ಬೆಳ್ತಂಗಡಿ: ಯುವಕನೋರ್ವ ತನ್ನ ಕೂದಲನ್ನು ಕ್ಯಾನ್ಸರ್ ಪೀಡಿತ ರೋಗಿಗಳಿಗೆ ದಾನ ಮಾಡಿದ ಘಟನೆ ಬೆಳ್ತಂಗಡಿಯ ನಾರಾವಿಯಲ್ಲಿ ನಡೆದಿದೆ.
ನಿತಿನ್ ಪೂಜಾರಿ ಎಂಬವರು ಈ ಸತ್ಕಾರ್ಯ ಮಾಡಿದ ಯುವಕ. ಎರಡು ವರ್ಷಗಳಿಂದ ತನ್ನ ಕೂದಲು ಬೆಳೆಸಿದ್ದ ಇವರು ಇಂದು ಕೂದಲು ಕತ್ತರಿಸಿ ನಂತರ ಮಾತನಾಡಿ ‘ಕ್ಯಾನ್ಸರ್ ರೋಗಿಗಳಿಗೆ ಕೇಶದಾನ ಮಾಡುವ ಆಸೆ ಇತ್ತು. ನಾನು ಇನ್‌ಸ್ಟ್ರಾಗ್ರಾಂ ಬಳಸುತ್ತಿದ್ದಾಗ ಹುಡುಗಿಯರೇ ಹೆಚ್ಚು ಕೂದಲು ದಾನ ಮಾಡಿರುವುದು ನೋಡಿದೆ. ಯಾಕೆ ಹುಡುಗರೂ ಅದನ್ನು ಮಾಡಬಾರದು ಅಂತ ಯೋಚಿಸಿ ಈ ಕಾರ್ಯಕ್ಕೆ ನಿರ್ಧರಿಸಿದೆ.
2 ವರ್ಷ ಕೂದಲನ್ನು ಬೆಳೆಸಿ ಈಗ ದಾನಕ್ಕೆ ಮುಂದಾಗಿದ್ದೇನೆ. ಮುಂದೆ ನೇತ್ರದಾನಕ್ಕೂ ಸಹಿ ಹಾಕುವ ಯೋಜನೆಯಿದೆ. ನನ್ನ ಮರಣದ ನಂತರ ಬೇರೆಯವರಿಗೆ ಸಹಾಯವಾಗುವ ನನ್ನ ದೇಹದ ಅಂಗಾಂಗಳನ್ನು ದಾನ ಮಾಡಬೇಕು ಎಂಬ ಹಂಬಲ. ಗಲಾಟೆಯಲ್ಲೇ ಕಳೆದುಹೋಗುತ್ತಿರುವ ಈಗಿನ ಯುವಕರಿಗೆ ನನ್ನ ಈ ಸಣ್ಣ ಕಾರ್ಯ ಸ್ಫೂರ್ತಿಯಾಗಬಹುದು ಎಂಬ ನಂಬಿಕೆ’ ಎಂದು ಹೇಳಿದರು.