ಮಂಗಳೂರು, ಆ.19: ಮಂಗಳೂರು ಮೂಲದ ಯುವ ಛಾಯಾಗ್ರಾಹಕ ವಿವೇಕ್ ಗೌಡ ಅವರು 2022ರ ಪ್ರತಿಷ್ಠಿತ ಅಸ್ಕಾರಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕರ್ನಾಟಕದ ಯುವ ಛಾಯಾಗ್ರಾಹಕರಲ್ಲಿ ಛಾಯಾಚಿತ್ರ ಪ್ರತಿಭೆಯನ್ನು ಪ್ರೋತ್ಸಾಹಿಸಲು ಶಾರುಖ್ ಅಸ್ಕರಿ ಹಮೀದ್ ಅವರ ಸ್ಮರಣಾರ್ಥ 1997 ರಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಇದನ್ನು ಬೆಂಗಳೂರಿನ ಯೂತ್ ಫೋಟೋಗ್ರಾಫಿಕ್ ಸೊಸೈಟಿ (ವೈಪಿಎಸ್) ವಾರ್ಷಿಕವಾಗಿ ಆಯೋಜಿಸುತ್ತದೆ. ಕರ್ನಾಟಕ ರಾಜ್ಯದ 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಛಾಯಾಗ್ರಾಹಕರು ಮಾತ್ರ ನಾಲ್ಕು ಫೋಟೋಗಳ ಸರಣಿಯೊಂದಿಗೆ ಭಾಗವಹಿಸಲು ಅರ್ಹರಾಗಿರುತ್ತಾರೆ.
ವಿವೇಕ್ ಗೌಡ ಅವರ ‘ಇಂಥಾ ಮೀನುಗಾರರು’ ಶೀರ್ಷಿಕೆಯ ಛಾಯಾಚಿತ್ರ ಸರಣಿಗಾಗಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದಿದ್ದಾರೆ. ಮ್ಯಾನ್‌ಮಾರ್‌ನ (ಬರ್ಮಾ) ಇನ್ಲೆ ಸರೋವರದ ಸಾಂಪ್ರದಾಯಿಕ ಸಮುದಾಯವಾದ ‘ಇಂಥಾ’ ಮೀನುಗಾರರ ಅಳಿಯುತ್ತಿರುವ ಮೀನುಗಾರಿಕಾ ಪದ್ದತಿಗಳನ್ನು ಸರಣಿಯು ದಾಖಲಿಸುತ್ತದೆ. ವಿವೇಕ್ ಗೌಡ ಅವರು ತಮ್ಮ ಸರಣಿಯ ನಾಲ್ಕು ಛಾಯಾಚಿತ್ರಗಳನ್ನು ಪ್ರಶಸ್ತಿಗೆ ಸಲ್ಲಿಸಿದ್ದರು.
ಪ್ರವಾಸಿ ಛಾಯಾಗ್ರಾಹಕ ಶ್ರೀನಾಥ್ ನಾರಾಯಣ್, ಸೃಜನಾತ್ಮಕ ಛಾಯಾಗ್ರಾಹಕ ಗಿರೀಶ್ ಮಾಯಾಚಾರಿ ಮತ್ತು ಯೂತ್ ಫೋಟೋಗ್ರಾಫಿಕ್ ಸೊಸೈಟಿಯ ಜಂಟಿ ಕಾರ್ಯದರ್ಶಿ ಪ್ರೇಮಾ ಕಾಕಡೆ ಅವರನ್ನು ಒಳಗೊಂಡ ತೀರ್ಪುಗಾರರ ತಂಡ ಆಯ್ಕೆ ಮಾಡಿದ ಇಬ್ಬರು ವಿಜೇತರಲ್ಲಿ ಅವರು ಒಬ್ಬರು. ಅಪರೂಪದ ಕಾಕತಾಳೀಯವೆಂಬಂತೆ, ಈ ವರ್ಷದ ಎರಡೂ ಬಹುಮಾನಗಳನ್ನು ಮಂಗಳೂರಿನ ಛಾಯಾಗ್ರಾಹಕರಿಗೆ ನೀಡಲಾಗಿದೆ, ಮತ್ತೊಬ್ಬ ವಿಜೇತ ಶ್ರವಣ್ ಬಿ.ಎಂ ಅವರ ಹುಲಿ ಮರಿಗಳ (ಪಿಲಿವೇಷ) ಭಾವಚಿತ್ರಕ್ಕಾಗಿ. ಪ್ರಶಸ್ತಿಗಳನ್ನು ಶನಿವಾರ ಆಗಸ್ಟ್ 20, 2022 ರಂದು ಬೆಂಗಳೂರಿನಲ್ಲಿ ಪ್ರದಾನ ಮಾಡಲಾಗುತ್ತದೆ.
ವಿವೇಕ್ ಗೌಡ ಪರಿಚಯ
ಸಿನೆಮಾ ಚಿತ್ರಗ್ರಾಹಕ ಮತ್ತು ಛಾಯಾಚಿತ್ರಗ್ರಾಹಕರಾಗಿರುವ ವಿವೇಕ್ ಗೌಡ ಅವರು ಈ ಹಿಂದೆ ಇಂಥಾ ಮೀನುಗಾರರ ಫೋಟೋ ಸ್ಟೋರಿಗಾಗಿ ಫೆಡರೇಶನ್ ಆಫ್ ಇಂಡಿಯನ್ ಫೋಟೋಗ್ರಫಿಯಿಂದ “ವರ್ಷದ 2020 ರ ಎಫ್‌ಐಪಿ ಫೋಟೋಗ್ರಾಫರ್” ಆಗಿ ಆಯ್ಕೆಯಾಗಿದ್ದರು. ವಿಡಿಯೋ ಎಡಿಟಿಂಗ್, ಸಿನೆಮಾಚಿತ್ರಗ್ರಹಣ ಮತ್ತು ಸಾಕ್ಷ್ಯ ಛಾಯಾಚಿತ್ರಗ್ರಹಣ ಅವರ ಪರಿಣತಿಯ ಕ್ಷೇತ್ರಗಳು. ಅವರು 2017 ರಲ್ಲಿ ಹಮ್ಸಾ ಟಿವಿಯಿಂದ ‘ಅತ್ಯುತ್ತಮ ಎಡಿಟರ್’ ಪ್ರಶಸ್ತಿಯನ್ನು ಪಡೆದಿದ್ದಾರೆ ಮತ್ತು ವಿವಿಧ ದೇಶಗಳ ವಿವಿಧ ಛಾಯಾಚಿತ್ರ ಸ್ಪರ್ಧೆಗಳಲ್ಲಿ ಅನೇಕ ಅಂತರರಾಷ್ಟ್ರಿಯ ಪ್ರಶಸ್ತಿಗಳು ಮತ್ತು ಪುರಸ್ಕಾರಗಳನ್ನು ಪಡೆದಿದ್ದಾರೆ. ಫೆಡರೇಶನ್ ಆಫ್ ಇಂಡಿಯನ್ ಫೋಟೋಗ್ರಫಿಯಿಂದ ಎಎಫ್‌ಐಪಿ (ಆರ್ಟಿಸ್ಟ್ ಎಫ್‌ಐಪಿ) ಪ್ರಶಸ್ತಿಯನ್ನು ಪಡೆದಿದ್ದಾರೆ. ವಿವೇಕ್ ಅವರ ಕೃತಿಗಳು ಅವರಿಗೆ ಅವರ ಕಲೆಯ ಬಗ್ಗೆ ಇರುವ ಉತ್ಸಾಹದ ಪ್ರತೀಕವಾಗಿವೆ. ಅವರ ವೀಡಿಯೊಗಳು ಮತ್ತು ಚಿತ್ರಗಳು ಬಹು ಪ್ರಭಾವಶಾಲಿಯಾಗಿದ್ದು, ವಿಷಯದ ಬಗ್ಗೆ ತಮ್ಮದೇ ಆದ ಕಥೆಯನ್ನು ಹೇಳುತ್ತವೆ.