News Kannada
Saturday, September 23 2023
ಮಂಗಳೂರು

ಮಂಗಳೂರು: ಆ.5ರೊಳಗೆ ಪ್ರವೀಣ್‌ ನೆಟ್ಟಾರ್‌ ಕೊಲೆ ಆರೋಪಿಗಳ ಬಂಧಿಸದಿದ್ದರೆ ಸತ್ಯಾಗ್ರಹ

If praveen nettar murder accused are not arrested by August 5, satyagraha
Photo Credit : News Kannada

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಮಸೂದ್, ಪ್ರವೀಣ್ ನೆಟ್ಟಾರ್ ಮತ್ತು ಫಾಝಿಲ್ ಕೊಲೆಯ ನೈಜ ಆರೋಪಿಗಳನ್ನು ಆ.5ರೊಳಗೆ ಬಂಧಿಸಬೇಕು. ಅದರಲ್ಲಿ ಯಶಸ್ಸು ಕಾಣದಿದ್ದಲ್ಲಿ ಆ.6ರಂದು ಮಂಗಳೂರಿನಲ್ಲಿ ಸತ್ಯಾಗ್ರಹ ನಡೆಸಲಾಗುವುದು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಮೃತ ಮೂವರ ಮನೆಗೂ ತೆರಳಿ, ಸಾಂತ್ವನ ಹೇಳಿ, ಆರ್ಥಿಕ ನೆರವು ವಿತರಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಆರೋಪಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿ ನಡೆಸುವ ಸತ್ಯಾಗ್ರಹಕ್ಕೆ ಬಜರಂಗ ದಳ ಸೇರಿದಂತೆ ಯಾವುದೇ ಪಕ್ಷ, ಸಂಘಟನೆ ಕಾರ್ಯಕರ್ತರು, ವ್ಯಾಪಾರಿಗಳು ಭಾಗವಹಿಸಬಹುದು ಎಂದರು.

ಕರಾವಳಿಯಲ್ಲಿ ಈ ಕೊಲೆಗಳೇ ಮೊದಲಲ್ಲ. 15 ವರ್ಷಗಳಿಂದ ಎರಡು ರಾಜಕೀಯ ಪಕ್ಷಗಳು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಯುವಕರನ್ನು ಹಿಂದುತ್ವ, ಮತ್ತೊಂದರ ಹೆಸರಿನಲ್ಲಿ ತಲೆಕೆಡಿಸಿ, ಬಲಿ ನೀಡುತ್ತಿವೆ. ಹಿಂದು- ಮುಸ್ಲಿಮರ ಮಧ್ಯೆ ಕಂದಕ ಸೃಷ್ಟಿಸಿ, ರಾಜಕೀಯ ಲಾಭ ಪಡೆಯುತ್ತಿವೆ. ಚುನಾವಣೆ ಬಂದಾಗ ನಡೆಯುವ ಕೊಲೆಗಳಿಂದ ರಾಜಕೀಯದ ಫಸಲು ಪಡೆಯುವ ಪ್ರಯತ್ನ ನಡೆಸುತ್ತಿವೆ ಎಂದರು.

ಹತ್ಯೆ ನಡೆದಿರುವ ಮೂರು ಮನೆಗಳಿಗೆ ಭೇಟಿ ನೀಡಿದಾಗಲೂ, ನಮ್ಮ ಹುಡುಗರನ್ನು ಕೊಂದವರಿಗೆ ಎನ್‍ಕೌಂಟರ್, ಗಲ್ಲುನಂಥ ಕಠಿಣ ಶಿಕ್ಷೆ ವಿಧಿಸಲು ಭಾವೋದ್ರೇಕದಿಂದ ಆಗ್ರಹಿಸಿದರು. ಪ್ರವೀಣ್‍ರ ತಂದೆ- ತಾಯಿ, ಪತ್ನಿ, ಸಹೋದರಿಯರು ನೋವಿನ ಮಡಿಲಲ್ಲಿದ್ದಾರೆ. ಪ್ರವೀಣ್ ಹತ್ಯೆ ನಡೆಯುವ ತನಕ ಮಸೂದ್ ಕೊಲೆ ಬಗ್ಗೆ ಹೊರಗೆ ಗೊತ್ತೇ ಇರಲಿಲ್ಲ. ಫಾಝಿಲ್ ತಂದೆಯಂತೂ ನಮಗೆ ಹಣ ಬೇಡವೇ ಬೇಡ. ದುಡಿದು ತಿನ್ನುತ್ತೇವೆ. ನನ್ನ ಅಮಾಯಕ ಮಗನ ಕೊಂದವರಿಗೆ ಶಿಕ್ಷೆ ಕೊಡಿಸಿ ಎಂದು ಅತ್ತುಕೊಂಡರು. ಅವರನ್ನು ಸಂತೈಸಲು 15 ನಿಮಿಷ ಬೇಕಾಯಿತು ಎಂದು ಕುಮಾರಸ್ವಾಮಿ ಭಾವುಕರಾಗಿ ನುಡಿದರು.

ಸಿಎಂ ನಿರೀಕ್ಷೆ ಹುಸಿ: ಎರಡು ಹತ್ಯೆ ನಡೆದಾಗ ಸಿಎಂ ಬಂದಿದ್ದು, ಅವರು ಎರಡು ಸಮುದಾಯಗಳ ಮಧ್ಯೆ ಸಾಮರಸ್ಯದ ಸಂದೇಶ ನೀಡಿ ಹೋಗಬಹುದೆಂದು ಭಾವಿಸಿದ್ದೆ. ಆದರೆ, ಅವರು ಒಂದು ಮನೆಗೆ ಮಾತ್ರ ಹೋಗಿ ನಮ್ಮ ನಿರೀಕ್ಷೆ ಹುಸಿ ಮಾಡಿದರು. ಪರಿಹಾರ ಬಿಡಿ, ಸಾಂತ್ವನದ ಮಾತನ್ನೂ ಆಡಿಲ್ಲ. ಅವರು ಇಲ್ಲಿರುವಾಗಲೇ ಫಾಝಿಲ್ ಹತ್ಯೆ ನಡೆದಿದ್ದು, ಆ ಬಗ್ಗೆಯೂ ಚಕಾರವೆತ್ತಿಲ್ಲ ಎಂದಾದರೆ, ನೀವು ಯಾರನ್ನು ಮೆಚ್ಚಿಸಲು ಸಿಎಂ ಆಗಿದ್ದೀರಿ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ತಮ್ಮ ಪಕ್ಷದ ಕಾರ್ಯಕರ್ತರನ್ನು ತನಿಖೆಗೆ ಕರೆದರೆ ಠಾಣೆ ಮುಂದೆ ಧರಣಿ ನಡೆಸುವುದಾಗಿ ಹೇಳಿದ ಆಡಳಿತ ಪಕ್ಷದ ಶಾಸಕರೊಬ್ಬರ ಹೇಳಿಕೆ ಗಮನಿಸಿದೆ. ಹೀಗೆ ಹೇಳಿದರೆ ಯಾವ ಇನ್‍ಸ್ಪೆಕ್ಟರ್ ನಿಷ್ಪಕ್ಷ ತನಿಖೆ ನಡೆಸುವ ಧೈರ್ಯ ಮಾಡಬಲ್ಲ. ಬಡವರ ಮಕ್ಕಳ ನರಮೇಧ ಮಾಡಲು ನೀವು ಓಟು ಪಡೆದು ಗೆದ್ದಿದ್ದೀರಾ ಎಂದು ಎಚ್‍ಡಿಕೆ ಟೀಕಿಸಿದರು

ಕೋಮು ಸೂಕ್ಷ್ಮ ಪ್ರದೇಶದಲ್ಲಿ ಹತ್ಯೆ ನಡೆದ ತಕ್ಷಣ ಪೊಲೀಸ್ ಮಹಾ ನಿರ್ದೇಶಕರು ಬರಬೇಕಿತ್ತು. ಅವರಿಗೆ ಬೆಂಗಳೂರಿನಲ್ಲಿ ವರ್ಗಾವಣೆ ಧಂದೆ ಬಿಟ್ಟರೆ ಬೇರಾವ ಘನಂದಾರಿ ಕೆಲಸವಿದೆ. ನೀವು ಸಿಎಂಗಿಂತಲೂ ದೊಡ್ಡವರಾ? ಮೂರು ಕುಟುಂಬಗಳನ್ನು ಭೇಟಿ ಮಾಡಿ, ಧೈರ್ಯ ಕೊಡುವ ಬದಲು ವಾರದ ಬಳಿಕ ಬಂದು ಕೇವಲ ಒಂದು ಗಂಟೆಯಲ್ಲಿ ಅದ್ಯಾವ ಮೀಟಿಂಗ್ ಮಾಡಿ ಹೋದಿರಿ? ಆರೆಸ್ಸೆಸ್‍ಗೆ ಸಂದೇಶ ಕೊಡಲು ಬಂದಿದ್ದೀರಾ ಎಂದು ಖಾರವಾಗಿ ತರಾಟೆಗೆ ತೆಗೆದುಕೊಂಡರು.

See also  ನವದೆಹಲಿ: ಇಂದು ಜಮ್ಮುವಿಗೆ ಭೇಟಿ ನೀಡಲಿರುವ ರಾಜನಾಥ್ ಸಿಂಗ್

ಕರಾವಳಿಯಲ್ಲಿ ಜೆಡಿಎಸ್‍ಗೆ ಓಟು ಬಿಡಿ, ಅಭ್ಯರ್ಥಿಗಳೇ ಇಲ್ಲ. ಜನತಾ ಪಕ್ಷ ಇದ್ದಾಗಲೂ ನಮಗೆ ಇಲ್ಲಿ ಶಕ್ತಿ ಇರಲಿಲ್ಲ. ಹಾಗಾಗಿ ನಾನು ರಾಜಕೀಯ ಲಾಭ ಪಡೆಯಲು ಬಂದಿಲ್ಲ. ಇಲ್ಲಿಯ ಜನ ಯಾವ ಪಕ್ಷಕ್ಕೆ ಬೇಕಾದರೂ ಮತ ಹಾಕಲಿ. ಆದರೆ, ಇಲ್ಲಿ ಗೆದ್ದಿರುವ ರಾಜಕೀಯ ಪಕ್ಷಗಳಿಗೆ ಇಲ್ಲಿಯ ಜನರು, ಯುವಕರ ಉದ್ಯೋಗ, ಹೂಡಿಕೆ ಬಗ್ಗೆ ಕಾಳಜಿ ಇರಲಿ ಎಂದು ಅವರು ಮನವಿ ಮಾಡಿದರು.

ತಮ್ಮದೇ ಪಕ್ಷದ ಕಾರ್ಯಕರ್ತರ ಧೋರಣೆ ಬಗ್ಗೆ ಈಶ್ವರಪ್ಪ ಮತ್ತು ಸಿದ್ದೇಶ್ ಅವರ ಮಾತಿನಿಂದ ಕೇಳಿದ್ದೇವೆ. ಸಂಸದರು, ಸಚಿವರ ಕಾರು ತಡೆದು ಘೇರಾವ್ ಹಾಕುವ ಮೂಲಕ ಬಿಜೆಪಿ ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಹನೆಯ ಕಟ್ಟೆಯೊಡೆಯುವ ಮೊದಲು ಎಚ್ಚೆತ್ತುಕೊಳ್ಳಲಿ. ರಾಜಕೀಯ ಲಾಭಕ್ಕಾಗಿ ಹಿಂದುಳಿದ ಯುವಕರನ್ನು ಬಲಿಕೊಡುವ ಚಾಳಿ ನಿಲ್ಲಿಸಲಿ ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ವಿಧಾನ ಪರಿಷತ್ ಶಾಸಕರಾದ ಬೋಜೇಗೌಡ, ಬಿ.ಎಂ.ಫಾರೂಕ್, ಮುಖಂಡರಾದ ಎಂ.ಬಿ.ಸದಾಶಿವ, ಜಾಕೆ ಮಾಧವ ಗೌಡ, ಮಹಮ್ಮದ್ ಕುಂಞ, ಸುಶೀಲ್ ನೊರೊನ್ಹ, ವಸಂತ ಪೂಜಾರಿ, ಮುನೀರ್, ಧನ್‍ರಾಜ್, ನಝೀರ್ ಉಳ್ಳಾಲ್, ಯೋಗೀಶ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು