ಮಂಗಳೂರು: ಮೀನಿನ ಸಂತಾನೋತ್ಪತ್ತಿ ಹಿನ್ನೆಲೆಯಲ್ಲಿ ಮಳೆಗಾಲದ ಎರಡು ತಿಂಗಳ ನಿಷೇಧದ ಬಳಿಕ ರಾಜ್ಯದ ಕರಾವಳಿಯಲ್ಲಿ ಮೀನುಗಾರಿಕೆ ಋತು ಆ.1ರಿಂದ (ಸೋಮವಾರ) ಆರಂಭಗೊಂಡಿದೆ.
ಲಂಗರು ಹಾಕಿ ದಡ ಸೇರಿದ್ದ ಆಳಸಮುದ್ರ ಮೀನುಗಾರಿಕೆಗೆ ತೆರಳುವ ಬೋಟ್‌ಗಳು ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ಹೊಸ ಮೀನುಗಾರಿಕಾ ಋತು ಆರಂಭವಾಗಿದೆ, ವಾತಾವರಣದಲ್ಲಿನ ಪರಿಸ್ಥಿತಿ ಅವಲೋಕಿಸಿಕೊಂಡು ಸಮುದ್ರಕ್ಕಿಳಿಯುವ ಬಗ್ಗೆ ಮೀನುಗಾರರರು ನಿರ್ಧರಿಸಿದ್ದರು.
ಭಾನುವಾರವೇ ಐಸ್‌ಪ್ಲಾಂಟ್‌ಗಳು ತೆರೆದುಕೊಂಡಿದ್ದು, ಮೀನುಗಾರರು ಕಳೆದ ತಿಂಗಳಲ್ಲೇ ಬೋಟ್, ಎಂಜಿನ್, ಬಲೆಗಳ ದುರಸ್ತಿ ಮಾಡಿಕೊಂಡಿದ್ದಾರೆ. ಮೀನುಗಾರಿಕೆಗೆ ತೆರಳುವ ಹೊರರಾಜ್ಯಗಳ ಕಾರ್ಮಿಕರು ಕೂಡ ಆಗಮಿಸಿದ್ದಾರೆ. ಈ ಬಾರಿ ಭಾರಿ ಮಳೆ, ತೂಫಾನ್‌ನಿಂದ ಸಮುದ್ರ ಅಲ್ಲೋಲ ಕಲ್ಲೋಲವಾಗಿದ್ದು, ಹೆಚ್ಚಿನ ಮೀನುಗಾರಿಕೆ ನಿರೀಕ್ಷಿಸಲಾಗಿದೆ.
ಕಳೆದೆರಡು ತಿಂಗಳಿನಿಂದ ನಾಡದೋಣಿ ಮೀನುಗಾರಿಕೆ ನಡೆಯುತ್ತಿದ್ದು, ಮಳೆಗಾಲದ ಎರಡು ತಿಂಗಳ ಕಾಲ ಮೀನು ಮೊಟ್ಟೆ ಇಡುವ ಅವಧಿ ಹಿನ್ನೆಲೆಯಲ್ಲಿ ಮೀನುಗಾರಿಕೆ ನಿಷೇಧಿಸಲಾಗಿತ್ತು.
ಮೀನುಗಾರಿಕೆಗೆ ತೆರಳಲು ಬೋಟ್‌ಗಳಿಗೆ ತಿಂಗಳಿಗೆ ಸುಮಾರು 15 ಸಾವಿರ ಲೀ. ಡೀಸೆಲ್ ಅಗತ್ಯವಿದ್ದು, ಸರಕಾರ 9 ಸಾವಿರ ಲೀ. ಡೀಸೆಲ್ ತೆರಿಗೆ ರಹಿತವಾಗಿ ಪೂರೈಕೆ ಮಾಡುತ್ತಿದೆ. ಉಳಿದ ಡೀಸೆಲ್ ತೆರಿಗೆ ಸಹಿತ ಖರೀದಿ ಮಾಡಬೇಕಾಗುತ್ತದೆ. ಡೀಸೆಲ್ ದರ ಹೆಚ್ಚಳದಿಂದ ಮೇ ತಿಂಗಳಲ್ಲಿ ಹೆಚ್ಚಿನ ಬೋಟ್‌ಗಳು ದಡ ಸೇರಿದ್ದವು. ಮೇ ಅಂತ್ಯಕ್ಕೆ ಡೀಸೆಲ್ ದರ ಕಡಿಮೆಯಾಗಿದ್ದರೂ, ಹೆಚ್ಚಿನ ಲಾಭ ಸಿಕ್ಕಿರಲಿಲ್ಲ. ಇದೀಗ ಡೀಸೆಲ್ ದರ ಇಳಿಕೆಯಿಂದ ಮೀನುಗಾರರಿಗೆ ಭರಪೂರ ಲಾಭವಾಗಲಿದೆ.