದ ಬೋಳಾರ್ ತಂಡದ ನಗೆಹಬ್ಬ ಇರುತ್ತದೆ. ಅಲ್ಲದೆ ಸಾಕಷ್ಟು ಗಣ್ಯರು ಇದರಲ್ಲಿ ನೆರೆಯುವರು ಎಂದೂ ಅವರು ಹೇಳಿದರು.ನಾಗೇಶ್, ಜನಾರ್ದನ, ದೇವರಾಜ್, ಮಾರ್ಶಲ್ ಮೊಂತೆರೋ, ಪ್ರದೀಪ್ ಕುಮಾರ್ ಕಲ್ಕೂರ ಮೊದಲಾದವರು ಉಪಸ್ಥಿತರಿದ್ದರು.