ಬೆಳ್ತಂಗಡಿ: ಉಜಿರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನುಗ್ರಹ ಶಾಲೆಯ ಮುಂಭಾಗದಲ್ಲಿರುವ ಎರಡು ಅಂಗಡಿಗಳಲ್ಲಿ ಅಗ್ನಿ ಅನಾಹುತ ಉಂಟಾಗಿ ಒಂದು ಕೋಟಿ ರೂ. ಗಿಂತ ಅಧಿಕ ಮೌಲ್ಯದ ಸೊತ್ತುಗಳು ನಾಶವಾದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ ಸಮೀಪ ಇರುವ ಈ ಅಂಗಡಿಗಳಿಗೆ ಬುಧವಾರ ಗಣೇಶ ಚತುರ್ಥಿ ಪ್ರಯುಕ್ತ ರಜೆ ಇದ್ದು, ಮಧ್ಯಾಹ್ನದ ವೇಳೆ ಅಂಗಡಿಗಳ ಒಳಭಾಗದಿಂದ ಬೆಂಕಿ ಕಂಡುಬಂದು ಏಕಾಏಕಿ ವ್ಯಾಪಿಸಿದೆ. ಇದರಿಂದ ರಾಜೀವ್ ಎಂಬವರ ಮಾಲಕತ್ವದ ಅನಾರ್ ಟಯರ್ ಅಂಗಡಿಗೆ 40 ಲಕ್ಷ ರೂ. ಗಿಂತ ಅಧಿಕ ಹಾನಿಯಾಗಿದೆ. ಅಲ್ಲಿಂದ ನಾಗೇಶ್ ಭಟ್ ಎಂಬವರ ರಕ್ಷಾ ಆಗ್ರೋ ಕೇಂದ್ರ ಎಂಬ ಹಾರ್ಡ್ ವೇರ್, ಪೈಂಟ್ ಅಂಗಡಿಗೆ ಪಸರಿಸಿದ ಬೆಂಕಿಯಿಂದ ಸಾಮಗ್ರಿ, ಕಂಪ್ಯೂಟರ್,ಕಟ್ಟಡ ಮತ್ತಿತರ ಸೊತ್ತುಗಳು ಸೇರಿದಂತೆ 70 ಲಕ್ಷ ರೂ. ಗಿಂತ ಅಧಿಕ ಮೌಲ್ಯದ ಹಾನಿ ಸಂಭವಿಸಿದೆ. ಎರಡು ಅಂಗಡಿಗಳ ದಾಖಲೆ ಪತ್ರಗಳ ಸಮೇತ ಸಂಪೂರ್ಣ ಸಾಮಾಗ್ರಿಗಳು ಬೆಂಕಿಗೆ ಆಹುತಿಯಾಗಿವೆ.
ಬೆಂಕಿ ಅನಾಹುತದ ವೇಳೆ ಸಾವಿರಾರು ಜನ ಜಮಾಯಿಸಿದ್ದು ಟ್ರಾಫಿಕ್ ಜಾಮ್ ಕೂಡ ಉಂಟಾಗಿ, ಬೆಂಕಿಯನ್ನು ಹತೋಟಿಗೆ ತರುವ ವೇಳೆ ಸ್ವಲ್ಪ ಸಮಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆಹಿಡಿಯಲಾಗಿತ್ತು.
ಸ್ಥಳಕ್ಕೆ ಬೆಳ್ತಂಗಡಿ ಅಗ್ನಿಶಾಮಕ ದಳ, ಬೆಳ್ತಂಗಡಿ ಪೊಲೀಸ್ ಠಾಣೆ ಹಾಗೂ ಸಂಚಾರಿ ಠಾಣೆ,ಧರ್ಮಸ್ಥಳ ಪೊಲೀಸ್ ಠಾಣೆ ಸಿಬ್ಬಂದಿಗಳು ಹಾಗೂ ಸ್ಥಳೀಯರು ಆಗಮಿಸಿ ಸಹಕರಿಸಿದರು. ಕಾರ್ಯಾಚರಣೆ ಸತತ ನಾಲ್ಕು ತಾಸಿಗಿಂತ ಅಧಿಕ ಕಾಲ ನಡೆಯಿತು. ಸಂಜೆ 7ರ ಹೊತ್ತಿಗೆ ಉತ್ತಮ ಮಳೆಯು ಸುರಿದು ಬೆಂಕಿಯನ್ನು ಸಂಪೂರ್ಣ ಆರಿಸಲು ಸಹಕಾರಿಯಾಯಿತು.
ಹಲವು ಕಿಮೀ. ವ್ಯಾಪಿಸಿದ ಹೊಗೆ
ಬೆಂಕಿ ಅನಾಹುತದ ಪರಿಣಾಮ ಹೊಗೆ ಹಾಗೂ ಟಯರ್ ಪೈಂಟ್, ಪೈಪ್ ಇತ್ಯಾದಿಗಳು ಸುಟ್ಟ ವಾಸನೆ ಉಜಿರೆ ಪರಿಸರ, ಕಲ್ಮಂಜ, ಮುಂಡಾಜೆ, ಬರಯಕನ್ಯಾಡಿ ಮೊದಲಾದ ಗ್ರಾಮಗಳ ತನಕ ಹಲವು ಕಿಮೀ ದೂರದವರೆಗೆ ವ್ಯಾಪಿಸಿತು.
ಸಿಡಿಲು ಕಾರಣ?
ಬುಧವಾರ ಮಧ್ಯಾಹ್ನ ಈ ಪರಿಸರದಲ್ಲಿ ಭಾರಿ ಸಿಡಿಲು,ಗುಡುಗು ಉಂಟಾಗಿತ್ತು.ಸಿಡಿಲು ಯಾವುದಾದರೂ ವಿದ್ಯುತ್ ಉಪಕರಣಗಳಿಗೆ ಬಡಿದು ಬೆಂಕಿ ಉಂಟಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಅಂಗಡಿಗಳಿಗೆ ರಜೆ ಇದ್ದ ಕಾರಣ ಬೆಂಕಿ ಸಂಪೂರ್ಣ ವ್ಯಾಪಿಸುವವರೆಗೂ ಯಾರ ಗಮನಕ್ಕೂ ಬಂದಿಲ್ಲ. ಈ ಅಂಗಡಿಗಳ ಸಮೀಪವೇ ಕಾರ್ಯ ನಿರ್ವಹಿಸುವ ಹೋಟೆಲ್ ಒಂದಕ್ಕೂ ಬೆಂಕಿ ಅಲ್ಪ ಪ್ರಮಾಣದ ಹಾನಿ ಉಂಟು ಮಾಡಿದೆ. ಬೆಂಕಿ ಹೋಟೆಲ್ ವರೆಗೂ ಆವರಿಸುತ್ತಿದ್ದರೆ ಇನ್ನಷ್ಟು ಅನಾಹುತ ಉಂಟಾಗುವ ಸಾಧ್ಯತೆ ಇತ್ತು.
ಕಬ್ಬಿಣದ ಶಟರ್ ಗಳಿರುವ ಅಂಗಡಿಗಳ ಒಳಗಿನಿಂದ ಬೆಂಕಿ ವ್ಯಾಪಿಸಿದ್ದು ಶಟರ್ ಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು. ಅಷ್ಟರಲ್ಲಿ ಸೊತ್ತುಗಳೆಲ್ಲ ಹಾನಿಗೊಳಗಾಗಿದ್ದವು. ಅಂಗಡಿಯಲ್ಲಿದ್ದ ಕಬ್ಬಿಣದ ಏಣಿ, ಪೈಪುಗಳು ಕೂಡ ಬೆಂಕಿತ ತಗುಲಿ ಮುರಿದುಬಿದ್ದಿವೆ.ಪರಿಸರದಲ್ಲಿದ್ದ ಹಲವು ವಾಹನಗಳಿಗೂ ಹಾನಿ ಉಂಟಾಗಿದೆ ಎಂದು ತಿಳಿದುಬಂದಿದೆ.