ಬೆಳ್ತಂಗಡಿ: ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಶ್ರೀ ಗುರುದೇವ ಮಠದಲ್ಲಿ ಜಗದ್ಗುರು ಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಕ್ಷೇತ್ರ ಪುರೋಹಿತರಾದ ಲಕ್ಷ್ಮಿಪತಿ ಗೋಪಾಲಚಾರ್ಯರ ಪೌರೋಹಿತ್ಯದಲ್ಲಿ ಆ.5 ರಂದು ವರಮಹಾಲಕ್ಷ್ಮಿ ಪೂಜೆ ನಡೆಯಿತು.
ಆಶೀರ್ವದಿಸಿದ ಶ್ರೀಗಳು “ತಪ್ಪು ಮಾಡುವವರನ್ನು ಸಂಯಮ,ತಾಳ್ಮೆ,ಪ್ರೀತಿ ಮೂಲಕ ಸರಿದಾರಿಗೆ ತರುವಲ್ಲಿ ಸ್ತ್ರೀಯರು ಮಹತ್ವದ ಪಾತ್ರ ವಹಿಸುತ್ತಾರೆ.ಸತಿತ್ವ, ಮಾತೃತ್ವವನ್ನು ಪಾಲಿಸಿ ಸಾಧ್ವೀತನದ ಮೂಲಕ ಕುಟುಂಬದಲ್ಲಿನ ತಪ್ಪುಗಳನ್ನು ತಿದ್ದಿ ಜೀವನವನ್ನು ಸಾಕಾರಗೊಳಿಸಲು ಮಹಿಳೆಯರು ವಿಶೇಷ ಶಕ್ತಿ ಹೊಂದಿದ್ದಾರೆ.
ವಿಶ್ವಾಸ ಮತ್ತು ಪ್ರೇರಣೆಯನ್ನು ಮಕ್ಕಳಿಗೆ ನೀಡುವಲ್ಲಿ ಪೋಷಕರು ವಿಫಲರಾದಾಗ ಅವರು ಅಡ್ಡದಾರಿ ಹಿಡಿಯುತ್ತಾರೆ. ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕೆಲಸ ಸಾಗಬೇಕು.ನೀತಿ ನಿಯಮ ಪಾಲಿಸಿ ಶ್ರದ್ಧೆಯಿಂದ ಮಾಡುವ ಪೂಜೆಗಳಿಗೆ ವಿಶೇಷ ಫಲವಿದೆ.ಜಪ,ಪೂಜೆ, ಯಜ್ಞಗಳ ಅನುಷ್ಠಾನದಿಂದ ಅದ್ಭುತ ಬದಲಾವಣೆ ಸಾಧ್ಯ” ಎಂದರು
ಶ್ರೀಗಳ ಚಾತುರ್ಮಾಸ್ಯ ವೃತದ ಅಂಗವಾಗಿ ಮರೋಡಿ ಶ್ರೀ ಆದಿ ಶಕ್ತಿ ಭಜನಾ ಮಂಡಳಿ, ಪರಾರಗೋಳಿ ಶ್ರೀ ಗುರು ಭಜನಾ ಮಂದಿರ, ಹಾಗೂ ಇನ್ನಿತರ ಭಜನೆ ತಂಡಗಳಿಂದ ಭಜನೆ ಕಾರ್ಯಕ್ರಮ ಜರುಗಿತು.
ಉತ್ತರಕನ್ನಡ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಎಂ. ಜಿ.ನಾಯ್ಕ, ಧರ್ಮಸ್ಥಳ ಗ್ರಾಮ ಪಂಚಾಯತಿ ಅಧ್ಯಕ್ಷೆ ಜಯ ಮೋನಪ್ಪ ಗೌಡ, ಉಜಿರೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ ರವಿ ಕುಮಾರ್ ಬರೆಮೇಲು, ಮರೋಡಿ ಪಂಚಾಯತಿ ಅಧ್ಯಕ್ಷೆ ಪದ್ಮಶ್ರೀ ಜೈನ್, ಸದಸ್ಯರಾದ ರತ್ನಾಕರ್ ಬುಣ್ಣನ್, ಉಮೇಶ್ ಪೂಜಾರಿ ಶ್ರೀ ರಾಮ ಕ್ಷೇತ್ರ ಸಮಿತಿ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಚಾತುರ್ಮಾಸ್ಯ ಸಮಿತಿ ಸಂಚಾಲಕ ಸೀತಾರಾಮ್ ಬಿ. ಎಸ್. ಪ್ರಶಾಂತ್ ಪಾರೆಂಕಿ, ಗಣ್ಯರು, ಉಪಸ್ಥಿತರಿದ್ದರು.