ಬಂಟ್ವಾಳ: ಸಮಾಜದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ಮೇಲೆಕ್ಕೆತ್ತುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಇದೀಗಾಗಲೇ ಹಲವಾರು ಅನುದಾನಗಳನ್ನು ಗ್ರಾಮಪಂಚಾಯತ್ ಗೆ ನೀಡಲಾಗಿದ್ದು, ಉಳಿದಿರುವ ಇನ್ನಷ್ಟು ಬೇಡಿಕೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಮುಂದಿನ ದಿನಗಳಲ್ಲಿ ಪರಿಹರಿಸಲಾಗುವುದು. ಮುಂದಿನ ದಿನಗಳಲ್ಲಿ ಸುತ್ತಮುತ್ತಲಿನ ಗ್ರಾಮಗಳಿಗೆ ಅನುಕೂಲವಾಗುವಂತೆ ಕೆದಿಲದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತೆರೆಯಲು ಪ್ರಯತ್ನಿಸಲಾಗುವುದು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಸೆ.೧೦ರಂದು ಕೆದಿಲ ಗ್ರಾಮ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬಂಟ್ವಾಳ ಮತ್ತು ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ಜಂಟಿ ಆಶ್ರಯದಲ್ಲಿ ಕೆದಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಜಲಜೀವನ್ ಮಿಷನ್ ಯೋಜನೆಯ ಶಂಕು ಸ್ಥಾಪನೆ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಆರೋಗ್ಯ ಕ್ಷೇಮ ಕೇಂದ್ರದ ಉದ್ಘಾಟನೆ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ನಾವು ನೆಮ್ಮದಿಯ ಬದುಕು ಸಾಗಿಸುವಲ್ಲಿ ಆರೋಗ್ಯಕೇಂದ್ರಗಳ ಪಾತ್ರ ಬಹಳಷ್ಟಿದೆ. ಆದ್ದರಿಂದ ಅಲ್ಲಲ್ಲಿ ಆರೋಗ್ಯ ಕ್ಷೇಮ ಕೇಂದ್ರವನ್ನು ತೆರೆಯಲಾಗುತ್ತಿದೆ. ಜನರ ಮೂಲಭೂತ ಅವಶ್ಯಕತೆಗಳಿಗೆ ಕೇಂದ್ರ ಸರಕಾರ ಸದಾ ಸ್ಪಂದಿಸುತ್ತಿದೆ. ವಿವಿಧ ಯೋಜನೆಗಳ ಮೂಲಕ ಬೇರೆ ಬೇರೆ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ರಸ್ತೆಗಳು, ಶಾಲಾ ಕಟ್ಟಡ, ಅಂಗನವಾಡಿ ಗಳ ಅಭಿವೃದ್ದಿ ನಿರಂತರವಾಗಿ ನಡೆಅಲಾಗುತ್ತಿದೆ. ಮೂಲಭೂತ ಸೌಲಭ್ಯಕ್ಕೆ ಒತ್ತು ಕೊಟ್ಟು ಕೆಲಸ ಮಾಡಲಾಗುತ್ತಿದೆ. ರೈತರ ಮಕ್ಕಳಿಗೆ ರೈತವಿದ್ಯಾನಿಧಿ ಯೋಜನೆ ಇದೆ. ಶೈಕ್ಷಣಿಕೆ ಸುಧಾರಣೆಗಳನ್ನು ತರಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕೆದಿಲ ಗ್ರಾಮ ಪಂಚಾಯತ್ ನಿಂದ ಉಳ್ಳಾಲ ತಾಲೂಕಿಗೆ ವರ್ಗಾವಣೆಗೊಂಡ ಕಾರ್ಯದರ್ಶಿ ದಿನೇಶ್ ಕುಮಾರ್‌ರವರನ್ನು ಶಾಸಕರು ಸನ್ಮಾನಿಸಿದರು.
ಗ್ರಾ.ಪಂ.ಅದ್ಯಕ್ಷ ರಾದ ಜಯಂತಿ ದನಂಜಯ ಶೆಟ್ಟಿ, ಉಪಾಧ್ಯಕ್ಷರಾದ ಉಮೇಶ್ ಮುರುವ, ಮಾಣಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಶಿಕಲಾ ಉಪಸ್ಥಿತರಿದ್ದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಎಂ. ಭುವನೇಂದ್ರ ಕುಮಾರ್ ಸ್ವಾಗತಿಸಿದರು. ಗ್ರಾ.ಪಂ.ಉಪಾಧ್ಯಕ್ಷ ಉಮೇಶ್ ಮುರುವ ವಂದಿಸಿದರು. ಗೋಪಾಲಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿದರು.