ಮಂಗಳೂರು: ಶಿಕ್ಷಕರ ತಿಳುವಳಿಕೆ ನಿರಂತರವಾಗಿ ವಿಸ್ತರಿಸುತ್ತಿರಬೇಕು. ವಿಜ್ಞಾನ ಮತ್ತು ತಂತ್ರಜ್ಞಾನದ ಈ ಆಧುನಿಕ ಯುಗದಲ್ಲಿ ಶಿಕ್ಷಕರ ಜವಾಬ್ದಾರಿಯೂ ಹೆಚ್ಚಿದೆ. ವಿಜ್ಞಾನವನ್ನು ಗೌರವಿಸಿ ಪರಂಪರೆಯನ್ನು ಬಿಡದೆ ಮುಂದಿನ ಜನಾಂಗವನ್ನು ಕಟ್ಟಬೇಕು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಪ್ರೊ.ಬಿ.ಎ.ವಿವೇಕ ರೈ ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಆಡಿಟೋರಿಯಂನಲ್ಲಿ ಸೋಮವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಶಿಕ್ಷಣದ ಭವಿಷ್ಯವು ಪರಂಪರೆ ಮತ್ತು ವೈಜ್ಞಾನಿಕ ಆವಿಷ್ಕಾರಗಳ ಸಮ್ಮಿಳನವಾಗಲಿದೆ. ಶಿಕ್ಷಣದ ಹೊಸ ತಂತ್ರಜ್ಞಾನದ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ತಮ್ಮ ಸಂಗ್ರಹದಲ್ಲಿರುವ ಸುಮಾರು 2500 ಪುಸ್ತಕಗಳನ್ನು ಮಂಗಳೂರು ವಿಶ್ವವಿದ್ಯಾನಿಲಯ ಗ್ರಂಥಾಲಯಕ್ಕೆ ನೀಡುವುದಾಗಿ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿವಿ ಉಪಕುಲಪತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಮಾತನಾಡಿ, ಉತ್ತಮ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾದರಿಯಾಗಿ ಬದುಕುತ್ತಾರೆ. ಅವರು ಅವರಿಗೆ ಸ್ಫೂರ್ತಿಯ ಮೂಲವಾಗಿರುತ್ತಾರೆ. ಈ ಸಂದರ್ಭದಲ್ಲಿ ಇತ್ತೀಚೆಗೆ ‘ಅತ್ಯುತ್ತಮ ಉಪಕುಲಪತಿ- 2022’ ಪ್ರಶಸ್ತಿ ಪಡೆದ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರನ್ನು ಸನ್ಮಾನಿಸಲಾಯಿತು.
ಮಂಗಳೂರು ವಿವಿ ಹಣಕಾಸು ಅಧಿಕಾರಿ ಪ್ರೊ.ಜಯಪ್ಪ ಉಪಸ್ಥಿತರಿದ್ದರು. ಕುಲಸಚಿವ ಡಾ.ಕಿಶೋರ್ ಕುಮಾರ್ ಸಿ.ಕೆ ಸ್ವಾಗತಿಸಿದರು. ಸಂಚಾಲಕ ಪ್ರೊ.ಮಂಜುನಾಥ ಪಟ್ಟಾಭಿ ವಂದಿಸಿದರು.