ಕತಾರ್: ಕತಾರ್ ರಾಷ್ಟ್ರದ ಖ್ಯಾತ ಕನ್ನಡಿಗ ಉದ್ಯಮಿ, ಸಮುದಾಯ ನಾಯಕ, ಸಾಮಾಜಿಕ ಚಟುವಟಿಕೆಗಳಲ್ಲಿನ ಕ್ರಿಯಾಶೀಲ, ಸಂಸ್ಕೃತಿ, ಪರಂಪರೆ, ನೆಲ, ಜಲ ಮತ್ತು ನಾಡ ಭಾಷೆಗಳ ಪ್ರತಿಪಾದಕ, ಡಾ.ಮೂಡಂಬೈಲು ರವಿಶೆಟ್ಟಿಯವರ ಬದುಕಿನ ಚಿತ್ರಣದ “ರವಿತೇಜ” ಪುಸ್ತಕದ ಬಿಡುಗಡೆ ಸಮಾರಂಭ ದೋಹಾದಲ್ಲಿನ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಶೋಕ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕತಾರಿನ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಬಾಬುರಾಜನ್ ವಹಿಸಿದ್ದರು. ಭಾರತೀಯ ಸಮುದಾಯ ಸಹಾಯಾರ್ಥ ವೇದಿಕೆ ಸಂಸ್ಥೆಯ ಹಂಗಾಮಿ ಅಧ್ಯಕ್ಷ ವಿನೋದ್ ನಾಯರ್ ಅತಿಥಿಯಾಗಿ ಆಗಮಿಸಿದ್ದರು. ಕತಾರಿನ ಇನ್ನೋರ್ವ ಉದ್ಯಮಿ, ಶಾಲೆಯ ನಿರ್ದೇಶಕ ರಾಕಿ ಫೆರ್ನಾಂಡೀಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕತಾರಿನ ಉದ್ಯಮಿಗಳಾದ ಜೆರಾಲ್ಡ್ ಡಿಮೆಲ್ಲೊ, ಅಬ್ದುಲ್ಲಾ ಮೋನು, ಭಾರತೀಯ ಸಾಂಸ್ಕೃತಿಕ ಕೇಂದ್ರದ ಮಾಜಿ ಅಧ್ಯಕ್ಷೆ ಮಿಲನ್ ಅರುಣ್, ಕತಾರ್ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಹೆಚ್.ಕೆ ಮಧು ಗೌರವಾನ್ವಿತ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಭಾರತೀಯ ಸಾಂಸ್ಕೃತಿಕ ಕೇಂದ್ರದ ಮಾಜಿ ಅಧ್ಯಕ್ಷೆ, ಮಿಲನ್ ಅರುಣ್ ಸ್ವಾಗತಿಸಿದರು. ರವಿಶೆಟ್ಟಿಯವರ ಸವಿಸ್ತಾರವಾದ ಪರಿಚಯ ಮಾಡಿಕೊಟ್ಟರು.
ರವಿತೇಜ ಕನ್ನಡ ಆವೃತ್ತಿಯ ಪುಸ್ತಕ ಬಿಡುಗಡೆ ಮಾಡಿದ ಬಾಬುರಾಜನ್, ರವಿಶೆಟ್ಟಿಯವರ ಜೊತೆಗಿನ ಒಡನಾಟ, ಸ್ನೇಹ, ಸಂಬಂಧ ಮತ್ತು ನೆರವಿನ ಗುಣಗಳನ್ನು ಶ್ಲಾಘಿಸಿದರು.
ರವಿತೇಜ ಪುಸ್ತಕದ ಇಂಗ್ಲೀಷ್ ಆವೃತ್ತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ವಿನೋದ್ ನಾಯರ್ ಪುಸ್ತಕದ ಗಾತ್ರ ಮತ್ತು ವಿಷಯದ ಬಗ್ಗೆ ಬೆಳಕು ಚೆಲ್ಲಿದರು. ಇದೇ ಸಮಾರಂಭದಲ್ಲಿ ರವಿಶೆಟ್ಟಿಯವರು ಇಂಗ್ಲೀಷ್‌ಗೆ ಭಾಷಾಂತರಿಸಿದ ಮಹಾಬಲ ಸೀತಾಳಭಾವಿಯರ ಆಯ್ದ ೧೦೧ ಸಂಸ್ಕೃತ ಸುಭಾಷಿತಗಳ ಪುಸ್ತಕವನ್ನು ಜೆರಾಲ್ಡ್ ಡಿಮೆಲ್ಲೊ ಬಿಡುಗಡೆ ಮಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಕಿ ಫರ್ನಾಂಡೀಸ್, ರವಿಶೆಟ್ಟಿಯವರ ವ್ಯಕ್ತಿತ್ವ ಮತ್ತು ಸಾಮರ್ಥ್ಯದ ಧೀರ್ಘ ಅನುಭವದ ಅನೇಕ ಪ್ರಸಂಗಗಳನ್ನು ಸ್ಮರಿಸಿದರು.
ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಹೆಚ್.ಕೆ ಮಧು ಪುಸ್ತಕಗಳ ಬಗ್ಗೆ ವಿವರಣೆಯನ್ನು ನೀಡಿದರು. ರವಿತೇಜ ಪುಸ್ತಕದ ಮೂಲ ಕೇಂದ್ರಬಿಂದು ರವಿಶೆಟ್ಟಿಯವರು ಸಮಾರಂಭದಲ್ಲಿ ಮಾತನಾಡಿ ಪುಸ್ತಕದ ಪ್ರಕಟಣೆಯ ಹಿನ್ನೆಲೆ, ಅದನ್ನು ಕಾರ್ಯರೂಪಕ್ಕೆ ತಂದ ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಜಿ.ಎನ್.ಉಪಾಧ್ಯ, ಐಲೇಸಾದ ಶಾಂತರಾಮ್ ಶೆಟ್ಟಿ, ತಮ್ಮ ಸಂಸ್ಥೆಯ ವಿಜಯ್, ಮುನ್ನಡಿ ಬರೆದ ಪ್ರೊ. ವಿವೇಕ್ ರೈ, ರವಿಶೆಟ್ಟಿಯವರನ್ನು ಸಮಾಜಮುಖಿ, ಸಮಾಜದ ಮುಕುಟಮಣಿಯೆಂದು ಬಣ್ಣಿಸಿದ ಡಾ.ದೊಡ್ಡರಂಗೇಗೌಡರು, ನ್ಯಾಯಮೂರ್ತಿ ಸಂತೋಷ್ ಹೆಗಡೆ, ಡಾ.ಬಿ.ಎಂ ಹೆಗಡೆ, ಸಾಹಿತಿ -ಕವಿ ಜಯಂತ್ ಕಾಯ್ಕಿಣಿಯವರ ಅದ್ಭುತ ಲೇಖನಗಳು, ತಮ್ಮ ಜನ್ಮದಾತೆ, ಮಡದಿ- ಮಕ್ಕಳು, ಬಂಧು-ಬಳಗ, ಅಸಂಖ್ಯಾತ ಮಿತ್ರರು, ಪುಸ್ತಕಕ್ಕೆ ಲೇಖನಗಳನ್ನು ಒದಗಿಸಿದ ಖ್ಯಾತನಾಮರು ಮತ್ತು ಎಲ್ಲಾ ಬರಹಗಾರರು, ಸಂಪಾದಕಿ ಡಾ.ಪೂರ್ಣಿಮಾ ಸುಧಾಕರ್ ಶೆಟ್ಟಿ, ಅನುವಾದಕಿ ಮಿಥಾಲಿ ಪ್ರಸನ್ನ ರೈ ಹಾಗೂ ಈ ಯೋಜನೆಗೆ ದುಡಿದ ಎಲ್ಲರನ್ನೂ ಸ್ಮರಿಸಿ ಧನ್ಯವಾದಗಳನ್ನರ್ಪಿಸಿದರು.
ಕೊರೋನಾ ಸಂಕಷ್ಟ ಸಮಯದಲ್ಲಿ, ಸಂಸ್ಕೃತ ಸುಭಾಷಿತಗಳನ್ನು ತರ್ಜುಮೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಬರೆಯಲು ಹಾಗೂ ಅದರ ೧೦೧ ಸುಭಾಷಿತಗಳ ಪುಸ್ತಕ ಪ್ರಕಟಣೆಗೆ ಪ್ರೇರಕ ಮತ್ತು ಪ್ರೇರಣೆಯಾದ ಮಹಾಬಲ ಸೀತಾಳಭಾವಿಯವರಿಗೆ ಕೃತಜ್ಞತೆ ಸಲ್ಲಿಸಿದರು.
ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಹಾಗೂ ವಿಭಾಗದ ಮುಖ್ಯಸ್ಥರಾದ ಡಾ.ಜಿ.ಎನ್ ಉಪಾಧ್ಯಾರವರ ಸಹಕಾರ ಮತ್ತು ಸಹಯೋಗದೊಂದಿಗೆ ಹೊರತಂದಿರುವ ರವಿತೇಜ ಕನ್ನಡ ಆವೃತ್ತಿಯ ಪುಸ್ತಕ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿಯವರ ಸಂಪಾದಕತ್ವದಲ್ಲಿ ಮೂಡಿಬಂದಿದೆ. ಮಿಥಾಲಿ ಪ್ರಸನ್ನ ರೈ ಇದೇ ಪುಸ್ತಕವನ್ನು ಇಂಗ್ಲೀಷ್‌ಗೆ ಅನುವಾದ ಮಾಡಿದ್ದಾರೆ. ಕತಾರಿನ ಕರ್ನಾಟಕ ಟೋಸ್ಟ್ ಮಾಸ್ಟರ್‌ನ ಅಧ್ಯಕ್ಷೆ ಹಾಗೂ ಲೇಖಕಿ ಸುಷ್ಮಾಹರೀಶ್ ಕಾರ್ಯಕ್ರಮ ನಿರ್ವಹಿಸಿದರು. ಅಬ್ದುಲ್ಲಾ ಮೋನು ವಂದಿಸಿದರು.