ಬೆಳ್ತಂಗಡಿ: “ಊರ ಕೆರೆಗಳ ಸಂರಕ್ಷಣೆ ಇಂದು ಅಗತ್ಯವಾಗಿದೆ. ಊರ ಕೆರೆಗಳನ್ನು ಜನ ಸಹಭಾಗಿತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಪುನಃಶ್ಚೇತನ ಮಾಡುವ ಕಾರ್ಯ ನಡೆದಿದೆ. ಇದಕ್ಕಾಗಿ ನೀವೆಲ್ಲರೂ ಸಹಕಾರ ನೀಡಿದ್ದಿರಿ. ಹೂಳು ತುಂಬಿದ ಕೆರೆಗಳು ಇದೀಗ ತಮ್ಮ ನೀರಿನ ಶೇಖರಣಾ ಸಾಮರ್ಥ್ಯ ಹೆಚ್ಚಿಸಿ ತುಂಬಿಕೊಂಡಿದೆ. ಇಂತಹ ಕೆರೆಗಳು ಊರ ಆಸ್ತಿ. ಈ ಕೆರೆಗಳನ್ನು ಉಳಿಸಿ ಸಂರಕ್ಷಿಸಿ” ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ತಿಳಿಸಿದರು.
ಧರ್ಮಸ್ಥಳಕ್ಕೆ ಬುಧವಾರ ಹಾಸನ, ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ ಜಿಲ್ಲೆಯಿಂದ ಬಂದ ಕೆರೆ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳನ್ನುದ್ದೇಶಿಸಿ ಅವರು ಮಾತನಾಡಿದರು. “ನಮ್ಮ ಭವಿಷ್ಯ, ನಮ್ಮ ಜೀವನ ನಾವೇ ರೂಪಿಸಿಕೊಳ್ಳಬೇಕು. ಸಾಧನೆ ಮಾಡಲು ಛಲ ಬೇಕು. ಆಲಸ್ಯ ಇರುವವರು ಸಾಧನೆ ಮಾಡಲು ಸಾಧ್ಯವಿಲ್ಲ. ಪ್ರತಿಯೊಂದು ಕೆಲಸವನ್ನು ಸರಕಾರ ಮಾಡಬೇಕೆಂದು ನಾವು ಕಾಯಬಾರದು. ಗ್ರಾಮದ ಮೂಲಭೂತ ಅಗತ್ಯತೆಗಳನ್ನು ಗ್ರಾಮಸ್ಥರೇ ಪರಸ್ಪರ ಸಹಕಾರ ನೀಡುವುದರಿಂದ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯ” ಎಂದರು.
ಈ ಸಂದರ್ಭದಲ್ಲಿ ವಿವಿಧ ಕೆರೆ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಹೆಗ್ಗಡೆಯವರನ್ನು ಅಭಿನಂದಿಸುತ್ತಾ ತಮ್ಮ ಊರಿನಲ್ಲಿ ನಡೆದ ಕೆರೆ ಪುನಃಶ್ಚೇತನ ಕಾರ್ಯದ ಕುರಿತು ತಮ್ಮ ಸಂತಸವನ್ನು ಹಂಚಿಕೊಂಡರು. “ಪವಿತ್ರ ಕಾರ್ಯಗಳಿಗೆ ಬಳಸಲಾಗುತ್ತಿದ್ದ ಕೆರೆ ಪಾಳು ಬಿದ್ದು ಜಾಲಿ ಗಿಡಗಳು ಬೆಳೆದು ಬಳಕೆಗೆ ಯೋಗ್ಯವಾಗಿರಲಿಲ್ಲ. ಜೂಜು, ಕುಡಿತ ಮೊದಲಾದವುಗಳಿಗೆ ಬಳಸುವ ತಾಣವಾಗಿತ್ತು. ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ಹಮ್ಮಿಕೊಂಡ ಕೆರೆ ಅಭಿವೃದ್ಧಿ ಕಾಮಗಾರಿಯಿಂದ ನಮ್ಮ ಊರಿನ ಕೆರೆ ಮರುಜೀವ ಪಡೆದಿದೆ. ಇತ್ತೀಚಿನ ಮಳೆಯಿಂದ ಕೆರೆ ತುಂಬಿದೆ. ತಮ್ಮ ಈ ಕಾರ್ಯದಿಂದ ರೈತರ ಬದುಕು ಹಸನಾಗಿದೆ. ಊರಿಗೂ ನೀರಿನ ಬರ ನೀಗಿದೆ. ಅಂತರ್ಜಲ ಮಟ್ಟ ಹೆಚ್ಚಿದೆ. ಕೊಳಚೆ ತುಂಬಿದ ಕೆರೆಗಳು ಈಗ ಪರಿಶುದ್ಧ ಕೆರೆಗಳಾಗಿ ಬಳಕೆಗೆ ಯೋಗ್ಯ ಕೆರೆಗಳಾಗಿ ಪರಿವರ್ತನೆಗೊಂಡಿದೆ” ಎಂದು ಕೆರೆ ಸಮಿತಿ ಸದಸ್ಯರಾದ ಅಜ್ಜಂಪುರ ತಾಲೂಕಿನ ಗಡೀಹಳ್ಳಿ ಗ್ರಾಮದ ಜಿ.ಐ.ಮಂಜುನಾಥ್‍ರವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷೆ. ಡಾ. ಹೇಮಾವತಿ ಹೆಗ್ಗಡೆಯವರು ಉಪಸ್ಥಿತರಿದ್ದು, ಕೆರೆ ಸಮಿತಿ ಸದಸ್ಯರ ಅನಿಸಿಕೆಗಳನ್ನು ಆಲಿಸಿ ಸಂತೋಷ ವ್ಯಕ್ತಪಡಿಸಿದರು.
ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ|ಎಲ್.ಎಚ್.ಮಂಜುನಾಥ್‍ರವರು ಸಮಿತಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿ ರಾಜ್ಯಾದ್ಯಂತ 469 ಕೆರೆಗಳ ಪುನಃಶ್ಷೇತನ ನಡೆಸಲಾಗಿದೆ. ಈ ಕೆರೆಗಳು ಒತ್ತುವರಿ ಆಗದಂತೆ ಎಚ್ಚರಿಕೆ ವಹಿಸಿರಿ. ಕೆರೆಗಳ ಸ್ವಚ್ಛತೆಗೆ ಆದ್ಯತೆ ನೀಡಿ. ಕೆರೆಗಳ ಸುತ್ತ ಗಿಡಗಳನ್ನು ಬೆಳೆಸಿ ಅಭಿವೃದ್ಧಿ ಪಡಿಸಿರಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮುದಾಯ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣ, ಕೆರೆ ವಿಭಾಗದ ನಿರ್ದೇಶಕರಾದ ಶಿವಾನಂದ ಆಚಾರ್ಯ ಯೋಜನಾಧಿಕಾರಿಯವರಾದ ಯುವರಾಜ್ ಜೈನ್ ಹಾಗೂ ಕೆರೆ ಅಭಿಯಂತರ ಭರತ್ ಉಪಸ್ಥಿತರಿದ್ದರು.