ಮಂಗಳೂರು: ಉಳ್ಳಾಲ ನಗರಸಭೆಗೆ ತೆರಿಗೆ ಹಣವನ್ನು ಅಧಿಕಾರಿಗಳು ಪಾವತಿಸದೆ ವಂಚಿಸುತ್ತಿದ್ದು ನಾನಾ ರೀತಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು ತನ್ನ ಕ್ಷೇತ್ರ ಅನುದಾನವನ್ನು ಮಂಜೂರಾದರೂ ಕಾಮಗಾರಿ ವಿಳಂಬಿಸಿದ ನಗರಾಡಳಿತದ ವಿರುದ್ಧ ಆಡಳಿತ ಕಾಂಗ್ರೆಸ್ ಪಕ್ಷದ ಸದಸ್ಯರಾದ ರವಿಚಂದ್ರ ಗಟ್ಟಿ ಅರೆನಗ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.
ಉಳ್ಳಾಲ ನಗರಸಭೆ ಸದಸ್ಯ ರವಿಚಂದ್ರ ಯಾನೆ ಪಾನಕ ರವಿ ನಗರಾಡಳಿತದ ವಿರುದ್ಧವೇ ಅರೆನಗ್ನವಾಗಿ ಪ್ರತಿಭಟಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೀಡಿಯೊ ತುಣುಕುಗಳಲ್ಲಿ ನಗರಸಭೆ ಭ್ರಷ್ಟಾಚಾರದ ಬಗ್ಗೆ ರವಿ ಮಾತನಾಡಿದ್ದು ಕಟ್ಟಡಗಳಿಗೆ ಡೋರ್ ನಂಬರ್ ನೀಡಲು ನಗರಸಭೆ ಅಧ್ಯಕ್ಷರಾದ ಚಿತ್ರಕಲಾ ಉಪಾಧ್ಯಕ್ಷ ಅಯೂಬ್ ಮಂಚಿಲ ರವರು ನಲವತ್ತರಿಂದ ಐವತ್ತು ಸಾವಿರ ರೂಪಾಯಿಗಳನ್ನು ಪಡೆಯುತ್ತಾರೆಂದು ಆರೋಪಿಸಿದ್ದಾರೆ.
ಅಲ್ಲದೆ ನಗರದಾದ್ಯಂತ ಸಂಗ್ರಹಿಸಿದ ತೆರಿಗೆ ಹಣವನ್ನು ನಗರಸಭೆಗೆ ಕಟ್ಟದೆ ಜನರಿಗೆ ಸೈಬರ್ ನಲ್ಲಿ ಮುದ್ರಿತ ನಕಲಿ ರಶೀದಿ ನೀಡಿ ವಂಚಿಸುತ್ತಿದ್ದು ಇದರಲ್ಲಿ ತುಳಸಿ ಚಂದ್ರ ಮತ್ತು ಆರೋಗ್ಯ ಅಧಿಕಾರಿಗಳು ಶಾಮೀಲಾಗಿರುವುದಾಗಿ ಆರೋಪಿಸಿದ್ದಾರೆ.
ನಗರಸಭೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ವಾಗುತ್ತಿದ್ದರೂ ಹಿಂದಿನ ಪೌರಾಯುಕ್ತ ರಾಯಪ್ಪ ಅವರು ಕೇವಲ ಸ್ವಚ್ಛ ಭಾರತವೆಂದು ಕಸದ ಹಿಂದೆ ಬಿದ್ದಿದ್ದರೂ , ಇದೀಗ ನೂತನವಾಗಿ ಬಂದಿರುವ ಪೌರಾಯುಕ್ತರು ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಬೇಕೆಂದು ಒತ್ತಾಯಿಸಿದ್ದಾರೆ.
ರವಿ ಪ್ರತಿನಿಧಿಸುತ್ತಿರುವ ವಾರ್ಡ್ ಗೆ ಕಾಮಗಾರಿ ನಡೆಸಲು 14ನೇ ಹಣಕಾಸು ಯೋಜನೆಯಡಿ ಅನುದಾನ ಮಂಜೂರಾದರೂ ಕಾಮಗಾರಿ ಆರಂಭಿಸದ ಧೋರಣೆ ವಿರುದ್ಧ ಗುರುವಾರ ನಗರದ ಕಚೇರಿಯಲ್ಲಿ ಅರೆನಗ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.