ಮಂಗಳೂರು: ಮಾನವೀಯತೆಯ ಪ್ರತಿರೂಪವಾದ ಸಂತ ಮದರ್ ತೆರೇಸಾರವರ 25ನೇ ಸಂಸ್ಕರಣಾ ದಿನಾಚರಣೆಯ ಅಂಗವಾಗಿ ಸೆ. 9ರಂದು ಶುಕ್ರವಾರ ಸಂಜೆ 3ಕ್ಕೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ದ.ಕ. ಜಿಲ್ಲಾ ಮಟ್ಟದ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ.
ವಿಚಾರ ಸಂಕಿರಣವನ್ನು ಕರ್ನಾಟಕ ರಾಜ್ಯದ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಜಸ್ಟೀಸ್ ಎಚ್.ಎನ್. ನಾಗಮೋಹನ್‌ದಾಸ್ತರವರು ಉದ್ಘಾಟಿಸಲಿದ್ದು, ಬಹುತ್ವದ ಭಾರತದಲ್ಲಿ ಮಾನವೀಯ ಸೇವೆಗಳು ಎಂಬ ವಿಚಾರ ಸಂಕಿರಣದಲ್ಲಿ ವಿಷಯ ಮಂಡನೆಯನ್ನು ನಾಡಿನ ಖ್ಯಾತ ಬರಹಗಾರರೂ, ಚಿಂತಕರಾದ ಪಲ್ಲವಿ ಇಡೂರುರವರು ಮಾಡಲಿದ್ದಾರೆ. ಧರ್ಮಗುರುಗಳು, ಮಂಗಳೂರು ಧರ್ಮ ಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಫಾ| ಜೆ.ಬಿ. ಸಲ್ಡಾನಾ ಹಾಗೂ ಯುವಜನ ಚಳುವಳಿಯ ರಾಜ್ಯ ನಾಯಕರಾದ ಮುನೀರ್ ಕಾಟಿಪಳ್ಳರವರು ಪ್ರತಿಕ್ರಿಯೆ ನೀಡಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಸಂತ ಮದ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೊರವರು ವಹಿಸಲಿದ್ದಾರೆ.
ಸಂತ ಮದರ್ ತೆರೇಸಾರವರ ಸಂಸ್ಕರಣಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ದ.ಕ. ಜಿಲ್ಲಾ ಮಟ್ಟದ ಪಬಂಧ ಹಾಗೂ ಚಿತ್ರಕಲಾ ಸ್ಪರ್ಧೆಗಳು ದ.ಕ. ಜಿಲ್ಲೆಯಲ್ಲಿ ದಾಖಲೆ ನಿರ್ಮಿಸಿದ್ದು ಅವುಗಳ ಬಹುಮಾನಗಳನ್ನು ಈ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು. ಬಳಿಕ ಸಂಜೆ 5.30ಕ್ಕೆ ‘ಪ್ರೀತಿಯ ಸಿಂಚನ’ ಎಂಬ ಸೌಹಾರ್ದ ಗಾಯನ ಕಾರ್ಯಕ್ರಮವು ಜರುಗಲಿದ್ದು, ಏಕತಾರಿ, ಹಾಡುಗಾರರಾದ ನಾದ ಮಣಿನಾಲ್ಕೂರು ಬಳಗ, ಮೈಮ್ ರಾಮ್‌ದಾಸ್, ಮೇಘನಾ ಕುಂದಾಪುರ, ಜಾಸ್ಮಿನ್ ಡಿ’ಸೋಜ ಹಾಗೂ ಮಹಮ್ಮದ್ ಇಸ್ಮಾಯಿಲ್ ರವರು ಪ್ರೀತಿ, ಶಾಂತಿ ಹಾಗೂ ಸೌಹಾರ್ದತೆಗೆ ಸಂಬಂಧಿಸಿದ ಹಾಡುಗಳನ್ನು ಪ್ರಸ್ತುತಪಡಿಸಲಿದ್ದಾರೆ.
ಹಸಿವು, ಬಡತನ, ರೋಗ ರುಜಿನದ ಜೊತೆಗೆ ಪರಸ್ಪರ ಅಪನಂಬಿಕೆ, ಸ್ವಾರ್ಥ, ದ್ವೇಷ ಸಮಾಜದಲ್ಲಿ ವೇಗವಾಗಿ ಹರಡುತ್ತಿದೆ. ಒಬ್ಬರನ್ನೊಬ್ಬರು ನಂಬದ ಸ್ಥಿತಿಗೆ ತಲುಪುತ್ತಿದ್ದೇವೆ, ಎಲ್ಲೆಡೆ ಹಿಂಸೆ, ಕೌರ್ಯ ತಾಂಡವವಾಡುತ್ತಿದೆ. ವ್ಯಾಪಾರೀ ಮನೋಭಾವಕ್ಕೆ ಸಿಲುಕಿ ಸೇವೆ ಎಂಬುವುದು ಪ್ರದರ್ಶನವಾಗುತ್ತಿದೆ. ಧರ್ಮದ ಹೆಸರಿನಲ್ಲಿ ಪ್ರತ್ಯೇಕಿಸುವ, ಪರಸ್ಪರರನ್ನು ಕೊಲ್ಲುವ, ಕೊಲೆಗಳನ್ನೂ ಸಂಭ್ರಮಿಸುವ ಬೆಳವಣಿಗೆಗಳು ಗಾಬರಿ ಹುಟ್ಟಿಸುತ್ತವೆ. ಇದು ಸಹಜವಾಗಿಯೇ ನಮ್ಮಂತವರಲ್ಲಿ ಭವಿಷ್ಯದ ಕುರಿತು ಆತಂಕ ಮೂಡಿಸಿದೆ. ಇಂತಹ ಸಂದರ್ಭದಲ್ಲಿ ನಮ್ಮ ನೆಲದಲ್ಲಿ ಆಗಿ ಹೋದ, ನಮ್ಮ ಕಾಲಘಟ್ಟದಲ್ಲೇ ಜೀವಿಸಿದ ಮಹಾನ್ ವ್ಯಕ್ತಿತ್ವಗಳಿಂದ ಪ್ರೇರಣೆ ಪಡೆಯುವ ಅವರ ಮಾನವೀಯ ವಿಚಾರಗಳನ್ನು ಜನರ ನಡುವೆ ಹರಡುವ ಅಗತ್ಯ ಹೆಚ್ಚಿದೆ. ಸಂತ ಮದರ್ ತೆರೇಸಾ ನಮ್ಮ ನಡುವೆ ಜೀವಿಸಿದ್ದ ಅಂತಹ ಮಹಾನ್ ವ್ಯಕ್ತಿತ್ವಗಳಲ್ಲಿ ಪ್ರಮುಖರು, ಅವರ ನಿಸ್ವಾರ್ಥ ಸೇವೆ, ಸಮಾಜ ತಿರಸ್ಕರಿಸಿದ ಹತಭಾಗ್ಯರನ್ನು ತಬ್ಬಿಕೊಳ್ಳುವ ಕಾಳಜಿ, ಅವರ ಮಾನವೀಯ ವಿಚಾರಗಳು ಅವನಂಬಿಕೆ, ದ್ವೇಷಗಳನ್ನು ಹಿಮ್ಮೆಟ್ಟಿಸಿ ಪ್ರೀತಿ ಹರಡಲು ಸಹಾಯ ಮಾಡಬಹುದು.
ಈ ಹಿನ್ನಲೆಯಲ್ಲಿ ಆಯೋಜಿಸಲಾಗಿರುವ ಈ ಕಾರ್ಯಕ್ರಮವು ಮಾನವೀಯ ಹೃದಯಗಳ ಸೌಹಾರ್ದ ಸಂಗಮವಾಗಬೇಕಾಗಿದೆ. ಆದ್ದರಿಂದ ಈ ವಿಚಾರ ಸಂಕಿರಣ ಹಾಗೂ ಸೌಹಾರ್ದ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಜ್ಞಾವಂತ ಜನತೆ, ವಿದ್ಯಾರ್ಥಿ- ಯುವಜನರು-ದಲಿತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿನಂತಿ.