ದಕ್ಷಿಣ ಕನ್ನಡ: ಪಾನಿಪೂರಿ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಒಂದೊಮ್ಮೆ ಉತ್ತರ ಭಾರತದ ಪ್ರಸಿದ್ಧ ತಿನಸು ಎಂದೆಣಿಸಿದ್ದ ಪಾನಿಪೂರಿ ತಿನಸು ಇಂದು ದೇಶದೆಲ್ಲೆಡೆ ಬೇಡಿಕೆಯನ್ನು ಕುದುರಿಸಿಕೊಂಡಿದೆ. ರಾಜ್ಯದ ಕರಾವಳಿ ಭಾಗದಲ್ಲೂ ಇದರ ಪ್ರಭಾವ ಜೋರಾಗೇ ಇದೆ. ಯುವ ಜನನಾಂಗಕ್ಕೆ ಪಾನಿಪೂರಿ ಅಂದರೆ ಅಚ್ಚುಮೆಚ್ಚು. ಆದರೆ, ಬೇಡಿಕೆಗೆ ಅನುಗುಣವಾಗಿ ಪೂರಿ ಪೂರೈಕೆ ಆಗದಿದ್ದರೆ ಪಾನಿಪೂರಿ ಪ್ರಿಯರು ನಿರಾಶರಾಗುವುದು ಖಚಿತ.
ಇದನ್ನರಿತ ಬಸ್ಸು ಚಾಲಕರೋರ್ವರ ತನ್ನ ಉದ್ಯೋಗಕ್ಕೆ ತಿಲಾಂಜಲಿಯನ್ನಿತ್ತು ಪಾನಿಪೂರಿ ತಯಾರಿಕಾ ಘಟಕವನ್ನು ಆರಂಭಿಸಿ ಇದೀಗ ಯಶಸ್ಸಿನ ಹಾದಿಯಲ್ಲಿ ಮುನ್ನೆಡೆಯುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ದಾರಂದಕುಕ್ಕು ನಿವಾಸಿ, ಬಸ್ ಚಾಲಕರಾಗಿ ದುಡಿಯುತ್ತಿದ್ದ ಮನೋಜ್ ಇದೀಗ ಯಶಸ್ವೀ ಪಾನಿಪೂರಿ ಉದ್ಯಮಿ. ಜಿಲ್ಲೆಯಾದ್ಯಂತ ವಿವಿಧ ಭಾಗಗಳಲ್ಲಿ ಪಾನಿಪೂರಿ ತಯಾರಿಕಾ ಘಟಕಗಳನ್ನು ಸ್ಥಾಪಿಸಿರುವ ಮನೋಜ್ ಪಾನಿಪೂರಿಯಿಂದಲೇ ಉತ್ತಮ ಲಾಭ ಗಳಿಸುತ್ತಿದ್ದಾರೆ. ಜತೆಗೆ, ಪಾನಿಪೂರಿ ಪ್ರಿಯರಿಗೆ ನಿರಾಸೆಯಾಗದಂತೆ ವ್ಯವಹಾರ ನಡೆಸಲಾಗುತ್ತಿದೆ.
ಪುತ್ತೂರಿನ ದಾರಂದಕುಕ್ಕು ಎಂಬಲ್ಲಿ ಕಳೆದ 4 ವರ್ಷಗಳಿಂದ ಮಧ್ಯಮ ಕುಟುಂಬ, ಈ ಕುಟುಂಬದ ಹಿರಿಯರಾದ ಮೋಹಿನಿ ಅವರ ನೇತೃತ್ವದಲ್ಲಿ ಪುತ್ರ ಮನೋಜ್ ಜೀವನೋಪಾಯಕ್ಕಾಗಿ ಪಾನಿಪೂರಿ ತಯಾರಿಕಾ ಕಿರು ಘಟಕವನ್ನು ನಡೆಸಿಕೊಂಡು ಬರುತ್ತಿದೆ.
ಮನೋಜ್ ಮಂಗಳೂರಿನಲ್ಲಿ ಸಿಟಿ ಬಸ್ಸು ಚಾಲಕನಾಗಿದ್ದುಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು. ಸುಮಾರು 5 ವರ್ಷಗಳ ಕಾಲ ಚಾಲಕನಾಗಿ ದುಡಿದು ಕಾರಣಾಂತರಗಳಿಂದ ತನ್ನ ಹುಟ್ಟೂರಾದ ಪುತ್ತೂರಿನ ದಾರಂದಕುಕ್ಕು ಮನೆಗೆ ಮರಳಿ ಅವರು ರಿಕ್ಷಾವೊಂದರಲ್ಲಿ ಚಾಲಕನಾಗಿ ದುಡಿಯಲಾರಂಭಿಸಿದರು. ಈ ಸಂದರ್ಭ ಅವರು ಪಾನಿಪೂರಿಗೆ ಹೆಚ್ಚಿನ ಬೇಡಿಕೆ ಇರುವುದನ್ನು ಕಂಡುಕೊಂಡರು. ರಿಕ್ಷಾ ಚಾಲಕನಾಗಿ ಇದ್ದುಕೊಂಡೇ ದಿನಕ್ಕೆ ಮೂರ್ನಾಲ್ಕು ಕೆ.ಜಿ. ಪೂರಿಯನ್ನು ಕೈಯಲ್ಲೇ ತಯಾರಿಸಿ ಮಾರುಕಟ್ಟೆಗೆ ಒದಗಿಸುತ್ತಿದ್ದರು.
ಮನೋಜ್ ಸುಮಾರು ಎರಡೂವರೆ ವರ್ಷಗಳ ಹಿಂದೆ ಪಾನಿಪೂರಿ ತಯಾರಿಕಾ ಯಂತ್ರವನ್ನು ಖರೀದಿಸಿದರು. ಸುಮಾರು 25 ಸೆಂಟ್ಸದ ನಲ್ಲಿರುವ ತನ್ನ ಪುಟ್ಟ ನಿವೇಶದಲ್ಲಿ ಮನೆ ಸಮೀಪವೇ ಶೆಡ್ ಒಂದರಲ್ಲಿ ಪಾನಿಪೂರಿ ತಯಾರಿಸಲು ಆರಂಭಿಸಿದರು. ರಿಕ್ಷಾ ಚಾಲಕ ಉದ್ಯೋಗವನ್ನು ತೊರೆದು ಪೂರಿ ತಯಾರಿಕೆಯ ಪೂರ್ಣಕಾಲಿಕ ವ್ಯವಹಾರ ನಡೆಸಲು ಆರಂಭಿಸಿದರು. ದಿನಕ್ಕೆ ಸುಮಾರು 40 ಕೆ.ಜಿ.ಯಷ್ಟು ಪೂರಿ ತಯಾರಿಸಲು ಆರಂಭಿಸಿ ತನ್ನ ಉತ್ಪನ್ನಗಳಿಗೆ ಪುತ್ತೂರು, ಸುಳ್ಯ, ಸುಬ್ರಹ್ಮಣ್ಯ, ಕಡಬ ಮುಂತಾದ ಕಡೆಗಳಲ್ಲಿ ಉತ್ತಮ ಮಾರುಕಟ್ಟೆಯನ್ನು ಕಂಡುಕೊಂಡರು.
ಇದೀಗ ಅವರು ಪ್ರತೀದಿನ ಸುಮಾರು 70 ಕೆ.ಜಿ.ಯಷ್ಟು ಪೂರಿ ತಯಾರಿಕೆ ಮಾಡುತ್ತಿದ್ದು, ಜೀವನದಲ್ಲಿ ಹೊಸ ಬೆಳಕನ್ನು ಕಂಡುಕೊಂಡಿದ್ದಾರೆ. ಮನೋಜ್ ಅವರ ಕಿರು ಉದ್ದಿಮೆಗೆ ಕೈಜೋಡಿಸಿದವರು ಅವರ ಕೈಹಿಡಿದ ಪತ್ನಿ ಧನ್ಯಾ ಮತ್ತು ತಾಯಿ ಮೋಹಿನಿ.
ಸೌರಚಾಲಿತ ಪಾನಿ ಪೂರಿ ಮಾಡುವ ಯಂತ್ರವನ್ನು ಅಳವಡಿಸಲು ಸೆಲ್ಕೋ ವತಿಯಿಂದ ನೆರವನ್ನು ಒದಗಿಸಲಾಗಿದೆ. ಪೂರಿ ತಯಾರಿಕಾ ಯಂತ್ರದ ಒಟ್ಟು ಮೊತ್ತ ರೂ.3 ಲಕ್ಷ ಆಗಿದ್ದು, ಇದಕ್ಕೆ ರೂ.70 ಸಾವಿರ ಅನುದಾನ ಸೆಲ್ಕೋ ಫೌಂಡೇಶನ್ ವತಿಯಿಂದ ದೊರೆತಿದೆ. ಉಳಿದ ಮೊತ್ತವನ್ನು ಬ್ಯಾಂಕ್ ಸಾಲ ಸಹಾಯದಿಂದ ಹೊಂದಿಸಲಾಗಿದೆ. ಸೌರಚಾಲಿತ ಪಾನಿಪುರಿ ಮಾಡುವ ಯಂತ್ರವಲ್ಲದೆ, ಅವರು ಪಾನಿಪೂರಿ ತಯಾರು ಮಾಡುವ ಕೊಠಡಿಯನ್ನು ಕೂಡ ಸೆಲ್ಕೋ ಫೌಂಡೇಶನ್ನ ವತಿಯಿಂದ ರೂ.5.50 ಲಕ್ಷ ಮೊತ್ತದ ಸಂಪೂರ್ಣ ಅನುದಾನದೊಂದಿಗೆ ನವೀಕರಿಸಲಾಗಿದೆ. ಸೆಲ್ಕೋದ ಈ ಸಹಾಯಗಳಿಂದ ಅವರ ಆದಾಯವೂ ಹೆಚ್ಚಿದೆ ಹಾಗೂ ಇದರಿಂದಾಗಿ ಇನ್ನೂ 5 ಜನರಿಗೆ ಉದ್ಯೋಗವೂ ದೊರಕಿದೆ.