News Kannada
Monday, September 25 2023
ಮಂಗಳೂರು

ಜಿಲ್ಲಾಧಿಕಾರಿ ನಡಿಗೆ ಹಳ್ಳಿಯ ಕಡೆಗೆ: ಜಿಲ್ಲಾಧಿಕಾರಿ ಮುಂದೆ ಅಹವಾಲುಗಳ ಮಹಾಪೂರ !

BANTWAL 3
Photo Credit : By Author

ಬಂಟ್ವಾಳ: ಜಿಲ್ಲಾಧಿಕಾರಿ ನಡಿಗೆ ಹಳ್ಳಿಯ ಕಡೆಗೆ ಕಾರ್ಯಕ್ರಮದ‌ ಅಂಗವಾಗಿ ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ಮಂಗಳವಾರ ಬಂಟ್ವಾಳಕ್ಕೆ ಭೇಟಿ ನೀಡಿ ಬಿ.ಸಿ.ರೋಡಿನ ತಾಲೂಕು ಆಡಳಿತ ಸೌಧದಲ್ಲಿ ಸಾರ್ವಜನಿಕರಿಂದ‌ ಅಹವಾಲು ಸ್ವೀಕರಿಸಿದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಮುಂದೆ ಅಹವಾಲುಗಳ ಮಹಾಪೂರವೇ ಬಂತು.

ಬಿ.ಸಿ.ರೋಡು- ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಜಮೀನು ನೀಡಿದರೂ ಸೂಕ್ತ ಪರಿಹಾರ ಧನ ಪ್ರಾಪ್ತಿಯಾಗಿಲ್ಲ ಎಂದು ಸಂತ್ರಸ್ತ ಭೂ ಮಾಲಕರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದರು.‌ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಂಡರೂ ಇನ್ನೂ ಅನೇಕ ಮಂದಿ ಭೂಮಾಲಿಕರಿಗೆ ಪರಿಹಾರ ಮೊತ್ತ ಪಾವತಿಯಾಗದೆ ಇರುವುದು ಗಮನಕ್ಕೆ ಬಂದಿದೆ. ಪರಿಹಾರ ಸಿಗುವ ನಿಟ್ಟಿನಲ್ಲಿ ವಿಶೇಷ ಪ್ರಯತ್ನ ನಡೆಸುವುದಾಗಿ ಡಿಸಿ ಭರವಸೆ ನೀಡಿದರು.

ಅಜಿಲಮೊಗರು ಕಡೇಶಿವಾಲಯ ಮಧ್ಯೆ ನೇತ್ರಾವತಿ ನದಿಗೆ ನಿರ್ಮಾಣಗೊಳ್ಳುತ್ತುರುವ ಸೌಹಾರ್ದ ಸೇತುವೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವ ಬಗ್ಗೆ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಅವರ ನೇತೃತ್ವದ ನಿಯೋಗ ಜಿಲ್ಲಾಧಿಕಾರಿಯವರ ಗಮನ ಸೆಳೆದರು.

ಶಂಭೂರಿನ ಎಎಂಆರ್ ಡ್ಯಾಂನಲ್ಲಿ ನೀರು ನಿಲುಗಡೆ ಮಾಡುತ್ತಿರುವುದರಿಂದ ಈ ಭಾಗದ ಕೃಷಿಕರು ತೊಂದರೆ ಅನುಭವಿಸುತ್ತಿದ್ದಾರೆ. ಸ್ಥಳೀಯ ತೋಟಗಳಲ್ಲಿ ನೀರು ನಿಂತು ಕೊಳೆರೋಗ ಬಾಧಿಸುತ್ತಿದೆ. ಆದ್ದರಿಂದ ಸಂತ್ತಸ್ತ ರೈತರಿಗೆ ಸೂಕ್ತ ಪರಿಹಾರ ನೀಡುವಂತೆಯೂ ಅವರು ಒತ್ತಾಯಿಸಿದರು.

ದೈವಸ್ಥಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪೂರ್ಣಕಾಲಿಕ ವೈದ್ಯಾಧಿಕಾರಿಯನ್ನು ನೇಮಿಸಬೇಕು  ಎಂದು ಅವರು ಜಿಲ್ಲಾಧಿಕಾರಿಯವರನ್ನು ಆಗ್ರಹಿಸಿದರು.

ಮಣಿನಾಲ್ಕೂರು ಸರಪಾಡಿಗೆ ಒಬ್ಬರೇ ವಿ.ಎ ಇದ್ದು ಜನರಿಗೆ ತೊಂದರೆ ಆಗುತ್ತಿರುವ ಬಗ್ಗೆ ಗ್ರಾಮಸ್ಥರೊಬ್ಬರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದರು. ಜಿಲ್ಲೆಯಲ್ಲಿ 90 ಗ್ರಾಮ ಲೆಕ್ಕಿಗರು ಬೇಕಾಗಿದ್ದು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದೇವೆ ಎಂದು ಡಿ.ಸಿ.ಡಾ.ರಾಜೇಂದ್ರ ಅವರು ಹೇಳಿದರು.

ದೋಣಿ ಹಾಗೂ ಮರಳು ಕಾಣೆ: 
ಕೆಲದಿನಗಳ ಹಿಂದೆ ಅಕ್ರಮ ಮರಳುಗಾರಿಕೆಗೆ ಗಣಿ ಇಲಾಖೆ ದಾಳಿ ನಡೆಸಿ  ಮುಟ್ಟುಗೋಲು ಹಾಕಿ ಪಂಚಾಯತ್ ವಶಕ್ಕೆ ಒಪ್ಪಿಸಿದ್ದ ದೋಣಿ ಹಾಗೂ ಮರಳನ್ನು ಯಾರೋ ಕದ್ದೊಯ್ದಿದ್ದು, ಅಪರಾಧಿಗಳನ್ನು ಪತ್ತೆ ಹಚ್ಚುವ ಕಾರ್ಯ ಅಗಿಲ್ಲ ಎಂದು ಮಣಿನಾಲ್ಕೂರು ಗ್ರಾಪಂ.ಅಧ್ಯಕ್ಷೆ ನಾಗವೇಣಿ ನೇತೃತ್ವದಲ್ಲಿ ಪಂಚಾಯತ್ ಸದಸ್ಯರು ಡಿ.ಸಿ.ಅವರಿಗೆ ದೂರು ಸಲ್ಲಿಸಿತು.
ದೈವಸ್ಥಳ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಮತ್ತು ಸಹಾಯಕರಿಲ್ಲದೇ ಮುಚ್ಚುವ ಹಂತದಲ್ಲಿದ್ದು,ಗ್ರಾಮಸ್ಥರ ಹಿತದೃಷ್ಠಿಯಿಂದ ಸಿಬ್ಬಂದಿಗಳು, ಆರೋಗ್ಯ ಕಾರ್ಯಕರ್ತೆಯರ ನೇಮಿಸುವಂತೆಯು ನಿಯೋಗ  ಒತ್ತಾಯಿಸಿತು. ಇದನ್ನು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರಲಾಗುವುದು ಎಂದು ಡಿ.ಸಿ. ಪ್ರತಿಕ್ರಿಯಿಸಿದರು.
ಅಲ್ಲಿ ಪಾದೆಯಲ್ಲಿ ನೆರಳು ನೀಡುತ್ತಿದ್ದ ಮರಗಳನ್ನು ಕಡಿದು ಹಾಕಿರುವ ಬಗ್ಗೆ ವಿಶ್ವನಾಥ ಚಂಡ್ತಿಮಾರ್ ನೇತೃತ್ವದ ರಿಕ್ಷಾ ಚಾಲಕರ ನಿಯೋಗ ದೂರು ಸಲ್ಲಿಸಿತು.
ನೀರಾ ಘಟಕ   ಪುನರಾರಂಭಿಸಿ:
ತುಂಬೆಯಲ್ಲಿರುವ ನೀರಾ ಘಟಕ ಮುಚ್ಚಿರುವುದರಿಂದ ಅಲ್ಲಿನ ಯಂತ್ರೋಪಕರಣಗಳು ತುಕ್ಕು ಹಿಡಿದು ಲಕ್ಷಾಂತರ ರೂ.ನಷ್ಟವಾಗುತ್ತಿದೆ.ಅದೇರೀತಿ 9/11 ನಿಂದಾಗಿ ಜನರು ತೊಂದರೆ ಅನುಭವಿಸುವಂತಾಗಿದೆ ಎಂದು ಮಾಜಿ ಜಿಪಂ ಸದಸ್ಯ ತುಂಗಪ್ಪ ಬಂಗೇರ ಜಿಲ್ಲಾಧಿಕಾರಿಯವರ ಗಮನ ಸೆಳೆದರು.
ನೀರಾ ಘಟಕಕ್ಕೆ ಖುದ್ದು ಪರಿಶೀಲಿಸುವ ಭರವಸೆಯನ್ನು ನೀಡಿದರು.ತೋಟಗಾರಿಕಾ ಅಧಿಕಾರಿ ಪೂರಕ ಮಾಹಿತಿ ನೀಡಿದರು. ತಾಲೂಕುಆಡಳಿತ ಸೌಧದಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಾಹಿತಿ ಕೇಂದ್ರ ಸ್ಥಾಪಿಸುವಂತೆ ಮಾಜಿ ತಾಪಂ ಸದಸ್ಯ ಸೋಮಪ್ಪ ಕೋಟ್ಯಾನ್ ಡಿ.ಸಿ.ಯವರ ಗಮನಕ್ಕೆ ತಂದರು.ಈ ಬಗ್ಗೆ ಕ್ರಮಕ್ಕೆ ತಹಶೀಲ್ದಾರ್ ಅವರಿಗೆ ಸೂಚಿಸಿದರು.

ಸಜೀಪಮುನ್ನೂರು ಗ್ರಾಮದ ಶಾರದ ನಗರದಲ್ಲಿ ಹಿಂದೂ ರುದ್ರಭೂಮಿಗೆ ಮಂಜೂರಾದ ಜಮೀನಿನಲ್ಲಿ ತಕ್ಷಣ ಸ್ಮಶಾನ ನಿರ್ಮಿಸಬೇಕು, ನರಿಕೊಂಬು ಗ್ರಾಮದ ನಾಯಿಲ ಪ್ರದೇಶದ ರೈತರು ರಾಜ ಕಾಲುವೆ  ಒತ್ತುವರಿಯನ್ನು ತೆರವುಗೊಳಿಸುವುದಲ್ಲದೆ ತೋಡಿನ ಹೂಳೆತ್ತಿ ರೈತರಿಗಾಗುವ ನಷ್ಟವನ್ನು ಪರಿಹರಿಸಬೇಕು ಹಾಗೂ ತುಂಬೆ ಡ್ಯಾಂ ಸಂತ್ರಸ್ತ ರೈತರಿಗೆ ವರತೆ ಪ್ರದೇಶಕ್ಕೆ ಪರಿಹಾರ ದೊರಕದಿರುವ ಬಗ್ಗೆ  ಬಂಟ್ವಾಳ ತಾಲೂಕು ರೈತ ಸಂಘದ ಅಧ್ಯಕ್ಷ ಎಂ ಸುಬ್ರಹ್ಮಣ್ಯ ಭಟ್ ಅವರು ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ರಾಜೇಂದ್ರ ಅವರು ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕೃಷಿ ಇಲಾಖೆಯ ಮೂಲಕ ವರತೆ ಪ್ರದೇಶ ಗುರುತಿಸಿ  ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

See also  ಬೆಳ್ತಂಗಡಿ: ಭೀಕರ ಅಪಘಾತ- ಯುವಕರಿಬ್ಬರ ದಾರಣ ಸಾವು

ಪಿಂಕ್ ಟಾಯ್ಲೆಟ್ ;ಡಿ.ಸಿ.ಗರಂ
ಬಿ.ಸಿ.ರೋಡಿನ ತಾಲೂಕು ಆಡಳಿತ ಸೌಧದ ಗೇಟ್ ಗೆ ತಾಗಿಕೊಂಡೆ ಪುರಸಭೆ ಪಿಂಕ್ ಟಾಯ್ಲೆಟ್ ನಿರ್ಮಿಸುತ್ತಿರುವ ಬಗ್ಗೆ ಆರಂಭದಲ್ಲೇ ಗರಂ ಆದ ಜಿಲ್ಲಾಧಿಕಾರಿಯವರು ಪುರಸಭಾ ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ ಅವರನ್ನು ತರಾಟೆಗೆ ತೆಗೆದುಕೊಂಡರು.

ಈ ಸ್ಥಳದಲ್ಲಿ ಶೌಚಾಲಯ ನಿರ್ಮಿಸಿದರೆ ಮಹಿಳೆಯರು ಹೋಗಲು ಸಾಧ್ಯವೇ? ಬೇರೆ ಸೂಕ್ತ ಸ್ಥಳ ಗುರುತಿಸಿ ಶೌಚಾಲಯ ನಿರ್ಮಿಸುವಂತೆ ಸೂಚಿಸಿದರು.
ಮಿನಿವಿಧಾನಸೌಧ ನಿರ್ಮಾಣದ ವೇಳೆ ತಾತ್ಕಾಲಿಕ ನೆಲೆಯಲ್ಲಿ‌ನಿರ್ಮಿಸಿದ್ದ ತಾಲೂಕು ಕಚೇರಿಯನ್ನು ತೆರವುಗೊಳಿಸಿ,ಪೇಯ್ಡ್ ಪಾರ್ಕಿಂಗ್ ಅಥವಾ ಪಿಂಕ್ ಟಾಯ್ಲೆಟ್ ನಿರ್ಮಿಸಬಹುದೆಂಬ ಸಲಹೆಯು ಕೇಳಿ ಬಂತು.ಜಿಲ್ಲಾಧಿಕಾರಿ ತೆರಳುವ ಸಂದರ್ಭ ತಾತ್ಕಾಲಿಕ ತಾಲೂಕು ಕಚೇರಿ ಕಟ್ಟಡ ಮತ್ತು ನಿರ್ಮಾಣಹಂತದಲ್ಲಿದ್ದ ಪಿಂಕ್ ಶೌಚಾಲಯವನ್ನು ಪರಿಶೀಲಿಸಿದರು.
ಸಹಾಯಕ ಕಮಿಷನರ್ ಮದನ್ ಮೋಹನ್ ,ತಹಶೀಲ್ದಾರ್ ಡಾ.ಸ್ಮಿತಾ ರಾಮು ಹಾಗೂ ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು