ಬೆಳ್ತಂಗಡಿ: ಸಾರಿಗೆ ಇಲಾಖೆಯ ಅಟೋ ರಿಕ್ಷಾ ಚಾಲಕರ ಕಲ್ಯಾಣ ಯೋಜನೆಯಡಿ ರೂ. ೧ ಕೋಟಿಯ ಪ್ರಪ್ರಥಮ ಅನುದಾನ ನಮ್ಮ ಕ್ಷೇತ್ರಕ್ಕೆ ಲಭಿಸಿದೆ. ಇನ್ನು ರೂ. ೧ ಕೋಟಿ ಅನುದಾನ ಮುಂದಿನ ೨ ತಿಂಗಳೊಳಗೆ ಬಿಡುಗಡೆಯಾಗಲಿದ್ದು, ತಾಲೂಕಿನಲ್ಲಿ ಒಟ್ಟು ೫೦ ರಿಕ್ಷಾ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಸಾರಿಗೆ ಇಲಾಖೆಯ ಅಟೋ ರಿಕ್ಷಾ ಚಾಲಕರ ಕಲ್ಯಾಣ ಯೋಜನೆಯಡಿ ರೂ. ೫ ಲಕ್ಷ ವೆಚ್ಚದಲ್ಲಿ ಪಡಂಗಡಿಯ ಪೊಯ್ಯಗುಡ್ಡೆಯಲ್ಲಿ ನಿರ್ಮಿಸಲಾದ ಅಟೋ ರಿಕ್ಷಾ ನಿಲ್ದಾಣವನ್ನು ಉದ್ಘಾಟಿಸಿ ಅವರು ಮಾತನಾಡಿ, ಮಹಿಳೆಯರು ರಿಕ್ಷಾ ಚಾಲಕರಾಗಿ ದುಡಿಯಲು ಬಯಸಿದರೆ ನೇತ್ರಾವತಿ ಸಂಜೀವಿನಿ ಒಕ್ಕೂಟದ ಮೂಲಕ ಎಲೆಕ್ಟ್ರಿಕ್ ರಿಕ್ಷಾವನ್ನು ಒದಗಿಸುವ ಕೆಲಸ ಮಾಡುತ್ತೇನೆ. ೨೦೩೦ರ ಹೊತ್ತಿಗೆ ಡಿಸೇಲ್ ಮುಕ್ತ ದೇಶವನ್ನಾಗಿ ಮಾಡುವ ಚಿಂತನೆ ಪ್ರಧಾನಿ ನರೇಂದ್ರ ಮೋದಿಯವರದ್ದು ಎಂದರು.
ಪಡಂಗಡಿ ಗ್ರಾ.ಪಂ. ಅಧ್ಯಕ್ಷೆ ಮೀನಾಕ್ಷಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಕವಿತಾ ಮೋನಿಸ್, ಪಡಂಗಡಿ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಅಂತೋನಿ ಫೆರ್ನಾಂಡಿಸ್, ಉಪಾಧ್ಯಕ್ಷ ನರೇಂದ್ರ ಕುಮಾರ್, ಪಂ. ಕಾರ್ಯದರ್ಶಿ ತಾರನಾಥ, ಪಡಂಗಡಿ ಹಾಲು ಉ.ಸ.ಸಂ.ದ ಅಧ್ಯಕ್ಷ ಮ್ಯಾಕ್ಸಿಂ ಸಿಕ್ವೆರಾ, ಪ್ರಮುಖರಾದ ವಿಶ್ವನಾಥ ಹೊಳ್ಳ, ಅಶೋಕ್ ಗೋವಿಯಸ್, ಶಿವಪ್ಪ ಕುಲಾಲ್ ಹಾಗೂ ಪಂ. ಸದಸ್ಯರು ಉಪಸ್ಥಿತರಿದ್ದರು. ರಿಕ್ಷಾ ಚಾಲಕ-ಮಾಲಕರ ಸಂಘದ ವತಿಯಿಂದ ಶಾಸಕರನ್ನು ಸಮ್ಮಾನಿಸಲಾಯಿತು. ಸಂತೋಷ್ ಕುಮಾರ್ ಜೈನ್ ಪ್ರಸ್ತಾವಿಸಿ, ಅಹ್ಮದ್ ಬಾವ ಸ್ವಾಗತಿಸಿ, ಶಿವಾನಂದ ವಂದಿಸಿದರು.