ಬೆಳ್ತಂಗಡಿ: ಶ್ರೀ ಗುರುದೇವ ವಿವಿದೋದ್ದೇಶ ಸಹಕಾರ ಸಂಘ(ರಿ) ಬೆಳ್ತಂಗಡಿ ಇದರ ಒಟ್ಟು 16 ಶಾಖೆಗಳಲ್ಲಿ 30788 ಸದಸ್ಯರಿದ್ದು 2021-22 ನೇ ಸಾಲಿನಲ್ಲಿ ರೂ.1.57 ಕೋಟಿ ನಿವ್ವಳ ಲಾಭ ಗಳಿಸಿ ಸದಸ್ಯರಿಗೆ ಶೇ.15ರಷ್ಟು ಲಾಭಂಶ ವಿತರಿಸಲಾಗಿದೆ’ ಎಂದು ಸಂಘದ ಅಧ್ಯಕ್ಷ ಪದ್ಮನಾಭ ಮಾಣಿಂಜ ಹೇಳಿದರು.
ಅವರು ಭಾನುವಾರ ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾಭವನದಲ್ಲಿ ಶ್ರೀ ಗುರುದೇವ ವಿವಿದೋದ್ದೇಶ ಸಹಕಾರ ಸಂಘ(ರಿ) ಬೆಳ್ತಂಗಡಿ ಇದರ 15 ನೇ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
2022-23 ನೇ ಸಾಲಿನಲ್ಲಿ ಅಜೆಕಾರು, ಹಿರಿಯಡ್ಕ ಹಾಗೂ ಮಂಗಳೂರಿನ ಪಡೀಲ್‍ನಲ್ಲಿ ಶಾಖೆಗಳು ಆರಂಭವಾಗಲಿದ್ದು, ಇನ್ನೂ 3 ಶಾಖೆಗಳಿಗೆ ಸರ್ಕಾರದಿಂದ ಅನುಮತಿ ಪಡೆಯಲಾಗಿದೆ. ತಂತ್ರಜ್ಞಾನ ಆಧಾರಿತ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಆರಂಭಿಸಲು ಕಾರ್ಯಪ್ರವೃತ್ತವಾಗಿದ್ದೇವೆ. ಸಾಲಗಾರ ಸದಸ್ಯ ಮರಣ ಹೊಂದಿದರೆ ಗರಿಷ್ಠ ರೂ.2 ಲಕ್ಷದವರೆಗೆ ಮರಣ ನಿಧಿಯ ಯೋಜನೆಯನ್ನು ಪರಿಚಯಿಸಲಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸೀಮಿತವಾಗಿದ್ದ ಸಂಘದ ಕಾರ್ಯಕ್ಷೇತ್ರವನ್ನು ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳಿಗೆ ವಿಸ್ತರಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದರು.
ಸಂಘವು ಕೇವಲ ಬ್ಯಾಂಕಿಂಗ್ ವ್ಯವಹಾರ ಮಾತ್ರವಲ್ಲದೆ ಸಾಮಾಜಿಕ ಸೇವೆಯಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿದೆ. ಕಲಿಕೆಗಾಗಿ ಸಹಾಯ ಸಹಾಯಕ್ಕಾಗಿ ಕಲಿಕೆ ಎಂಬ ಯೋಜನೆಯಡಿ ಬಡ ಕುಟುಂಬದ ಎಂಜಿನಿಯರಿಂಗ್ ವ್ಯಾಸಾಂಗದ ಮೂವರು ವಿದ್ಯಾರ್ಥಿಗಳನ್ನು, ವೈದ್ಯಕೀಯ ವ್ಯಾಸಾಂಗದ ಓರ್ವ ವಿದ್ಯಾರ್ಥಿಯನ್ನು ದತ್ತು ಪಡೆಯಲಾಗಿದೆ. ಶ್ರೀ ಗುರುದೇವ ಕಾಲೇಜಿನಲ್ಲಿ ಪದವಿ ವ್ಯಾಸಾಂಗ ಮಾಡುತ್ತಿರುವ 61 ವಿದ್ಯಾರ್ಥಿಗಳಿಗೆ ರೂ. 6 ಲಕ್ಷದಷ್ಟು ವಿದ್ಯಾರ್ಥಿವೇತನವನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.
ಏಕಲವ್ಯ ಪ್ರಶಸ್ತಿ ವಿಜೇತ ನಿತಿನ್ ಪೂಜಾರಿ, ಚಲನಚಿತ್ರ ನಿರ್ದೇಶಕ ಸ್ಮಿತೇಶ್ ಎಸ್ ಬಾರ್ಯ, ಸಾಹಿತಿ ಚಂದ್ರಹಾಸ ಬಳಂಜ, ಕರಾಟೆ ಪಟು ಶ್ರೇಯಸ್ ಪೂಜಾರಿ ಇವರಿಗೆ ಶ್ರೀ ಗುರುದೇವ ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು. ಹೃದಯಾಘಾತದಿಂದ ನಿಧನರಾದ ನೆಲ್ಯಾಡಿ ಶಾಖೆಯ ದೈನಿಕ ಠೇವಣಿ ಸಂಗ್ರಾಹಕ ಗೋಪಾಲರ ಮಕ್ಕಳಿಗೆ ವಿದ್ಯಾರ್ಥಿವೇತನ ಹಸ್ತಾಂತರಿಸಲಾಯಿತು. ನಿರ್ದೇಶಕರು ತಮ್ಮ ಭತ್ಯೆಯನ್ನು ವಿದ್ಯಾರ್ಥಿ ವೇತನವಾಗಿ ನೀಡಿದರು.
ಬ್ಯಾಂಕಿಂಗ್ ವ್ಯವಹಾರದಲ್ಲಿ ಸಾಧನೆಗೈದ ಶಿರ್ತಾಡಿ ಶಾಖೆ, ಬೆಳ್ತಂಗಡಿ ಶಾಖೆ, ಉಪ್ಪಿನಂಗಡಿ ಶಾಖೆ, ವೇಣೂರು ಶಾಖೆ, ಮುಡಿಪು ಶಾಖೆ, ಹಳೆಯಂಗಡಿ ಶಾಖೆ ಹಾಗೂ ಬೆಳುವಾಯಿ ಶಾಖೆಗಳಿಗೆ ಪ್ರಶಂಸಾ ಪತ್ರ ನೀಡಲಾಯಿತು. ಅತಿ ಹೆಚ್ಚು ದೈನಿಕ ಠೇವಣಿ ಸಂಗ್ರಹಿಸಿದ ಶಿರ್ತಾಡಿ ಶಾಖೆಯ ಶಶಿಧರ ಪೂಜಾರಿ ಹಾಗೂ ಮುಡಿಪು ಶಾಖೆಯ ನಾರಾಯಣ ಭಟ್‍ರನ್ನು ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷ ಭಗೀರಥ ಜಿ, ನಿರ್ದೇಶಕರಾದ ಮಾಜಿ ಶಾಸಕ ಕೆ. ವಸಂತ ಬಂಗೇರ, ಸುಜಿತಾ ವಿ ಬಂಗೇರ, ತನುಜಾ ಶೇಖರ್, ಸಂಜೀವ ಪೂಜಾರಿ, ಕೆ.ಪಿ.ದಿವಾಕರ, ಜಗದೀಶ್ಚಂದ್ರ ಡಿ.ಕೆ., ಧರಣೇಂದ್ರ ಕುಮಾರ್, ಗಂಗಾಧರ ಮಿತ್ತಮಾರ್, ಆನಂದ ಪೂಜಾರಿ, ಡಾ.ರಾಜಾರಾಮ್ ಕೆ.ಬಿ., ಜಯವಿಕ್ರಮ್ ಇದ್ದರು.
ನಿರ್ದೇಶಕ ಶೇಖರ ಬಂಗೇರ ಸ್ವಾಗತಿಸಿದರು. ವಿಶೇಷ ಅಧಿಕಾರಿ ಎಂ. ಮೋನಪ್ಪ ಪೂಜಾರಿ ಪ್ರಸ್ತಾವಿಸಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವಥ್ ಕುಮಾರ್ ಸಭೆಯ ಕಾರ್ಯಸೂಚಿಯನ್ನು ತಿಳಿಸಿದರು. ಮಾರುಕಟ್ಟೆ ಅಧಿಕಾರಿ ಶಿವಪ್ರಕಾಶ್ ಹಾಗೂ ಕಡಬ ಶಾಖೆಯ ವ್ಯವಸ್ಥಾಪಕ ಪ್ರದೀಶ್ ಎನ್ ಕಾರ್ಯಕ್ರಮ ನಿರೂಪಿಸಿ. ನಿರ್ದೇಶಕ ಚಂದ್ರಶೇಖರ್ ವಂದಿಸಿದರು.